ಫಿಲೋಮಿನಾ ಕಾಲೇಜಿನ 1973-74 ಸಾಲಿನ ಬಿಎ ವಿದ್ಯಾರ್ಥಿಗಳ ಸುವರ್ಣ ಮಹೋತ್ಸವ ಆಚರಣೆ

0


ಸಂಸ್ಥೆಯಲ್ಲಿ ಜಾತಿ-ಧರ್ಮವಿಲ್ಲ, ಮನುಷ್ಯ ಧರ್ಮ ಮಾತ್ರ-ವಂ|ಆಂಟನಿ ಪ್ರಕಾಶ್
ಹಿರಿಯ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿರುವುದು ಅಭಿನಂದನೀಯ-ಪ್ರೊ|ರಾಮಕೃಷ್ಣ ರಾವ್

ಪುತ್ತೂರು: ರ‍್ಯಾಂಕ್, ಮೆಡಲ್ ಮುಖ್ಯವಲ್ಲ, ವ್ಯಕ್ತಿಯ ನಡತೆ ಬಹಳ ಮುಖ್ಯವೆನಿಸುತ್ತದೆ. ನಾವು ಪರಸ್ಪರ ಪ್ರೀತಿಸುವುದನ್ನು ಕಲಿಯಬೇಕು, ಪರಸ್ಪರರ ಸುಖ-ದುಃಖಗಳಲ್ಲಿ ಭಾಗಿಯಾಗಬೇಕು. ನಮ್ಮ ವಿದ್ಯಾಸಂಸ್ಥೆಯಲ್ಲಿ ಯಾವುದೇ ಜಾತಿ-ಧರ್ಮವಿಲ್ಲ, ಕೇವಲ ಮನುಷ್ಯ ಧರ್ಮ ಮಾತ್ರ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊರವರು ಹೇಳಿದರು.
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ 1973-74ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಮೇ.7ರಂದು ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ ಆಚರಿಸಲಾದ ಸುವರ್ಣ ಮಹೋತ್ಸವ(ಗೋಲ್ಡನ್ ಜ್ಯುಬಿಲಿ) ಸಂಭ್ರಮದಲ್ಲಿ ಅವರು ಮಾತನಾಡಿದರು. ನಾನೂ ಕೂಡ ಈ ಕಾಲೇಜಿನ ಹಿರಿಯ ವಿದ್ಯಾರ್ಥಿ. ಹಿರಿಯ ವಿದ್ಯಾರ್ಥಿಗಳು ಹಾಗೂ ನಾವೆಲ್ಲಾ ಒಟ್ಟಾಗಿ, ಕೈ ಕೈ ಜೋಡಿಸಿಕೊಂಡು ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದರು.

ಹಿರಿಯ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿರುವುದು ಅಭಿನಂದನೀಯ-ಪ್ರೊ|ರಾಮಕೃಷ್ಣ ರಾವ್:
ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ|ರಾಮಕೃಷ್ಣ ರಾವ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡುವ ಮೂಲಕ ನಿವೃತ್ತಿ ಪಡೆದಿರುತ್ತೀರಿ. ಪ್ರಸ್ತುತ 50 ವರ್ಷದ ಬಳಿಕ ಸಂಸ್ಥೆಗೆ ಆಗಮಿಸಿ ಹಿಂದಿನ ಕಾಲೇಜು ದಿನಗಳ ಅನುಭವವನ್ನು ಮೆಲುಕು ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ. ಐವತ್ತು ವರ್ಷದ ಬಳಿಕ ಹಿರಿಯ ವಿದ್ಯಾರ್ಥಿಗಳನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಆದರೂ ಇಷ್ಟು ಮಂದಿಯನ್ನು ಒಟ್ಟು ಸೇರಿಸಿರುವುದು ಅಭಿನಂದನೀಯ. ನಾವೆಲ್ಲಾ ಕಲಿತ ವಿದ್ಯಾಸಂಸ್ಥೆಗೆ ಋಣಿಗಳಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ತಂಟೆ-ತಕರಾರಿನಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೂ ವಿದ್ಯಾರ್ಥಿ ಜೀವನದ ಬಳಿಕ ತೋರಿಸುವ ಪ್ರೀತಿ ಅದು ಅನನ್ಯ. ಯಾವುದನ್ನು ಮಾಡಬೇಕು, ಮಾಡಬಾರದು ಎಂದು ತಿಳಿಯುವವರಾಗಬೇಕು, ದೇವರಲ್ಲಿ ಭರವಸೆಯಿಡಬೇಕು, ಜೀವನದಲ್ಲಿ ಕಠಿಣ ಪರಿಶ್ರಮಪಟ್ಟಾಗ ಸಾಧನೆ ಸಾಧ್ಯ ಎಂದರು.

ಮೌನ ಪ್ರಾರ್ಥನೆ:
ಹಿರಿಯ ವಿದ್ಯಾರ್ಥಿಗಳು ಪ್ರಸಕ್ತ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು, ಹಿರಿಯ ವಿದ್ಯಾರ್ಥಿಗಳ ತಮ್ಮ ಶೈಕ್ಷಣಿಕ ಬೆಳವಣಿಗೆಯಲ್ಲಿ ಕಾರಣೀಕರ್ತರಾಗಿದ್ದು ಅಗಲಿದ ಶಿಕ್ಷಣ ಶಿಲ್ಪಿ ಮೊ|ಆಂಟನಿ ಪತ್ರಾವೋ ಸೇರಿದಂತೆ ಪ್ರಾಂಶುಪಾಲರಾದ ವಂ|ಸೆರಾವೋ, ವಂ|ಹೆನ್ರಿ ಕ್ಯಾಸ್ಟಲಿನೋ, ಸಹಾಯಕ ಪ್ರಾಧ್ಯಾಪಕರು, ಹಿರಿಯ ಸಹಪಾಠಿ ವಿದ್ಯಾರ್ಥಿಗಳನ್ನು ಸ್ಮರಿಸುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಹಿರಿಯ ವಿದ್ಯಾರ್ಥಿ ಚಂದ್ರಹಾಸ ರೈಯವರು ಕಾರ್ಯಕ್ರಮ ನಿರ್ವಹಿಸಿದರು.

ವಿಶಿಷ್ಟ ರೀತಿಯಲ್ಲಿ ಆಚರಣೆ:
ದೆಹಲಿ, ಬೆಂಗಳೂರು, ಕೇರಳ, ಮಂಗಳೂರು ಹೀಗೆ ವಿವಿಧೆಡೆ ವಾಸ್ತವ್ಯ ಹೊಂದಿರುವ ಸುಮಾರು 30 ಹಿರಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ಪೈಕಿ ಅಂದಿನ ಕಾಲೇಜು ದಿನಗಳಲ್ಲಿ ‘ಬೆಸ್ಟ್ ಔಟ್‌ಗೋಯಿಂಗ್ ಅವಾರ್ಡ್’ ಪ್ರಶಸ್ತಿ ಪಡೆದ ಫಿಲೋಮಿನಾ ರೊಡ್ರಿಗಸ್ ಮಂಗಳೂರುರವರ ಪ್ರಾಯೋಜಕತ್ವದಲ್ಲಿ ಕ್ಯಾಶ್ಯೂ ನಟ್ ಜೊತೆಗೆ ಹೂಗುಚ್ಛದೊಂದಿಗೆ ಸಹಪಾಠಿ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಸುದ್ದಿ ಪತ್ರಿಕೆ ಸಂಪಾದಕ ಡಾ.ಯು.ಪಿ ಶಿವಾನಂದರವರ ಸಹೋದರಿ ಶ್ರೀಮತಿ ಸರೋಜಾರವರು ಶ್ರೀರಾಮ ಸ್ತುತಿಯನ್ನು ಹಾಡಿ ಮನರಂಜಿಸಿದರು. ಜೊತೆಗೆ ಹಿರಿಯ ವಿದ್ಯಾರ್ಥಿಗಳು ಅಂದಿನ ತಮ್ಮ ವಿದ್ಯಾರ್ಥಿ ಜೀವನದ ಮೆಲುಕನ್ನು ಪ್ರಸ್ತುತಪಡಿಸಿದರು.
ಸುವರ್ಣ ಸಮಿತಿಯ ಕಾರ್ಯದರ್ಶಿ ಜಯರಾಮ ರೈ ನುಳಿಯಾಲುರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕು|ಧೀಮಹಿ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಸೋಮಶೇಖರ್ ರೈ, ಕೃಷ್ಣರಾಜ್, ಫ್ರೆಡ್ರಿಕ್ ಗೊನ್ಸಾಲ್ವಿಸ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಬಾಲಕೃಷ್ಣ ರೈರವರು ದೇಣಿಗೆ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು. ಹೈಕೋರ್ಟ್ ನ್ಯಾಯವಾದಿ ಬಿ.ಆರ್ ಶ್ರೀನಿವಾಸ್ ಗೌಡ ವಂದಿಸಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎ.ಜಗಜ್ಜೀವನ್‌ದಾಸ್ ರೈ ಕಾರ್ಯಕ್ರಮ ನಿರೂಪಿಸಿದರು.

ರೂ.3.20 ಲಕ್ಷ ದೇಣಿಗೆ ಹಸ್ತಾಂತರ..
ಈಗಾಗಲೇ ಹಿರಿಯ ವಿದ್ಯಾರ್ಥಿ ಕಡಮಜಲು ಸುಭಾಶ್ ರೈರವರು ಕಾಲೇಜು ಅಭಿವೃದ್ಧಿಗೆ ರೂ.1 ಲಕ್ಷ ನೀಡಿರುತ್ತಾರೆ. ಹಿರಿಯ ವಿದ್ಯಾರ್ಥಿಗಳು ಒಟ್ಟು ಸೇರಿ ರೂ.1 ಲಕ್ಷ ಸೇರಿದಂತೆ ರೂ.೩.೨೦ ಲಕ್ಷ ದೇಣಿಗೆಯನ್ನು ಕಾಲೇಜು ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊರವರಿಗೆ ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು. ಮೇ ೧೭ ಕ್ಕೆ ಕಾಲೇಜು ವಾರ್ಷಿಕೋತ್ಸವ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಮಹಾಸಭೆ ನಡೆಯಲಿದ್ದು ಕೊಡದಿರುವ ಹಿರಿಯ ವಿದ್ಯಾರ್ಥಿಗಳು ತಮ್ಮ ದೇಣಿಗೆಯನ್ನು ಪಾವತಿಸಬಹುದಾಗಿದೆ ಎಂದು ಅಧ್ಯಕ್ಷ ಎ.ಜೆ ರೈಯವರು ಹೇಳಿದರು.

ಅಭಿವೃದ್ಧಿಗೆ ಕೈಜೋಡಿಸೋಣ..
ವಿ.ವಿಯಲ್ಲಿ ಫಿಲೋಮಿನಾ ವಿದ್ಯಾಸಂಸ್ಥೆಗೆ ಉತ್ತಮ ಹೆಸರಿದೆ. ಇಲ್ಲಿನ ಸುಂದರ ಕ್ಯಾಂಪಸ್ ಎಲ್ಲಿಯೂ ಕಾಣ ಸಿಗದು. ಅದರಲ್ಲೂ ಕಾಲೇಜು ಎದುರು ಸುಸಜ್ಜಿತ 400ಮೀ.ಟ್ರ್ಯಾಕ್ ಕ್ರೀಡಾಂಗಣವಿರುವುದು ಮತ್ತೂ ಸುಂದರ. ಈಗಾಗಲೇ ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜರವರು ಸುಮಾರು ರೂ.2.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಮೂಲಕ ಕಾಲೇಜಿನ ರೂಪವನ್ನು ಹೆಚ್ಚಿಸಿರುತ್ತಾರೆ. ಹಿರಿಯ ವಿದ್ಯಾರ್ಥಿಗಳಾದ ನಾವೂ ಕೂಡ ನಮ್ಮಿಂದಾದಷ್ಟು ಕಾಲೇಜು ಅಭಿವೃದ್ಧಿಯಲ್ಲಿ ಕೈಜೋಡಿಸೋಣ.
-ಎ.ಜಗಜ್ಜೀವನ್‌ದಾಸ್ ರೈ, ಅಧ್ಯಕ್ಷರು, ಸುವರ್ಣ ಮಹೋತ್ಸವ ಸಮಿತಿ

ಸನ್ಮಾನ..
ಸಂಸ್ಥೆಯ 1973-74ನೇ ಸಾಲಿನ ವಿದ್ಯಾರ್ಥಿಗಳ ಸುವರ್ಣ ಸಂಭ್ರಮದ ಸವಿನೆನಪಿಗೆ ಅಂದಿನ ಸಹ ಪ್ರಾಧ್ಯಾಪಕರಾದ ಪ್ರೊ|ರಾಮಕೃಷ್ಣ ರಾವ್ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಆಶೀರ್ವಾದ ಪಡೆಯಲಾಯಿತು.

LEAVE A REPLY

Please enter your comment!
Please enter your name here