ಸುದ್ದಿ ಬಿಡುಗಡೆ ಸಂಪಾದಕರಾಗಿ ಕರುಣಾಕರ ರೈ ಸಿ.ಎಚ್, ಪ್ರಕಾಶಕರು,ಮುದ್ರಕರಾಗಿ ಶಿವಕುಮಾರ್ ಐ.ನೇಮಕ

0

ಪುತ್ತೂರು: ಕಳೆದ 36 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ, ಜಗತ್ತಿನೆಲ್ಲೆಡೆ ಇರುವ ಪುತ್ತೂರಿನವರು ಓದುವ ತಾಲೂಕಿನ ನಂಬರ್ ವನ್ ಪತ್ರಿಕೆಯಾಗಿರುವ ಸುದ್ದಿ ಬಿಡುಗಡೆಯ ನೂತನ ಸಂಪಾದಕರಾಗಿ ಕರುಣಾಕರ ರೈ ಸಿ.ಎಚ್.ಅವರನ್ನು ನೇಮಕಗೊಳಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಪತ್ರಿಕೆಯಲ್ಲಿ ವರದಿಗಾರರಾಗಿ, ಪ್ರಧಾನ ವರದಿಗಾರರಾಗಿ, ಸ್ಥಾನೀಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಇವರನ್ನು ಇದೀಗ ಪತ್ರಿಕೆಯ ಸಂಪಾದಕರಾಗಿ ನೇಮಕಗೊಳಿಸಲಾಗಿದೆ.
ಪತ್ರಿಕೆಯ ಪ್ರಕಾಶಕರು ಮತ್ತು ಮುದ್ರಕರಾಗಿ ಈಶ್ವರಮಂಗಲದ ಶಿವಕುಮಾರ್ ಐ.ಅವರನ್ನು ನೇಮಕಗೊಳಿಸಲಾಗಿದೆ. ಇವರೂ ಕಳೆದ ಹಲವು ವರ್ಷಗಳಿಂದ ಸುದ್ದಿಯಲ್ಲಿ ವರದಿಗಾರರಾಗಿ, ಸುದ್ದಿ ಆನ್‌ಲೈನ್ ಸೇವಾ ಕೇಂದ್ರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಈ ನೇಮಕ ಮಾಡಿದ್ದು ಮೇ.6ರಂದು ಇವರೀರ್ವರೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಹಿಂದೆ ಸುಳ್ಯದಲ್ಲಿ ಬಳಕೆದಾರರ ವೇದಿಕೆಯನ್ನು ಹುಟ್ಟು ಹಾಕಿ, ಹಲವು ಹೋರಾಟಗಳನ್ನು ನಡೆಸಿ ಯಶಸ್ವಿಯಾಗಿದ್ದ ಡಾ.ಯು.ಪಿ.ಶಿವಾನಂದ ಅವರ ಹೋರಾಟದ ಮೂಲಕವೇ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಪ್ರಾರಂಭಗೊಂಡಿರುವ ಸುದ್ದಿ ಬಿಡುಗಡೆ ಪತ್ರಿಕೆ ಡಾ.ಶಿವಾನಂದ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿತ್ತು. ಸುದ್ದಿ ಜನಾಂದೋಲನ ವೇದಿಕೆ ಮುಖ್ಯಸ್ಥರೂ ಆಗಿರುವ ಡಾ.ಯು.ಪಿ.ಶಿವಾನಂದ ಅವರ ನೇತೃತ್ವದಲ್ಲಿ ಈಗಾಗಲೇ ವಿವಿಧ ಆಂದೋಲನಗಳು ಯಶಸ್ವಿಯಾಗಿ ನಡೆದಿದೆ. ಬಲತ್ಕಾರದ ಬಂದ್, ಸಾಮಾಜಿಕ ಜಾಲ ತಾಣಗಳ ದುರುಪಯೋಗ, ಲಂಚ-ಭ್ರಷ್ಟಾಚಾರ ಸಹಿತ ಸಾಮಾಜಿಕ ಅನಿಷ್ಟಗಳ ವಿರುದ್ಧ ಈಗಾಗಲೇ ಯಶಸ್ವೀ ಆಂದೋಲನಗಳು ನಡೆದಿರುವುದಲ್ಲದೆ ‘ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ’ ಘೋಷಣೆಯಡಿ ಉತ್ತಮ ಕೆಲಸ ಮಾಡಿರುವ ಅಧಿಕಾರಿಗಳನ್ನು ಆಂದೋಲನದ ಮೂಲಕ ಗುರುತಿಸುವ ಕಾರ್ಯವೂ ನಡೆದಿದೆ.ಈ ರೀತಿ ಸಾಮಾಜಿಕ ಆಂದೋಲನಗಳಲ್ಲಿ ಇನ್ನಷ್ಟು ಸಕ್ರಿಯರಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಪತ್ರಿಕೋದ್ಯಮದ ಜವಾಬ್ದಾರಿಯಿಂದ ಹೊರ ಬರಲು ನಿರ್ಧರಿಸಿರುವ ಡಾ.ಯು.ಪಿ.ಶಿವಾನಂದ ಅವರು ಪತ್ರಿಕೆಗೆ ನೂತನ ಸಂಪಾದಕರಾಗಿ ಕೆದಂಬಾಡಿ ಗ್ರಾಮದ ಚಾವಡಿ ಹೊಸಮನೆ ನಿವಾಸಿ ಕರುಣಾಕರ ರೈ ಸಿ.ಎಚ್.ಮತ್ತು ಪತ್ರಿಕೆಯ ಪ್ರಕಾಶಕರು, ಮುದ್ರಕರಾಗಿ ಈಶ್ವರಮಂಗಲದ ಶಿವಕುಮಾರ್ ಐ.ಅವರನ್ನು ನೇಮಕಗೊಂಡಿದ್ದಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪತ್ರಿಕೆಯ ಯಶಸ್ಸಿನ ಹಿಂದಿರುವ ಪ್ರತಿಯೋರ್ವರೂ ಪತ್ರಿಕಾ ಬಳಗಕ್ಕೆ ಈ ಹಿಂದಿನಂತೆ ಬೆಂಬಲ ನೀಡುವಂತೆ ಡಾ.ಶಿವಾನಂದರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here