ಕೊಯಿಲ: ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಮಾಹಿತಿ ಕಾರ್ಯಗಾರ, ಸಂವಾದ

0

ರಾಮಕುಂಜ: ಮೌಲ್ಯ ವರ್ದಿತ ಉತ್ಪನ್ನಗಳನ್ನು ನೀಡುವ ದೇಶಿ ತಳಿ ಗೋವುಗಳ ಸಾಕಾಣಿಕೆಯಿಂದ ಆರೋಗ್ಯ, ಮಣ್ಣು, ಪರಿಸರದ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯ. ಮನುಷ್ಯ ಬಳಕೆಯ ಹಲವು ವಸ್ತುಗಳನ್ನು ದೇಶಿ ತಳಿ ಗೋವುಗಳಿಂದ ಉತ್ಪತ್ತಿಯಾಗಿ ಪಡೆಯಬಹುದಾಗಿದೆ. ಹಾಗಾಗಿ ರೈತರು ದೇಶಿ ತಳಿಗಳನ್ನು ಕಡಿಮೆ ಖರ್ಚಿನಲ್ಲಿ ಸಾಕುವುದರ ಮೂಲಕ ಹೆಚ್ಚು ಆದಾಯ ನೀರಿಕ್ಷಿಸಬಹುದು ಎಂದು ಬೆಂಗಳೂರು ಗಿರಿನಗರ ಗೋಪಾಲ ಟ್ರಸ್ಟ್ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್ ಹೇಳಿದರು.


ಅವರು ಮೇ.4ರಂದು ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಬೆಂಗಳೂರು ಗಿರಿನಗರ ಗೋಪಾಲ ಟ್ರಸ್ಟ್ ಮತ್ತು ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಮಲೆನಾಡು ಗಿಡ್ಡ ತಳಿ ಗೋವಿನ ಮೌಲ್ಯ ವರ್ದಿತ ಉತ್ಪನ್ನಗಳ ತಯಾರಿಕೆಯ ಒಂದು ದಿನದ ಮಾಹಿತಿ ಕಾರ್ಯಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶಿ ಗೋವು ತಳಿಗಳ ಹಾಲು, ಗೋಮೂತ್ರ, ಸೆಗಣಿಯಿಂದ ಮೌಲ್ಯವರ್ದಿತ ಉತ್ಪನ್ನಗಳ ಬಳಕೆಯಿಂದ ಮನುಷ್ಯ, ಪರಿಸರದ ಮೇಲೆ ಯಾವುದೇ ಪರಿಣಾಮವಿಲ್ಲ ಎಂಬುದನ್ನು ವಿಜ್ಞಾನವೂ ದೃಢಪಡಿಸಿದೆ. ಭವಿಷ್ಯದ ಉತ್ತಮ ಪರಿಸರ, ಆರೋಗ್ಯ ದೃಷ್ಟಿಯಿಂದ ದೇಶಿ ತಳಿಗಳ ಸಾಕಾಣಿಕೆಗೆ ರೈತರು ಹೆಚ್ಚು ಒತ್ತು ನೀಡಬೇಕು. ಉತ್ತಮ ಆದಾಯಕ್ಕಾಗಿ ಮಾಹಿತಿ ಕಾರ್ಯಗಾರದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ಬೆಂಗಳೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕ ಡಾ. ಪಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಗೋಪಾಲ ಟ್ರಸ್ಟ್‌ನ ತಿರುಮಲ ಪ್ರಸನ್ನ ಅವರು ಜೀವಾಮೃತ, ಸಾವಯವ ಗೊಬ್ಬರ ತಯಾರಿಸುವ ವಿಧಾನ, ತಿಪಟೂರು ಬಿಳಿಗೆರೆ ಪಾರಂಪರಿಕ ವೈದ್ಯ ಗಂಗಾಧರ ಅವರು ಗೋವಿನ ಮೌಲ್ಯವರ್ದಿತ ಉತ್ಪನ್ನಗಳ ಪ್ರಾತ್ಯಕ್ಷಿತೆ, ಇರ್ದೆ-ಬೆಟ್ಟಂಪಾಡಿ ಶ್ರೀ ಸುರಬಿ ಪಂಚಗವ್ಯದ ಡಾ.ಶಶಿಶೇಖರ್ ಅವರು ಪಂಚಗವ್ಯ ಚಿಕಿತ್ಸೆ, ದೊಡ್ಡಬಳ್ಳಾಪುರ ಗೋಮಾತ ಸಹಕಾರಿ ಸಂಘ ಮತ್ತು ರಾಷ್ಟ್ರೋತ್ಥಾನ ಗೋಶಾಲಾ ಟ್ರಸ್ಟ್ ಅಧ್ಯಕ್ಷ ಡಾ. ಜೀವನ್ ಕುಮಾರ್ ಅವರು ಗೋವುಗಳ ಸಾಕಾಣಿಕೆಯ ಮಾಹಿತಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು.
ಆರಂಭದಲ್ಲಿ ಅತಿಥಿಗಳಿಂದ ಗೋಪೂಜೆ ನಡೆಯಿತು. ಸಿಬ್ಬಂದಿಗಳಾದ ರೂಪಾಕ್ಷಿ, ಪವಿತ್ರ, ದಿವಾಕರ್, ಲೋಲಾಕ್ಷಮ್ಮ ಈ ವೇಳೆ ಉಪಸ್ಥಿತರಿದ್ದರು. ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಮುಖ್ಯ ಪಶುವೈದ್ಯಾಧಿಕಾರಿ ಡಾ.ಪುನಿತ್ ವಂದಿಸಿದರು. ಅಭಿವೃದ್ದಿ ಅಧಿಕಾರಿ ಯು. ಕೃಷ್ಣ ನಿರೂಪಿಸಿದರು.

LEAVE A REPLY

Please enter your comment!
Please enter your name here