ಮೇ 13, 14: ರಾಮಕುಂಜದಲ್ಲಿ ಉಡುಪಿ ಪೇಜಾವರ ಶ್ರೀಗಳ ಅಧ್ಯಕ್ಷತೆಯ ವಿದ್ಯಾಸಂಸ್ಥೆಗಳ ಶಿಕ್ಷಕರ ಶೈಕ್ಷಣಿಕ ಸಮಾವೇಶ

0

ರಾಮಕುಂಜ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಅಧ್ಯಕ್ಷತೆಯ ರಾಜ್ಯದ ವಿವಿಧೆಡೆ ಇರುವ ವಿದ್ಯಾಸಂಸ್ಥೆಗಳ ಶಿಕ್ಷಕರ ಹಾಗೂ ಆಡಳಿತ ಮಂಡಳಿ ಸದಸ್ಯರ ಶೈಕ್ಷಣಿಕ ಸಮಾವೇಶ ಮೇ 13 ಮತ್ತು 14ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ತಿಳಿಸಿದ್ದಾರೆ.


ಮೇ .13ರಂದು ಬೆಳಿಗ್ಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಮಾವೇಶ ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಚಾರಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲರಾದ ಡಾ.ಮಾಧವ ಭಟ್ ಅವರು ಭಾರತೀಯ ಶಿಕ್ಷಣದಲ್ಲಿ ಗುರುಶಿಷ್ಯ ಸಂಬಂಧ, ಬೆಂಗಳೂರಿನ ಖ್ಯಾತ ಚಿಂತಕರಾದ ಡಾ.ವಿ.ಬಿ.ಆರತಿ ಅವರು ಶಿಕ್ಷಕ-ರಾಷ್ಟ್ರ ರಕ್ಷಕ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಪರಾಹ್ನ ಬೆಂಗಳೂರಿನ ದಿಶಾ ಫೌಂಡೇಶನ್ ವತಿಯಿಂದ ಶೈಕ್ಷಣಿಕ ಸವಾಲುಗಳು ಎಂಬ ವಿಷಯದ ಕುರಿತು ತರಬೇತಿ ನಡೆಯಲಿದೆ. ಸಂಜೆ ಶಾಲೆ-ದೇವಾಲಯ ಸಂದರ್ಶನ, ರಾತ್ರಿ ಭಜನೆ, ತಾಳಮದ್ದಳೆ ನಡೆಯಲಿದೆ.


ಮೇ .14ರಂದು ಬೆಳಿಗ್ಗೆ ಪ್ರಾರ್ಥನೆ, ಬಳಿಕ ಎರಟಾಡಿ ದೇವಸ್ಥಾನ ಸಂದರ್ಶನ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಭೇಟಿ ನಡೆಯಲಿದೆ. ನಂತರ ರೋಹಿತ್ ಚಕ್ರತೀರ್ಥ ಬೆಂಗಳೂರು ಇವರಿಂದ ಭಾರತೀಯ ಇತಿಹಾಸ ಪಾಠಗಳ ವಿಸಂಗತಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಗಾಳಿಮನೆ ವಿನಾಯಕ ಭಟ್ಟ ರವರು ಭಗವದ್ಗೀತೆಯ ಶೈಕ್ಷಣಿಕ ಮೌಲ್ಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಪರಾಹ್ನ ಪ್ರಮುಖರಿಂದ ಅನುಭವ ಕಥನ, ಸ್ವಾಮೀಜಿಯವರೊಂದಿಗೆ ಸಂವಾದ, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಸಮಾರೋಪ ನುಡಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಸಮಾವೇಶದಲ್ಲಿ ರಾಮಕುಂಜ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು, ಧಾರವಾಡ, ಬಳ್ಳಾರಿ, ಮೈಸೂರಿನಲ್ಲಿರುವ ಉಡುಪಿ ಪೇಜಾವರ ಶ್ರೀಗಳ ಅಧ್ಯಕ್ಷತೆಯ ಸುಮಾರು 18 ವಿದ್ಯಾಸಂಸ್ಥೆಗಳ 360ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here