ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ರಸ್ತೆ ಬ್ಲಾಕ್-ಉಪ್ಪಿನಂಗಡಿಗೆ ಪುತ್ತೂರು ಎಸಿ ಭೇಟಿ:ಮೇ 15ರೊಳಗೆ ಸರ್ವಿಸ್ ರಸ್ತೆ, ಒಳಚರಂಡಿ ವ್ಯವಸ್ಥೆ ಪೂರ್ಣಗೊಳಿಸಲು ಸೂಚನೆ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ  ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಯ ನಿರ್ಮಾಣಕ್ಕಾಗಿ ನಿರ್ಮಿಸಲಾದ ಅಂಡರ್ ಪಾಸ್‌ನಲ್ಲಿ  ಪದೇ ಪದೇ ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿರುವ ವಿದ್ಯಾಮಾನದ ಬಗ್ಗೆ ಪತ್ರಿಕಾ ವರದಿ ಪ್ರಕಟವಾದ ಬೆನ್ನಲ್ಲೇ ಗುರುವಾರದಂದು ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ  ಸ್ಥಳಕ್ಕೆ ಭೇಟಿ ನೀಡಿ ಮೇ 15 ರ ಒಳಗಾಗಿ ಸರ್ವಿಸ್ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ಸಂಬಂಧಿಸಿ  ಉಪ್ಪಿನಂಗಡಿಯಲ್ಲಿ ಹೆದ್ದಾರಿಯ  ಮಧ್ಯ ಭಾಗದಲ್ಲಿ ಎತ್ತರಿಸಿದ ರಸ್ತೆಯ ನಿರ್ಮಾಣ ಕಾರ್ಯವೂ  ಭರದಿಂದ ನಡೆಯುತ್ತಿದ್ದು, ಈ ಮಧ್ಯೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ  ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಅಂಡರ್  ಪಾಸ್ ವ್ಯವಸ್ಥೆಯನ್ನು  ಕಲ್ಪಿಸಲಾಗಿದೆ. ಇಲ್ಲಿ ಏಕ ಕಾಲಕ್ಕೆ  ಘನವಾಹನಗಳ ಆಗಮನ ಮತ್ತು ನಿರ್ಗಮನವು  ಸಮಸ್ಯಾತ್ಮಕವಾಗಿದ್ದರಿಂದ ದಿನದ ಅನೇಕ ಬಾರಿ ವಾಹನ ದಟ್ಟಣೆಯುಂಟಾಗಿ ವಾಹನಗಳು ಸಂಚರಿಸಲಾರದೆ ಎಲ್ಲೆಡೆ ಬ್ಲಾಕ್ ಆಗುತ್ತಿರುತ್ತಿತ್ತು. ಬುಧವಾರ ಸಂಭವಿಸಿದ ವಾಹನ ದಟ್ಟಣೆ ಸಮಸ್ಯೆಯ ಬಗ್ಗೆ ಸಚಿತ್ರ ವರದಿಯು ಗುರುವಾರದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಾತ್ರವಲ್ಲದೆ ಹೆದ್ದಾರಿಯಲ್ಲಿನ ಎತ್ತರಿಸಿದ ರಸ್ತೆಯ ನಿರ್ಮಾಣದ ನಿಮಿತ್ತ ಹೆದ್ದಾರಿಯ ಇಕ್ಕೆಲಗಳಲ್ಲಿಯೂ  ತ್ವರಿತವಾಗಿ ಸರ್ವೀಸ್ ರಸ್ತೆಯನ್ನು  ನಿರ್ಮಿಸಿ ಬಳಕೆಗೆ ಬಿಟ್ಟು ಕೊಟ್ಟಲ್ಲಿ ಈ ಸಮಸ್ಯೆ  ನಿವಾರಣೆಯಾಗಲಿದೆ ಎಂದು ಪರಿಹಾರವನ್ನೂ  ಸೂಚಿಸಲಾಗಿತ್ತು. 

ಸಮಸ್ಯೆಯ ಗಂಭೀರತೆಯನ್ನು  ಅರ್ಥೈಸಿದ  ದ.ಕ ಜಿಲ್ಲಾಧಿಕಾರಿಯವರು, ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಅವರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಗುರುವಾರದಂದು ಸಾಯಂಕಾಲ ಇಲಾಖಾಧಿಕಾರಿಗಳೊಂದಿಗೆ ಉಪ್ಪಿನಂಗಡಿಗೆ ಭೇಟಿ ನೀಡಿದ  ಜುಬಿನ್ ಮೊಹಾಪಾತ್ರ, ಎತ್ತರಿಸಿದ ರಸ್ತೆಯ ಎರಡೂ ಪಾರ್ಶ್ವದಲ್ಲಿಯೂ ಮೇ 10 ರ ಒಳಗಾಗಿ  ಸರ್ವೀಸ್ ರಸ್ತೆಯ ಕಾರ್ಯವನ್ನು ಪೂರ್ಣಗೊಳಿಸಬೇಕೆಂದೂ, ಈ ಭಾಗದಲ್ಲಿ ನಿರ್ಮಿಸಬೇಕಾಗಿರುವ ದೊಡ್ಡ ಗಾತ್ರದ ಚರಂಡಿಯ ಕಾಮಗಾರಿಯನ್ನು ಮೇ 15 ರ ಒಳಗಾಗಿ ಪೂರ್ಣಗೊಳಿಸಿ ಸಮಸ್ಯೆ  ಕಾಡದಂತೆ ಕ್ರಮ ಕೈಗೊಳ್ಳಬೇಕೆಂದು ಎಂಜಿನಿಯರ್‌ಗಳಿಗೆ ನಿರ್ದೇಶನವಿತ್ತರು. ಕಾಮಗಾರಿ ಸ್ಥಳದಲ್ಲಿ ಇರುವ ವಿದ್ಯುತ್ ಕಂಬಗಳ ತೆರವಿಗೆ  ಮೆಸ್ಕಾಂ ಅಧಿಕಾರಿಗಳಿಗೂ ಆದೇಶವಿತ್ತರು.

ಈ ಸಂದರ್ಭ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್, ಸದಸ್ಯರಾದ ಕೈಲಾರ್ ರಾಜಗೋಪಾಲ ಭಟ್, ನಿತ್ಯಾನಂದ, ಝಕಾರಿಯಾ ಕೊಡಿಪ್ಪಾಡಿ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ  ರಶೀದ್ ಮಠ, ಕೆಎನ್‌ಆರ್ ಗುತ್ತಿಗೆದಾರ  ಸಂಸ್ಥೆಯ ಎಂಜಿನಿಯರ್‌ಗಳಾದ ರಘುನಾಥ ರೆಡ್ಡಿ,  ಮಹೇಂದ್ರ ಸಿಂಗ್, ಕನ್ಸಲ್ಟೆಂಟ್ ಎಂಜಿನಿಯರ್‌ಗಳಾದ ವಿವೇಕಾನಂದ,  ಜಗನ್ನಾಥ್  ಪಟ್ನಾಯಕ್, ಗ್ರಾ.ಪಂ.  ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here