ಕೇಳಿದ್ದು 50 ಲಕ್ಷ .. ಸಿಕ್ಕಿದ್ದು ಒಂದೂವರೆ ಕೋಟಿ – ಬಡವರ ಮೇಲಿನ ಕಾಳಜಿಗೆ ಅಶೋಕ್ ರೈಗೆ ಸೈ ಎಂದ ಸಿಎಂ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆಯಾದ ಗ್ರಾಮಗಳಿಗೆ ತುರ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಹೆಚ್ಚುವರಿ ವಿಶೇಷ ಅನುದಾನ ನೀಡುವಂತೆ ಪುತ್ತೂರು ಶಾಸಕ ಅಶೋಕ್ ರೈಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದು ಕನಿಷ್ಠ 50 ಲಕ್ಷ ರೂ.ನೀಡುವಂತೆ ವಿನಂತಿಸಿದ್ದರು. ಆದರೆ ಶಾಸಕ ಅಶೋಕ್ ರೈ ಬಡವರ ಪರ ಕಾಳಜಿಗೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯವರು 50ಲಕ್ಷ ರೂ.ಬಲದಿಗೆ 1.50 ಕೋಟಿ ರೂ ಹೆಚ್ಚುವರಿ ಅನುದಾನವನ್ನು ನೀಡಿದ್ದು ಕುಡಿಯುವ ನೀರಿನ ಸಮಸ್ಯೆ ಇರುವ ಪ್ರತೀ ಗ್ರಾಮದಲ್ಲಿ ತಕ್ಷಣ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ.

ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಳೆಂಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಅಂಥಹ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಶಾಸಕರೇ ನೀರು ಪೂರೈಕೆಯ ವ್ಯವಸ್ಥೆಯನ್ನು ಮಾಡಿದ್ದಾರೆ. ಆರ್ಯಾಪು ಗ್ರಾಮದಲ್ಲಿ ಹೊಸ ಕೊಳವೆ ಬಾವಿಯನ್ನೇ ಕೊರೆಯುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಶಾಸಕರು ನೀಡಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಮಸ್ಯೆಯ ಬಗ್ಗೆ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಎಲ್ಲಾ ಕ್ಷೇತ್ರಗಳಿಗೂ ಮುಖ್ಯಮಂತ್ರಿಯವರು ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದಾರೆ ಎಂದು ಶಾಸಕ ಅಶೋಕ್ ರೈಗಳು ತಿಳಿಸಿದ್ದಾರೆ.

ನಾಳೆಯಿಂದಲೇ ಕಾರ್ಯಾಚರಣೆ
ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಶಾಸಕರು ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆಯೋ ಅಲ್ಲೆಲ್ಲಾ ತಕ್ಷಣ ನೀರಿನ ವ್ಯವಸ್ಥೆ ಮಾಡುವಂತೆ ಎಲ್ಲಾ ಗ್ರಾಪಂ ಪಿಡಿಒಗಳಿಗೆ ಸೂಚನೆಯನ್ನು ನೀಡಿದ್ದಾರೆ. ಗ್ರಾಮದ ಯಾವ ಪ್ರದೇಶದಲ್ಲೂ ಕುಡಿಯುವ ನೀರಿನ ಸಮಸ್ಯೆ ಇರಬಾರದು. ಕೊಳವೆ ಬಾವಿ ಬೇಕಾದಲ್ಲಿ ಕೊಳವೆ ಬಾವಿ, ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡುವುದಾದರೆ ಆ ಮೂಲಕ ವ್ಯವಸ್ಥೆ ಮಾಡುವಂತೆ ಶಾಸಕರು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here