ಪಡ್ಡಾಯೂರಿನಲ್ಲಿ ‘ವರುಣ್ಸ್ ಬ್ಯಾಡ್ಮಿಂಟನ್ ಅಕಾಡೆಮಿ’ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

0

ಪುತ್ತೂರು: ಶಟಲ್ ಬ್ಯಾಡ್ಮಿಂಟನ್ ಆಸಕ್ತರಿಗಾಗಿ ಉತ್ತಮ ತರಬೇತಿ ನೀಡುವ ನಿಟ್ಟಿನಲ್ಲಿ ನೆಹರುನಗರದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಸಮೀಪ ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣಗೊಂಡಿರುವ ವರುಣ್ಸ್ ಶಟಲ್ ಬ್ಯಾಡ್ಮಿಂಟನ್ ಅಕಾಡೆಮಿ ಒಳಾಂಗಣ ಕ್ರೀಡಾಂಗಣವು ಎ.29ರಂದು ಉದ್ಘಾಟನೆಗೊಂಡಿತು.

ನೂತನ ಸಂಸ್ಥೆಯನ್ನು ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವ್ಯಕ್ತಿ ನಿರ್ಮಾಣದ ಜೊತೆ ರಾಷ್ಟ್ರದ ನಿರ್ಮಾಣ ಮಾಡುವ ಕಾರ್ಯವು ಪಡ್ಡಾಯೂರಿನಿಂದ ಪ್ರಾರಂಭವಾಗಿದೆ. ಕ್ರೀಡೆಯ ಮೂಲಕ ಜಗತ್ತಿಗೆ ಪರಿಚಯಿಸಿಕೊಳ್ಳಲು ವರುಣ್ಸ್ ಬ್ಯಾಡ್ಮಿಂಟನ್ ಅಕಾಡೆಮಿಯ ಮೂಲಕ ಸಹಕಾರಿಯಾಗಲಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕತೆಯ ಜೊತೆ ವಿವಿಧ ಕ್ಷೇತ್ರದ ಸಾಧನೆಗೆ ದಾರಿ ಯುವಕರಿಗೆ ಆಕರ್ಷಣೆಯ ಕೆಂದ್ರವಾಗಿ ಪ್ರೇರಣೆ ನೀಡಲಿದೆ. ಬಹುದೊಡ್ಡ ಸವಾಲು ಸ್ವೀಕರಿಸಿ ಅಕಾಡೆಮಿ ಪ್ರಾರಂಭಿಸಿದ್ದು ಜನರ ಪ್ರೋತ್ಸಾಹ ಅಗತ್ಯ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ತರಬೇತಿ ಪಡೆದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ರಾಷ್ಟ್ರದ ಧ್ವಜವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಾಡಿಸುವಂತ ಕೇಂದ್ರವಾಗಲಿ ಬೆಳೆಯಲಿ ಎಂದು ಹಾರೈಸಿದರು.


ಮುಖ್ಯ ಅತಿಥಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿನ ಅಭಿವೃದ್ಧಿಗೆ ವರುಣ್ಸ್ ಬ್ಯಾಡ್ಮಿಂಟನ್ ಅಕಾಡೆಮಿಯು ಮತ್ತೊಂದು ಗರಿಯಾಗಿದೆ. ಉದ್ಯಮ, ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು, ಅಕಾಡೆಮಿಗಳು, ಪ್ರವಾಸೋದ್ಯಮಗಳು ಜೊತೆಯಾದಾಗ ಪುತ್ತೂರಿನ ಅಭಿವೃದ್ಧಿ ಸಾಧ್ಯ. ನಮ್ಮ ಊರಿನಲ್ಲಿ ನಡೆಯುವ ಅಭಿವೃದ್ಧಿಯ ಕಾರ್ಯಗಳಿಗೆ ನಾವೂ ಸಹಕರಿಸಬೇಕು. ಅಕಾಡೆಮಿಯ ಜೊತೆಗೆ ಶಿಕ್ಷಣ ಸಂಸ್ಥೆಗಳು ಕೈಜೋಡಿಸುವ ಸ್ಪೂರ್ತಿ ನೀಡಬೇಕು. ಕ್ರೀಡಾಪ್ರತಿಭೆಗಳಿಗೆ ಆರ್ಥಿಕ ಸಹಕಾರ ನೀಡಿದಾಗ ಮಾತ್ರ ಬೆಳೆಯಲು ಸಾಧ್ಯ. ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಬೆಳೆಯಲು ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸುವ ಕೆಲಸ ಪೋಷಕರಿಂದಾಗಬೇಕು. ಶಾಸಕರು ಪುತ್ತೂರಿಗೆ ಕೊಡುಗೆ ನೀಡಿದ ನೂತನ ಅಕಾಡೆಮಿಗೆ ನಮ್ಮಿಂದ ಪೂರ್ಣ ಸಹಕಾರ ನೀಡಲಾಗುವುದು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಮತ್ತೊಂಡು ಶಟಲ್ ಬ್ಯಾಡ್ಮಿಂಟನ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಿರುದಕ್ಕೆ ಅಭಿನಂದನೆ ಸಲ್ಲಿಸಿದರು. ಸಂಸ್ಥೆಯ ಮುಖ್ಯಸ್ಥರಿಗೆ ಇನ್ನಷ್ಟು ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುವ ಯೋಜನೆಯಿದ್ದು ಅದೆಲ್ಲವೂ ಈಡೇರಲಿ. ದೊಡ್ಡ ಮಟ್ಡದ ಈಜುಕೊಳ ಪುತ್ತೂರಿನಲ್ಲಿ ನಿರ್ಮಾಣವಾಗಲಿ. ಉತ್ತಮ ತರಬೇತಿಯ ಮೂಲಕ ಯುವಕರನ್ನು ಆಕರ್ಷಿಸುವ ಕೇಂದ್ರವಾಗಿ ಬೆಳೆಯಲಿ ಎಂದರು.

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾತನಾಡಿ, ದೈನಂದಿನ ಒತ್ತಡ ಕೆಲಸಗಳಿಂದ ಮನಸ್ಸು ಹಾಗೂ ದೇಹದ ಆರೋಗ್ಯ ಕಾಪಾಡುವಲ್ಲಿ ಶಟಲ್ ಬ್ಯಾಡ್ಮಿಂಟನ್ ಉತ್ತಮ ಆಟವಾಗಿದೆ. ದೈನಂದಿನ ಚಟುವಟಿಕೆಗಳ ಜೊತೆಗೆ ಕ್ರೀಡೆಗೂ ಸಮಯ ಮೀಸಲಿಡಬೇಕು. ನೂತನ ಅಕಾಡೆಮಿಯನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು. ಊರಿನ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಲಿ ಎಂದರು. ನಮ್ಮ ಸಿಬ್ಬಂದಿಯಾಗಿದ್ದು ನಿವೃತ್ತ ಜೀವನದಲ್ಲಿಯೂ ಸಮಾಜಮುಖಿಯಾಗಿ ಪ್ರವೃತ್ತಿಯನ್ನು ಮುಂದುವರಿಸುತ್ತಾ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಮಾತನಾಡಿ, ಬ್ಯಾಡ್ಮಿಂಟನ್ ಅಕಾಡೆಮಿಯಂತ ದೊಡ್ಡ ಸಂಸ್ಥೆಯನ್ನು ಸಾರ್ವಜನಿಕ ಸಂಸ್ಥೆಗಳ ಮೂಲಕ ನಿರ್ಮಿಸುವುದು ಸಾಮಾನ್ಯ. ಆದರೆ ತನ್ನ ಸ್ವ ಇಷ್ಷೆಯಿಂದ ಏಕ ವ್ಯಕ್ತಿಯಾಗಿ ಆಕಾಡೆಮಿ, ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿರುವುದು ಇದೇ ಪ್ರಥಮವಾಗಿದೆ. ಇಂತಹ ಅವರ ಸಾಧನೆ ಅಭಿನಂದನೀಯ. ಸುಸಜ್ಜಿತ ಕ್ರೀಡಾಂಗಣ ಲೋಕಾರ್ಪಣೆಗೊಂಡಿದ್ದು ಉತ್ತಮ ಕ್ರೀಡೆಗಳು ಇಲ್ಲಿ ನಡೆಯಲಿ ಎಂದರು.

ಸುದಾನ ವಸತಿಯುತ ಶಾಲಾ ಸಂಚಾಲಕ ರೆ.ಫಾ ವಿಜಯ ಹಾರ್ವಿನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯ, ಸಾಮರ್ಥ್ಯ ಮುಖ್ಯ. ಮಕ್ಕಳನ್ನು ಒತ್ತಡದ ಜೀವನದಿಂದ ಹೊರತರಬೇಕು. ಅವರಿಗೆ ದೈಹಿಕ ವ್ಯಾಯಾಮ ನೀಡಬೇಕು. ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸಬೇಕು. ದೈಹಿಕ ಆರೋಗ್ಯಕ್ಕೆ ಒತ್ತು ನೀಡಿದಾಗ ಮಾನಸಿಕವಾಗಿ ಬೆಳೆಯಲಿದ್ದಾರೆ. ಇದಕ್ಕೆ ಇಂತಹ ಅಕಾಡೆಮಿಗಳು ಸಹಕಾರಿಯಾಗಲಿದೆ. ವಿದ್ಯೆ ಹಾಗೂ ಕ್ರೀಡೆ ಜತೆಯಾಗಿ ಬೆಳೆಯಲು ಖಾಸಗಿಯಾಗಿ ಸರಕಾರದ ಜೊತೆ ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರ ಸಭೆ ನಿಕಟಪೂರ್ವ ಅಧ್ಯಕ್ಷರು, ಪಡ್ಡಾಯೂರು ರುದ್ರಾಂಡಿ, ನೇತ್ರಾಂಡಿ ದೈವಸ್ಥಾನದ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಪುತ್ತೂರು ನಗರ ಸಭೆಯು ದಿನೇ ದಿನೇ ಬೆಳೆಯುತ್ತಿದೆ. ಮನೆಗಳು, ವಾಣಿಜ್ಯ ಕಟ್ಟಡಗಳು ಬೆಳೆಯುತ್ತಿದೆ. ಬೆಳೆಯುತ್ತಿರುವ ನಗರದಲ್ಲಿ ಪಡ್ಡಾಯೂರು ಹೊರತಾಗಿಲ್ಲ. ಬೆಳೆಯುತ್ತಿರುವ ನಗರ ಸಭೆ ಪೂರಕವಾಗಿ ವರುಣ್ ಬ್ಯಾಡ್ಮಿಂಟನ್ ಅಕಾಡೆಮಿ ಲೋಕಾರ್ಪಣೆಗೊಂಡಿರುವುದನ್ನು ಅಭಿನಂದಿಸಿದ ಅವರು ಅಕಾಡೆಮಿ ಮುಖ್ಯಸ್ಥರ ಮುಂದಿನ ಯೋಜನೆಗಳಗೆ ನಗರ ಸಭೆ ಕೈಜೋಡಿಸಲಿದೆ ಎಂದರು.

ಅಕಾಡೆಮಿಯ ಮುಖ್ಯಸ್ಥ ಹರಿಶ್ಚಂದ್ರ ಮಾತನಾಡಿ, ಇಪ್ಪತ್ತು ವರ್ಷಗಳ ಹಿಂದೆಯೇ ತನ್ನ ಇಬ್ಬರು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ಮಕ್ಕಳನ್ನು ತೊಡಗಿಸಿ ಕೊಳ್ಳಲು ಸಹಕರಿಸಿದ ಆಸ್ಕರ್ ಆನಂದ್, ಗಿರೀಶ್‌ರವರಿಂದ ಅಕಾಡೆಮಿ ಪ್ರಾರಂಭಿಸುವಲ್ಲಿಯೂ ಅವರ ಪ್ರೇರಣೆಯಿದೆ. ಒಂದು ಕ್ರೀಡಾಂಗಣ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು ಇನ್ನೂ ಒಂದು ಅಂಕಣ ನಿರ್ಮಿಸುವ ಯೋಜನೆಯಿದೆ. ಜೊತೆಗೆ ವಾಲಿಬಾಲ್, ಕ್ರಿಕೆಟ್, ಈಜು, ಟೆನ್ನಿಸ್ ತರಬೇತಿಗಳನ್ನು ಪ್ರಾರಂಭಿಸುವ ಯೋಜನೆಯಿದೆ. ವ್ಯಾಪಾರದ ಉದ್ದೇಶದಿಂದ ಅಕಾಡೆಮಿ ಪ್ರಾರಂಭಿಸಿಲ್ಲ. ತನ್ನ ಪುತ್ರನನ್ನು ಅಂತಾರಾಷ್ಟ್ರೀಯ ಕ್ರೀಡಾಪಟುವನ್ನಾಗಿ ಮಾಡುವ ನನ್ನ ಕನಸು ಈಡೇರಲಿಲ್ಲ. ಹೀಗಾಗಿ ಅಕಾಡೆಮಿ ಪ್ರಾರಂಭಿಸಿ, ಇಲ್ಲಿ ತರಬೇತಿ ಪಡೆದು, ಉತ್ತಮ ಕ್ರೀಡಾಪಡುವಾಗಿ ಬೆಳೆದು ಅಂತಾರಾಷ್ಟ್ರೀಯ ಪ್ರತಿಭೆಗಳಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಅಕಾಡೆಮಿ ಪ್ರಾರಂಭಿಸಲಾಗಿದೆ ಎಂದರು.

ಬ್ಯಾಡ್ಮಿಂಟನ್ ಜೂನಿಯರ್ ವಿಶ್ವ ಚಾಂಪಿಯನ್ ಹಾಗೂ ಭಾರತ ತಂಡದ ನಾಯಕ ಆಯುಷ್ ಶೆಟ್ಟಿಯವರ ತರಬೇತುದಾರರು, ಮಂಗಳೂರು ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷರಾಗಿರುವ ಚೇತನ್ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ:
ಒಳಾಂಗಣ ಕ್ರೀಡಾಂಗಣದ ಕಟ್ಟಡದ ವಿನ್ಯಾಸಗಾರ ಆರ್ಕಿಟೆಕ್ಟ್ ಸಚ್ಚಿದಾನಂದ, ಇಂಜಿನಿಯರ್ ಶಿವರಾಮ ಮತಾವು, ಇಂಜಿನಿಯರ್ ಜಯಪ್ರಕಾಶ್, ಮೇಲ್ವಿಚಾವಣಿ ನಿರ್ಮಿಸಿದ ಮಾಣಿ ವರ್ಧಮಾನ ಟ್ರೇಡರ್ಸ್ ಸಹೋದರು, ಅಂಕಣ ನಿರ್ಮಿಸಿದ ವೆಂಕಟೇಶ್ವರ ಸಾ ಮಿಲ್ ಮ್ಹಾಲಕ ವಿಶ್ವನಾಥ ನಾಯಕ್, ಇಲೆಕ್ಟ್ರಿಕ್ ವಾಸಪ್ಪ ಗೌಡ ಮೂವಪ್ಪುರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ನಿನಾದ ಪ್ರಾರ್ಥಿಸಿದರು. ಪ್ರಮೋದ್ ಸ್ವಾಗತಿಸಿದರು. ಆನಂದ ಗೌಡ ಮೂವಪ್ಪು, ಧರ್ಮಲತ, ವರುಣ್ ಮೂವಪ್ಪು, ಬಾಲಕೃಷ್ಣ ಗೌಡ ಮೂವಪ್ಪು, ಕುಶಾಲಪ್ಪ ಗೌಡ ನೆಲಪ್ಪಾಲು ಅತಿಥಿಗಳಿಗೆ ಶಾಲು ಹಾಕಿ ಹೂ ನೀಡಿ ಸ್ವಾಗತಿಸಿದರು. ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿ ರಮೇಶ್ ಕಾರ್ಯಕ್ರಮ ನಿರೂಪಿಸಿ, ಶಿವರಾಮ ಮತಾವು ವಂದಿಸಿದರು.

LEAVE A REPLY

Please enter your comment!
Please enter your name here