ʼನನ್ನ ಬೂತ್ ನಾನು ಅಭ್ಯರ್ಥಿʼ ಕಾಂಗ್ರೆಸ್ ಪ್ರಚಾರ ಅಭಿಯಾನ

0

ಕೋಡಿಂಬಾಡಿ ಬೂತ್‌ನಲ್ಲಿ ಶಾಸಕರಿಂದ ಭರ್ಜರಿ ಮತಯಾಚನೆ, ಮನೆ ಮನೆ ಭೇಟಿ

ಪುತ್ತೂರು: ನನ್ನ ಬೂತ್ ನಾನು ಅಭ್ಯರ್ಥಿ ಎಂಬ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಅಭಿಯಾನವು ಎ.24 ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್‌ಗಳಲ್ಲಿ ಏಕಕಾಲದಲ್ಲಿ ಅಭಿಯಾನ ನಡೆಯಿತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ತನಕ ಅಭಿಯಾನ ನಡೆಯಿತು. ಪುತ್ತೂರು ಶಾಸಕ ಅಶೋಕ್ ರೈಯವರು ತನ್ನ ಸ್ವಗ್ರಾಮದ ಕೋಡಿಂಬಾಡಿ ಬೂತ್‌ನಲ್ಲಿ ಅಭಿಯಾನ ನಡೆಸಿದರು. ಬೂತ್‌ನ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಮತಯಾಚನೆ ನಡೆಸಿದರು.

ಮನೆ ಮಗನಾಗಿ ವೋಟು ಕೇಳಲು ಬಂದಿದ್ದೇನೆ: ಅಶೋಕ್ ಕುಮಾರ್ ರೈ
ನಿಮ್ಮ ಮನೆ ಮಗನಾಗಿ ನಿಮ್ಮ ಮನೆ ಬಾಗಿಲಿಗೆ ವೋಟು ಕೇಳಲು ಬಂದಿದ್ದೇನೆ, ಕಳೆದ ವಿಧಾನಸಭಾ ಚುನಾವಣೆಯ ವೇಳೆಯೂ ನಾನು ನಿಮ್ಮ ಬಳಿ ಬಂದಿದ್ದೆ ಆದರೆ ನನ್ನ ಬೂತ್‌ನ ಕೆಲವು ಭಾಗದಿಂದ ನನಗೆ ವೋಟು ಬಂದಿರಲಿಲ್ಲ. ನಾನು ಗ್ರಾಮದ ಯಾರಿಗೂ ಅನ್ಯಾಯ ಮಾಡಿಲ್ಲ, ತೊಂದರೆಯನ್ನು ಕೊಟ್ಟಿಲ್ಲ, ನನ್ನಿಂದಾಗುವ ಸಹಾಯವನ್ನು ಸ್ವಗ್ರಾಮಸ್ಥರಿಗೆ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ನನಗೆ ವೋಟು ಹಾಕದವರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಪೂಜಾರಿಗೆ ವೋಟು ಹಾಕುತ್ತಾರೆ ಎಂಬ ವಿಶ್ವಾಸ ಇದ್ದು ಅದಕ್ಕಾಗಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ ಆಶೀರ್ವದಿಸಿ ಎಂದು ಪ್ರತೀ ಮನೆಯಲ್ಲೂ ಮನವಿ ಮಾಡಿದರು.

ಗ್ಯಾರಂಟಿ ಎಲ್ಲರಿಗೂ ಬಂದಿದೆ
ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆ ಎಲ್ಲರ ಖಾತೆಯನ್ನೂ ಅಲುಗಾಡಿಸಿದೆ. ಝೀರೋ ಬ್ಯಾಲೆನ್ಸ್ ಅಕೌಂಟ್ ಮಾಡಿಸಿ ಹಣ ಹಾಕುತ್ತೇವೆ ಎಂದು ಬಡವರಲ್ಲಿ ಆಸೆ ಹುಟ್ಟಿಸಿದವರು ಯಾರ ಖಾತೆಗೂ ಒಂದು ರೂಪಾಯಿ ಹಾಕಲಿಲ್ಲ. ಆದರೆ ಅದೇ ಖಾತೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಣವನ್ನು ಜಮೆ ಮಾಡುವ ಮೂಲಕ ಬಡವರ ಮನೆಯನ್ನು ಬೆಳಗಿಸಿದೆ. ಪಕ್ಷ ಭೇದವಿಲ್ಲದೆ ಎಲ್ಲರೂ ಅರ್ಜಿ ಹಾಕಿ ಸರಕಾರದ ಗ್ಯಾರಂಟಿ ಯೋಜನೆಯನ್ನು ಪಡೆದುಕೊಂಡಿರುವುದು ಸಂತೋಷದ ವಿಚಾರವಾಗಿದೆ. ಸರಕಾರದಿಂದ ಸಹಾಯ ಪಡೆದುಕೊಂಡ ಪ್ರತಿಯೊಂದು ಕುಟುಂಬವೂ ಈ ಬಾರಿ ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ ಎಂಬ ಪೂರ್ಣ ನಂಬಿಕೆಯೂ ನನಗಿದೆ ಎಂದು ಶಾಸಕರು ಹೇಳಿದರು.

ದ್ವೇಷದ ರಾಜಕೀಯ ನಮ್ಮಲ್ಲಿಲ್ಲ
ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಅದರ ಅಗತ್ಯವೂ ನಮಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್‌ಆಗಿದ್ದು ಈ ದೇಶದ ಪ್ರತಿಯೊಬ್ಬ ನಾಗಕರಿಕನೂ ಸಂತೃಪ್ತಿಯ ಜೀವನ ನಡೆಸಬೇಕು ಎಂಬುದೇ ಕಾಂಗ್ರೆಸ್ ಉದ್ದೇಶವಾಗಿದೆ. ದ್ವೇಷದ ರಾಜಕೀಯ ಕಾಂಗ್ರೆಸ್ ಮಾಡುತ್ತಿದ್ದರೆ ಇಂದು ಪ್ರತಿಪಕ್ಷವೇ ಇರುತ್ತಿರಲಿಲ್ಲ ಎಂದು ಹೇಳಿದ ಶಾಸಕರು ನಕಲಿಗಳ ಮಾತಿಗೆ ಯಾರೂ ಮರುಳಾಗಬಾರದು ಎಂದು ಹೇಳಿದರು.

ಯುವಕರ ಕೈಗೆ ಉದ್ಯೋಗ ಕೊಡಬೇಕಿದೆ
ಯುವಕರನ್ನು ರಾಜಕೀಯದವರು ತಮ್ಮ ಬೇಳೆ ಬೇಯಿಸಲು ದುರ್ಬಳಕೆ ಮಾಡುತ್ತಾರೆ. ಪರಸ್ಪರ ಎತ್ತಿಕಟ್ಟೆ ತಮ್ಮ ರಾಜಕೀಯ ಲಭಗಳಿಸಿದ ಬಳಿಕ ಅವರನ್ನು ತುಳಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಮಕ್ಕಳು ಕೆಟ್ಟದಾರಿಗೆ ಹೋಗದಂತೆ ಪೋಷಕರು ಎಚ್ಚರವಹಿಸಬೇಕು. ಕೇಸು , ಕೋರ್ಟು ಮೈಮೇಲೆ ಮೆತ್ತಿಕೊಂಡು ಜೀವನ ಹಾಳುಮಾಡದಂತೆ ಎಚ್ಚರವಹಿಸಿ . ಯುವಕರ ಕೈಗೆ ಉದ್ಯೋಗ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು ಎಷ್ಟು ಉದ್ಯೋಗ ಕೊಟ್ಟಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ಕೇಂದ್ರ ಮೋದಿ ಸರಕಾರದ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಗ್ಯಾರಂಟಿಯನ್ನು ಬಿಟ್ಟಿ ಭಾಗ್ಯ ಎಂದು ತಮಾಷೆ ಮಾಡಬೇಡಿ
ಸರಕಾರ ಬಡವರಿಗೆ ಗ್ಯಾರಂಟಿ ಯೋಜನೆಯನ್ನು ನೀಡುತ್ತಿದೆ ಇದನ್ನು ಸ್ವೀಕರಿಸಿದ ಬಡವರನ್ನು ಹಿಯಾಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಗ್ಯಾರಂಟಿ ಹಣದಿಂದ ಎಷ್ಟೋ ಕುಟುಂಬಗಳು ನೆಮ್ಮದಿಯ ಜೀವನ ಪಡೆದುಕೊಳ್ಳುವಂತಾಗಿದೆ ಅವರ ಬಡತನವನ್ನು ಹಿಯಾಳಿಸುವ ಕೆಲಸವನ್ನು ಬಿಜೆಪಿಯವರು ಮಾಡುವುದನ್ನು ನಿಲ್ಲಿಸಬೇಕುಎಂದು ಮನವಿ ಮಾಡಿದರು.

ಪಕ್ಷ ಭೇದವಿಲ್ಲದೆ ಕೆಲಸ ಮಾಡಿದ್ದೇನೆ
ನಾನು ಶಾಸಕನಾದ ಬಳಿಕ ಪಕ್ಷ ಬೇದವಿಲ್ಲದೆ ಎಲ್ಲರ ಕೆಲಸವನ್ನು ಮಾಡಿದ್ದೇನೆ, 94 ಸಿ, ಸಿಸಿ,ಅಕ್ರಮ ಸಕ್ರಮ ಕಡತಗಳನ್ನು ಯಾವುದೇ ಭೃಷ್ಟಾಚಾರವಿಲ್ಲದೆ ವಿಲೇವಾರಿ ಮಾಡಿದ್ದೇನೆ. ಜನರ ಕಣ್ಣಿಗೆ ಮಣ್ಣು ಹಾಕುವ ಕೆಲಸವನ್ನು ಮಾಡಿಲ್ಲ, ಮುಂದೆಯೂ ನಾನು ಕ್ಷೇತ್ರದ ಪ್ರತೀಯೊಬ್ಬರ ಶಾಸಕನಾಗಿ ಕೆಲಸವನ್ನು ಮಾಡಲಿದ್ದೇನೆ ಎಂದು ಹೇಳಿದ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ವಲಯಾಧ್ಯಕ್ಷರಾದ ಮೋನಪ್ಪ ಗೌಡ, ಬೂತ್ ಅಧ್ಯಕ್ಷರಾದ ಪ್ರಭಾಕರ ಸಾಮಾನಿ, ಯತೀಶ್ ಶೆಟ್ಟಿ, ವಲಯ ಕಾರ್ಯದರ್ಶಿ ಯೋಗೀಶ್ ಸಾಮಾನಿ, ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ನಡುಮನೆ, ಗ್ರಾಪಂ ಸದಸ್ಯೆ ಗೀತಾ, ವಿಕ್ರಂ ಶೆಟ್ಟಿ, ದಾಮೋದರ ಶೆಟ್ಟಿ, ಪ್ರಮೋದ್ ಸಾಮಾನಿ, ವಿಜಯಪೂಜಾರಿ, ದೇವದಾಸ್ ಗೌಡ, ಶಿವಪ್ರಸಾದ್ ರಐ, ಬಾಲಕೃಷ್ಣ ಶೆಟ್ಟಿ, ಪ್ರಜಿತ್ ಶೆಟ್ಟಿ, ಬಾಬು ಚೀಮುಳ್ಳು, ರಾಮ ಚೀಮುಳ್ಳು, ಸಂತೋಷ್ ರೈ ಕೆದಿಕಂಡೆ, ಪದ್ಮಲತಾ ಜಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here