ಪುತ್ತೂರು: ರಾಜ್ಯ ಸರಕಾರ ವಿವಿಧ ವೃಂದದ ಸರಕಾರಿ ಅಧಿಕಾರಿಗಳಿಗೆ ಕಡ್ಡಾಯಗೊಳಿಸಿದ ಇಲಾಖಾ ಪರೀಕ್ಷೆಯ ಪೂರ್ವ ಸಿದ್ಧತೆಗೆ ಪುತ್ತೂರು ಘಟಕದ ಜೆಸಿಐ ವತಿಯಿಂದ
ಉಚಿತವಾಗಿ ಏರ್ಪಡಿಸಿದ 2024ನೇ ಸಾಲಿನ ಇಲಾಖಾ ಪರೀಕ್ಷೆಯ ತರಬೇತಿಯ ಉದ್ಘಾಟನೆ ಮೇ.5ರಂದು ನಡೆಯಿತು.
ವಕೀಲರು ಹಾಗೂ ಜೆಸಿಐ ಭಾರತದ ರಾಷ್ಟ್ರೀಯ ಸಂಯೋಜಕಿ ಸ್ವಾತಿ ಜೆ ರೈ ಶಿಬಿರ ಉದ್ಘಾಟಿಸಿ ಮಾತನಾಡಿ ಸಮಾಜ ಸೇವೆ ಮಾಡುವುದು ತಂದೆ ತಾಯಿಯ ಋಣವನ್ನು ಸಂದಾಯ ಮಾಡಿದಂತೆ. ಈ ನಿಟ್ಟಿನಲ್ಲಿ ಜೆಸಿಐ ಸಂಸ್ಥೆ ಉಚಿತವಾಗಿ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಇದರ ಪ್ರಯೋಜನವನ್ನು ಪಡೆದವರು ಸರಕಾರಿ ಕೆಲಸ ದೇವರ ಕೆಲಸವೆಂದು ತಿಳಿದು, ಸರಕಾರಿ ನೌಕರರಾದ ತಾವೆಲ್ಲರು ಕಛೇರಿಗೆ ತಮ್ಮಲ್ಲಿ ಕೆಲಸಕ್ಕಾಗಿ ಬರುವವರನ್ನು ಗೌರವವಾಗಿ ವರ್ತಿಸಿ ಭ್ರಷ್ಟರಹಿತ ಸೇವೆಯನ್ನು ಮಾಡಿ ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ ಕರ್ತವ್ಯ ನಿರ್ವಹಿಸುವಂತೆ ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಪುತ್ತೂರು ಇಲ್ಲಿಯ ಗ್ರೇಡ್ 2 ಸಹಾಯಕ ಶಿಕ್ಷಕಿ ಡಾ. ಚಾಂದಿನಿ ಮಾತನಾಡಿ ಜೆಸಿ ಸಂಸ್ಥೆಯ ಸಮಾಜಸೇವೆ ಎಂಬುದು ದೇವರ ಪೂಜೆಗೆ ಸಮಾನ. ಕಬ್ಬಿಣದ ಕಡಲೆಯಂತಿರುವ ಪರೀಕ್ಷೆಯನ್ನು ಎದುರಿಸಲು ಸಂಸ್ಥೆಯ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ನಡುವೆಯು ಸರಕಾರಿ ನೌಕರರಿಗೆ ಅನುಕೂಲವಾಗುವಂತೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಜೆಸಿಐ ಪುತ್ತೂರು ಘಟಕದ ಅಧ್ಯಕ್ಷ ಮೋಹನ್ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ ತರಬೇತಿಗೆ ಹೊಸದಾಗಿ ಆಗಮಿಸಿದ ಸರಕಾರಿ ನೌಕರರು ತಮ್ಮ ವೃತ್ತಿ ಬದುಕಿನಲ್ಲಿ ನಾವು ಮಾಲಿಕರಲ್ಲ ಜನರ ಸೇವೆ ಮಾಡುವವರು ಎಂದು ಪ್ರಾಮಾಣಿಕರಾಗಿ ಕೆಲಸ ಮಾಡಿದರೆ ದೇವರ ಅನುಗ್ರಹವಿರುತ್ತದೆ ಎಂದು ಹೇಳಿ ಮುಂದೆಯು ಸಹಕಾರ ನೀಡುವುದಾಗಿ ತಿಳಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಜಿತೇಶ್ ರೈ ಜೇಸಿವಾಣಿ ವಾಚಿಸಿದರು. ಅನುಶ್ರೀ ಸಾಮೆತಡ್ಕ ಪ್ರಾರ್ಥಿಸಿದರು. ಕಳೆದ ಸಾಲಿನ ತಂಡದವರಾದ ಪುತ್ತೂರು ಸಿ.ಡಿ.ಪಿ.ಓ.ಕಛೇರಿಯ ಮೇಲ್ವಿಚಾರಕಿ ಪುಷ್ಪಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರಪ್ಪಗೌಡ, ದಾಮೋದರ ಪಾಟಾಳಿ ಮತ್ತು ಮಾಲಿನಿ ಕಶ್ಯಪ್ ಅತಿಥಿಗಳನ್ನು ಪರಿಚಯಿಸಿದರು. ಜಿತೇಶ್ ರೈ ವಂದಿಸಿದರು. ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತ, ತರಬೇತಿದಾರ ಗಂಗಾಧರ್ ಮಂಗಲ್ಪಾಡಿ ಉಪಸ್ಥಿತರಿದ್ದರು.