ಅಪಘಾತ ಸ್ಥಳಕ್ಕೆ 25ಮೀ ಉದ್ದದಲ್ಲಿ ತಡೆಬೇಲಿ ನಿರ್ಮಾಣ
ಎರಡು ಬದಿಗೂ ತಡೆಬೇಲಿ ನಿರ್ಮಾಣಕ್ಕೆ ಒತ್ತಾಯ
ಬರಹ: ಸುಧಾಕರ್ ಕಾಣಿಯೂರು
ಕಾಣಿಯೂರು: ಪುತ್ತೂರು-ದರ್ಬೆ-ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಕಾಣಿಯೂರು ಪುತ್ತೂರು ಸಂಪರ್ಕ ಕಲ್ಪಿಸುವ ಬೈತಡ್ಕ ಎಂಬಲ್ಲಿ ಹೊಳೆಗೆ ನಿರ್ಮಿಸಲಾದ ಮುಳುಗು ಸೇತುವೆಗೆ ಲೋಕೋಪಯೋಗಿ ಇಲಾಖೆಯಿಂದ ಕೊನೆಗೂ ತಡೆಬೇಲಿ ನಿರ್ಮಿಸುವ ಮೂಲಕ ಬಹುದಿನದ ಬೇಡಿಕೆ ಈಡೇರಿದೆ. ಬೈತಡ್ಕ ಮುಳುಗು ಸೇತುವೆಯಾದ ಕಾರಣ ಸೇತುವೆಯ ಒಂದು ಭಾಗ ಅಪಘಾತ ಸಂಭವಿಸುವ ಸ್ಥಳದಲ್ಲಿ ಸುಮಾರು 25 ಮೀಟರ್ ಉದ್ದದಷ್ಟು ಮಾತ್ರ ತಡೆಬೇಲಿ ನಿರ್ಮಿಸಲಾಗಿದೆ.
ಸೇತುವೆ ಮೇಲ್ದರ್ಜೆಗೇರಿಸುವಂತೆ ಆಗ್ರಹ:
ಈ ಸೇತುವೆಯ ಮೇಲೆ ದಿನೇ ದಿನೇ ವಾಹನ ದಟ್ಟಣೆ ಅಧಿಕವಾಗುತ್ತಿದೆ. ಪ್ರಮುಖ ಯಾತ್ರಾ ಸ್ಥಳವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸಹಿತ ಕಾಣಿಯೂರು, ಪಂಜ ಹಾಗೂ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪುತ್ತೂರು -ಸವಣೂರು -ಕಾಣಿಯೂರು ರಸ್ತೆಯು ಬೈತಡ್ಕ ಎಂಬಲ್ಲಿ ತಕ್ಷಣ ಕಾಣುವ ವಕ್ರ ರಸ್ತೆ ರಾತ್ರಿ ಸಮಯದಲ್ಲಿ ಸಂಚರಿಸುವವರಿಗೆ ಬಹಳಷ್ಟು ಅಪಾಯಕಾರಿ ಆಗಿ ಪರಿಣಮಿಸಿದೆ.
ಈ ನಿಟ್ಟಿನಲ್ಲಿ ಸೇತುವೆಯನ್ನು ಮೇಲ್ಮಟ್ಟದ ಸೇತುವೆಯಾಗಿ ಪರಿವರ್ತಿಸಬೇಕು, ಇಲ್ಲವಾದಲ್ಲಿ ಎರಡೂ ಬದಿಗೂ ಪೂರ್ಣ ಸುರಕ್ಷಿತ ತಡೆ ಬೇಲಿಯನ್ನು ನಿರ್ಮಿಸಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.
ಇಲ್ಲಿ ನಡೆದಿತ್ತು ಹಲವಾರು ಅವಘಡ:
ಬೈತಡ್ಕ ಸೇತುವೆಯ ಎರಡೂ ಕಡೆ ಸಮರ್ಪಕವಾದ ತಡೆಬೇಲಿ ಇಲ್ಲದ ಪರಿಣಾಮ ಇಲ್ಲಿ ಹಲವಾರು ಅವಘಡಗಳು ಸಂಭವಿಸಿ ಹೋಗಿತ್ತು. ಬೈಕ್, ಓಮ್ನಿ ಕಾರು ಹೀಗೆ ಹಲವಾರು ವಾಹನಗಳು ಸೇತುವೆಯಿಂದ ಹೊಳೆಗೆ ಬಿದ್ದಿದೆ. ಕೆಲ ವರ್ಷದ ಹಿಂದೆ ಮಳೆಗಾಲ ಸಂದರ್ಭದಲ್ಲಿ ಸೇತುವೆಗೆ ಢಿಕ್ಕಿ ಹೊಡೆದು ಕಾರೊಂದು ಹೊಳೆಗೆ ಬಿದ್ದು, ಕಾರಿನಲ್ಲಿದ್ದ ಯುವಕರಿಬ್ಬರು ಪ್ರಾಣವನ್ನು ಕಳೆದುಕೊಂಡ ಘಟನೆಯೂ ಇಲ್ಲಿ ನಡೆದು ಹೋಗಿತ್ತು.
ಸುದ್ದಿ ಯಲ್ಲಿ ವರದಿ
ಬೈತಡ್ಕ ಸೇತುವೆಯಲ್ಲಿ ತಡೆಬೇಲಿ ಇಲ್ಲದೆ ಅಪಾಯಕಾರಿ ಸ್ಥಿತಿ ಇರುವ ಕುರಿತು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಹಲವು ಬಾರಿ ವರದಿ ಪ್ರಕಟಿಸಿ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನವನ್ನು ಸೆಳೆದಿತ್ತು.
ಬೈತಡ್ಕ ಮುಳುಗು ಸೇತುವೆಯ ಒಂದು ಭಾಗದಲ್ಲಿ ಸುಮಾರು 25ಮೀಟರ್ ನಷ್ಟು ಉದ್ದಕ್ಕೆ ತಡೆಬೇಲಿ ನಿರ್ಮಿಸಲಾಗಿದೆ. ತಡೆಬೇಲಿ ನಿರ್ಮಿಸಿದ ಜಾಗದಲ್ಲಿ ಬಹಳಷ್ಟು ಅಪಘಾತಗಳು ನಡೆದಿತ್ತು. ಹೀಗಾಗಿ ಈ ಜಾಗದಲ್ಲಿ ಮಾತ್ರ ತಡೆಬೇಲಿ ನಿರ್ಮಿಸಲಾಗಿದೆ. ಮುಳುಗು ಸೇತುವೆಯಾದ ಕಾರಣ ಸೇತುವೆ ಇಕ್ಕೆಡೆಗಳಲ್ಲಿ ಸಂಪೂರ್ಣ ತಡೆಗೊಡೆ ನಿರ್ಮಿಸಲು ಸಾಧ್ಯವಿಲ್ಲ. ಲೋಕೋಪಯೋಗಿ ಇಲಾಖೆಯ ವಾರ್ಷಿಕ ನಿರ್ವಹಣೆಯಲ್ಲಿ ಹಿರಿಯ ಅಧಿಕಾರಗಳ ಸೂಚನೆಯಂತೆ ತಡೆಬೇಲಿ ರಚಿಸಲಾಗಿದೆ. ಈ ರಾಜ್ಯ ಹೆದ್ದಾರಿಯಲ್ಲಿ ಬರುವ ಸರ್ವೆ, ಬೈತ್ತಡ್ಕ, ಪುಣ್ಚತ್ತಾರು ಮುಳುಗು ಸೇತುವೆಗಳನ್ನು ಮೇಲ್ದರ್ಜೆಗೇರಿಸಲು ಕೆಅರ್ ಡಿಸಿ ಎಲ್ ಮನವಿ ಸಲ್ಲಿಸಲಾಗಿದೆ.
-ಕಾನಿಷ್ಕ, ಸಹಾಯಕ ಇಂಜಿನಿಯರ್ ಲೋಕೋಪಯೋಗಿ
ಇಲಾಖೆ ಪುತ್ತೂರು ಉಪ ವಿಭಾಗ