ಉಪ್ಪಿನಂಗಡಿ: ಕಳೆದ ಎ.26ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲೆಂದೇ ಉಪ್ಪಿನಂಗಡಿ ಗಾಂಧಿಪಾರ್ಕ್‌ನ ವ್ಯಕ್ತಿಯೋರ್ವರು ತನ್ನ ಕುಟುಂಬದೊಂದಿಗೆ ವಿದೇಶದಿಂದ ಆಗಮಿಸಿ, ಮತ ಚಲಾಯಿಸಿ ಮರುದಿವಸ ವಿದೇಶಕ್ಕೆ ತೆರಳಿದ್ದು, ಈ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮತದಾನವೆಂಬುದು ನಮ್ಮ ಹಕ್ಕು. ಆದರೆ ಕೆಲವರು ಮತದಾನವನ್ನು ನಿರ್ಲಕ್ಷ್ಯ ಮಾಡುವುದು. ಆ ದಿನವೇ ಪ್ರವಾಸ ಸೇರಿದಂತೆ ಇನ್ನಿತರ ಕೆಲದಲ್ಲಿ ತೊಡಗಿಸಿಕೊಂಡು ಮತದಾನವನ್ನು ತಪ್ಪಿಸುವುದು. ಪಕ್ಷದ ಮುಖಂಡರಲ್ಲಿ ವಾಹನ ಕಳುಹಿಸಿದರೆ ಮತದಾನಕ್ಕೆ ಬರುತ್ತೇವೆ ಎನ್ನುವವರ ಮಧ್ಯೆ ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಉಪ್ಪಿನಂಗಡಿ ಗ್ರಾ.ಪಂ.ನ ಒಂದನೇ ವಾರ್ಡ್‌ನ ನಿವಾಸಿ ಪ್ರಕಾಶ್ ಮಸ್ಕರ‍್ಹೇನಸ್ ಅವರು ಎ.26ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲೆಂದೇ ಕುಟುಂಬ ಸಮೇತರಾಗಿ ಸ್ವದೇಶಕ್ಕೆ ಆಗಮಿಸಿ, ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಚಲಾಯಿಸಿ, ತನ್ನ ಕುಟುಂಬದೊಂದಿಗೆ ಎ.27ರಂದು ಮತ್ತೆ ವಿದೇಶಕ್ಕೆ ತೆರಳಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಬಂದು ತನ್ನ ಹಕ್ಕನ್ನು ಚಲಾಯಿಸಿದ ಇವರ ಈ ನಡೆ ಮಾದರಿಯೆನಿಸಿದೆ.