ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಯ ನಿರ್ಮಾಣಕ್ಕಾಗಿ ನಿರ್ಮಿಸಲಾದ ಅಂಡರ್ ಪಾಸ್ ನಲ್ಲಿ ಪದೇ ಪದೇ ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿರುವ ವಿದ್ಯಾಮಾನದ ಬಗ್ಗೆ ಪತ್ರಿಕಾ ವರದಿ ಪ್ರಕಟವಾದ ಬೆನ್ನಲ್ಲೇ ಕಳೆದ ಮೇ.2ರಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ ಸ್ಥಳಕ್ಕೆ ಭೇಟಿ ನೀಡಿ ಮೇ.10ರ ಒಳಗಾಗಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕೆಂದು ನೀಡಿದ ನಿರ್ದೇಶನಕ್ಕೆ ಹೆದ್ದಾರಿ ಕಾಮಗಾರಿಯ ಅಧಿಕಾರಿಗಳು ಸ್ಪಂದಿಸಿದ್ದು, ಶುಕ್ರವಾರದಂದು ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿಯೂ ಸರ್ವೀಸ್ ರಸ್ತೆಯನ್ನು ನಿರ್ಮಿಸಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ಸಂಬಂಧಿಸಿ ಉಪ್ಪಿನಂಗಡಿಯಲ್ಲಿ ಹೆದ್ದಾರಿಯ ಮಧ್ಯ ಭಾಗದಲ್ಲಿ ಎತ್ತರಿಸಿದ ರಸ್ತೆಯ ನಿರ್ಮಾಣ ಕಾರ್ಯವೂ ಭರದಿಂದ ನಡೆಯುತ್ತಿದ್ದು, ಈ ಮಧ್ಯೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಅಂಡರ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿ ಏಕ ಕಾಲಕ್ಕೆ ಘನವಾಹನಗಳ ಆಗಮನ ಮತ್ತು ನಿರ್ಗಮನ ಸಮಸ್ಯಾತ್ಮಕವಾಗಿ ದಿನದ ಅನೇಕ ಬಾರಿ ವಾಹನ ದಟ್ಟನೆಯುಂಟಾಗಿ ವಾಹನಗಳು ಸಂಚರಿಸಲಾರದೆ ಎಲ್ಲೆಡೆ ಬ್ಲಾಕ್ ಆಗುತ್ತಿರುತ್ತದೆ. ಈ ಬಗ್ಗೆ ಪದೇ ಪದೇ ಸಂಭವಿಸಿದ ವಾಹನ ದಟ್ಟನೆ ಸಮಸ್ಯೆಯ ಬಗ್ಗೆ ಪತ್ರಿಕೆಯು ಸಚಿತ್ರ ವರದಿಯನ್ನು ಪ್ರಕಟಿಸಿತ್ತು.
ಸಮಸ್ಯೆಯ ಗಂಭೀರತೆಯನ್ನು ಅರ್ಥೈಸಿದ ದ.ಕ ಜಿಲ್ಲಾಧಿಕಾರಿಯವರು, ಪುತ್ತೂರು ಸಹಾಯಕ ಕಮಿಷನರ್‌ರವರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದರು. ಅದರಂತೆ ಮೇ.2ರಂದು ಸಾಯಂಕಾಲ ಇಲಾಖಾಧಿಕಾರಿಗಳೊಂದಿಗೆ ಉಪ್ಪಿನಂಗಡಿಗೆ ಭೇಟಿ ನೀಡಿದ ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಎತ್ತರಿಸಿದ ರಸ್ತೆಯ ಎರಡೂ ಪಾರ್ಶ್ವದಲ್ಲಿಯೂ ಮೇ.10 ರ ಒಳಗಾಗಿ ಸರ್ವೀಸ್ ರಸ್ತೆಯ ಕಾರ್ಯವನ್ನು ಪೂರ್ಣಗೊಳಿಸಬೇಕೆಂದೂ, ಈ ಭಾಗದಲ್ಲಿ ನಿರ್ಮಿಸಬೇಕಾಗಿರುವ ದೊಡ್ಡ ಗಾತ್ರದ ಚರಂಡಿಯ ಕಾಮಗಾರಿಯನ್ನು ಮೇ.15ರ ಒಳಗಾಗಿ ಪೂರ್ಣಗೊಳಿಸಿ ಸಮಸ್ಯೆ ಕಾಡದಂತೆ ಕ್ರಮ ಕೈಗೊಳ್ಳಬೇಕೆಂದು ಎಂಜಿನಿಯರ್ ಗಳಿಗೆ ನಿರ್ದೇಶನ ನೀಡಿದ್ದರು.
ಸಹಾಯಕ ಕಮಿಷನರ್ ರವರ ನಿರ್ದೇಶದಂತೆ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಸರ್ಮೀಸ್ ರಸ್ತೆಯನ್ನು ನಿರ್ಮಿಸಿ ಶುಕ್ರವಾರದಂದು ಬಳಕೆಗೆ ಬಿಟ್ಟುಕೊಡಲಾಯಿತು. ಜೊತೆಗೆ ಉಪ್ಪಿನಂಗಡಿಯ ಒಳಚರಂಡಿ ವ್ಯವಸ್ಥೆಯ ಅವ್ಯವಸ್ಥೆಗೆ ಕಾರಣವಾಗಿದ್ದ ಹೆದ್ದಾರಿ ಸಂಪರ್ಕ ರಸ್ತೆಯಲ್ಲಿನ ಕಿರಿದಾದ ಮೋರಿಯನ್ನು ತೆರವುಗೊಳಿಸಿ ಬೃಹತ್ ಚೌಕಾಕಾರದ ಚರಂಡಿಯನ್ನು ಅಳವಡಿಸಲು ಎಸಿಯವರ ಕಾಲಮಿತಿಯಾದ ಮೇ.15ರ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಸಂಬಂಧ ಚರಂಡಿ ನಿರ್ಮಾಣದ ಕಾಮಗಾರಿಗೂ ಶುಕ್ರವಾರದಂದು ಚಾಲನೆ ನೀಡಲಾಯಿತು.
ಕಾಮಗಾರಿ (ಎತ್ತರಿಸಿದ ರಸ್ತೆಯ ಕಾಮಗಾರಿಯ ಬಳಿಯಲ್ಲಿಯೇ ಇನ್ನೊಂದು ಪಾರ್ಶ್ವದಲ್ಲಿ ಸರ್ವೀಸ್ ರಸ್ತೆಯ ನಿರ್ಮಾಣವಾಗಿರುವುದು.
ಚರಂಡಿ: ಒಳಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿರುವುದು.