ಕಡಬ: ಕೊಂಬಾರು ಗ್ರಾಮದ ನಿವಾಸಿ ಕುಮಾರಿ ಅನನ್ಯ ಪಿ.ಕೆ ಇವರು “ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ” ದಿಂದ 2018-2024 ಸಾಲಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಪದವಿ ಪ್ರದಾನ ಹಾಗೂ ಪ್ರಮಾಣ ವಚನ ಕಾರ್ಯಕ್ರಮ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಬೆಂಗಳೂರಿನ ಡಾ. ಬಿ.ಆರ್ ಅಂಬೇಡ್ಕರ್ ವೈದ್ಯಕೀಯ ವಿದ್ಯಾಲಯದಲ್ಲಿ ಇವರು ಎಂ.ಬಿ.ಬಿ.ಎಸ್ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಕಡಬ ತಾಲೂಕಿನ ಕೊಂಬಾರು ಗ್ರಾಮ ನಿವಾಸಿಯಾಗಿರುವ ಇವರು ಡಾ. ಕಲಾವತಿ ಪಿ.ಟಿ ಹಾಗೂ ಹೈಕೋರ್ಟಿನ ವಕೀಲರಾದ ಕೆ. ಎನ್. ಪ್ರವೀಣ ಕುಮಾರ, ಕುಮಾರಪುರ ದಂಪತಿಗಳ ಪುತ್ರಿ. ಹೈ ಸ್ಕೂಲ್ ವಿಧ್ಯಾರ್ಥಿನಿಯಾಗಿದ್ದಾಗ ಅಸ್ಸಾಮ್ ನಲ್ಲಿ ನಡೆದ ಅಂತರ್ಶಾಲ ರಾಷ್ಟ್ರೀಯ ಮಟ್ಟದ ಚೆಸ್ ಟೂರ್ನಿಯಲ್ಲಿ ದಕ್ಷಿಣ ಪ್ರಾಂತ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.
ಹಾಗೆಯೇ ಸ್ವಚ್ಛ ಭಾರತ ಅಭಿಯಾನದಡಿ ನರೇಂದ್ರ ಮೋದಿ ಸರಕಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಆಂಗ್ಲ ಕವನ ಸ್ಪರ್ಧೆಯಲ್ಲಿ ಇವರು ಬರೆದ “ಗಾರ್ಬೇಜ್” ಕವನಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ, ಫಲಕ ಹಾಗೂ ನಗದು ಬಹುಮಾನವೂ ದೊರಕಿತ್ತು. ಕುಕ್ಕೇ ಸುಬ್ರಹ್ಮಣ್ಯದ ಅಂದಿನ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ದಿವಂಗತ ಶ್ರೀ ಕೆ. ನೋಣಪ್ಪಗೌಡ ಹಾಗೂ ದಿವಂಗತ ಎನ್.ಜಿ.ಗಂಗಮ್ಮ ಇವರ ಮೊಮ್ಮಗಳು. ತಂದೆಯೊಂದಿಗೆ ‘ಗಂಗಾ ಪ್ರತಿಷ್ಠಾನ’ ಎಂಬ ಸಂಸ್ಥೆಯ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಹಾಯಧನ ನೀಡುವ ಸಾಮಾಜಿಕ, ಶೈಕ್ಷಣಿಕ ಕಾರ್ಯದಲ್ಲಿ, ತಂಗಿ ಸಿಂಚನಾಳೊಂದಿಗೆ ಸಕ್ರಿಯರಾಗಿರುವ ಇವರು ಕಳೆದ ವರ್ಷ ತಮಗೆ ಸಿಕ್ಕ ಮೊದಲ ಸ್ಟೈಪೆಂಡರಿ ವೇತನ 50,000/- ಹಣವನ್ನು ಕೊಂಬಾರಿನ ಮೊಗೇರಡ್ಕ ಶಾಲೆಗೆ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ನೀಡಿ ಸಾಮಾಜಿಕ ಕಾಳಜಿ ತೋರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಡಾ. ಅನನ್ಯ ಪಿ.ಕೆ. ಮುಂದೆ ವೈದ್ಯಕೀಯಲ್ಲೇ ಉನ್ನತ ಶಿಕ್ಷಣ ಸಾಧಿಸುವ ಗುರಿ ಹೊಂದಿದ್ದಾರೆ.