ಬೇರಿಕೆ- ಬೊಳಂತಿಲ ರಾಜ್ಯ ಹೆದ್ದಾರಿ ಕಾಮಗಾರಿ:ಕುಡಿಯುವ ನೀರಿನ ಪೈಪ್ ಒಡೆದು ಹೋದರೂ ಮರುಜೋಡಣೆಗೆ ನಿರ್ಲಕ್ಷ್ಯ-ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳು ತರಾಟೆಗೆ

0

ಉಪ್ಪಿನಂಗಡಿ: ರಸ್ತೆ ಕಾಮಗಾರಿ ಸಂದರ್ಭ ಕುಡಿಯುವ ನೀರಿನ ಪೈಪ್‌ಗಳು ಒಡೆದು ಹೋದರೂ, ಅದನ್ನು ಮರುಜೋಡಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ 34 ನೆಕ್ಕಿಲಾಡಿ- ಬೊಳುವಾರು ರಸ್ತೆಯ ಬೇರಿಕೆ- ಬೊಳಂತಿಲ ರಸ್ತೆ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳನ್ನು 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ನೇತೃತ್ವದಲ್ಲಿ ಸ್ಥಳೀಯರು ತರಾಟೆಗೆತ್ತಿಕೊಂಡ ಘಟನೆ 34 ನೆಕ್ಕಿಲಾಡಿಯ ಆದರ್ಶನಗರದಲ್ಲಿ ಮೇ 10ರಂದು ನಡೆದಿದೆ.


ಬೇರಿಕೆ- ಬೊಳಂತಿಲ ರಸ್ತೆ ಕಾಮಗಾರಿ ಸಂದರ್ಭ ಮೇ.9ರಂದು ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್ ಒಡೆದು ಹೋಗಿತ್ತು. ಇದರಿಂದಾಗಿ ಆದರ್ಶನಗರ ಜನತಾ ಕಾಲನಿಯ ಹಲವು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಇದನ್ನು ಕಾಮಗಾರಿ ಸಂಸ್ಥೆಯ ಎಂಜಿನಿಯರ್‌ಗಳಲ್ಲಿ ಸ್ಥಳೀಯರು ತಿಳಿಸಿದಾಗ, ಅದನ್ನು ಮರು ಜೋಡಿಸುವುದು ನಮ್ಮ ಕೆಲಸವಲ್ಲ. ಅದು ಗ್ರಾ.ಪಂ.ನ ಕೆಲಸ ಎಂದಿದ್ದರು. ಗ್ರಾ.ಪಂ.ನಲ್ಲಿ ಈ ಬಗ್ಗೆ ದೂರು ನೀಡಿದರೆ ಅವರು ಕಾಮಗಾರಿ ಸಂಸ್ಥೆಯತ್ತ ಬೆಟ್ಟು ಮಾಡುತ್ತಿದ್ದರು. ಈ ಹಿಂದೆಯೂ ಹೀಗೆಯೇ ಆಗಿ ಇಲ್ಲಿನ ಜನತೆ ಮೂರ‍್ನಾಲ್ಕು ದಿವಸ ನೀರಿನ ಸಮಸ್ಯೆ ಅನುಭವಿಸಿದ್ದರು. ಪೈಪ್‌ಗಳು ಒಡೆದು ಹೋದರೂ, ಅದನ್ನು ಮರುಜೋಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದ ಗುತ್ತಿಗೆದಾರ ಸಂಸ್ಥೆಯವರ ವಿರುದ್ಧ ಸ್ಥಳೀಯರು ತೀವೃ ಆಕ್ರೋಶಗೊಂಡಿದ್ದು, ಈ ಬಗ್ಗೆ 34 ನೆಕ್ಕಿಲಾಡಿ ಗ್ರಾಮದ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಅವರ ಗಮನಕ್ಕೆ ತಂದರು. ಸಂತ್ರಸ್ತರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಆದರ್ಶನಗರದಲ್ಲಿ ಜಮಾವಣೆಗೊಂಡಿದ್ದು, ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳನ್ನು ಕರೆದು ಅವರಿಗೆ ಇಲ್ಲಿನ ಸಮಸ್ಯೆಗಳ ವಿವರಿಸಿದರಲ್ಲದೆ, ತೀವೃವಾಗಿ ತರಾಟೆಗೆ ತೆಗೆದುಕೊಂಡರು.


34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಮಾತನಾಡಿ, ನೀವು ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಒಡೆದು ಹೋಗುವ ಕುಡಿಯುವ ನೀರಿನ ಪೈಪ್‌ಗಳನ್ನು ಮರು ಜೋಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದೀರಿ. ಈ ಹಿಂದೆಯೂ 4-5 ದಿನ ಇಲ್ಲಿನ ಜನತೆ ಸಮಸ್ಯೆ ಅನುಭವಿಸಿದ್ದು ಇದೆ. ನಿಮ್ಮಲ್ಲಿ ಕೇಳಿದಾಗ ಗ್ರಾ.ಪಂ.ನತ್ತ ಬೆರಳು ತೋರಿಸುತ್ತೀರಿ. ಗ್ರಾ.ಪಂ. ಅನ್ನು ಕೇಳಿದರೆ ಅದು ಗುತ್ತಿಗೆದಾರ ಸಂಸ್ಥೆಯವರು ಮಾಡಬೇಕಾದ ಕೆಲಸ ಎನ್ನುತ್ತಾರೆ. ನಿಮ್ಮಿಬ್ಬರ ನಡುವೆ ಇಲ್ಲಿನ ಜನರು ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ. ಗ್ರಾ.ಪಂ.ಗೆ ಇಂದಿನಿಂದ ಮೂರು ದಿನಗಳ ಕಾಲ ಸರಕಾರಿ ರಜಾ ದಿನ ಇದೆ. ಈ ಬೇಸಿಗೆಯ ಸಂದರ್ಭ ಎಲ್ಲೆಡೆಯೂ ನೀರಿಗೆ ಅಭಾವವಿರುವಾಗ ಇವರು ನೀರಿಗೆ ಎಲ್ಲಿಗೆ ಹೋಗಲಿ. ಆದ್ದರಿಂದ ತಕ್ಷಣವೇ ಒಡೆದು ಹೋಗಿರುವ ಪೈಪ್‌ಲೈನ್‌ಗಳನ್ನು ಮರು ಜೋಡಿಸಬೇಕು ಎಂದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಕಾಮಗಾರಿ ಸಂದರ್ಭ ಕುಡಿಯುವ ನೀರಿನ ಪೈಪ್‌ಗಳು ಒಡೆದು ಹೋಗುವುದು ಸಹಜ. ಆದರೆ ಅದನ್ನು ತಕ್ಷಣವೇ ಸರಿಪಡಿಸುವ ಕೆಲಸ ನಿಮ್ಮಿಂದ ಆಗಬೇಕು. ಸ್ಥಳೀಯರು ನೀರಿನ ಸಮಸ್ಯೆಗಳ ಬಗ್ಗೆ ಹೇಳಿದಾಗ ಅದನ್ನು ನಿರ್ಲಕ್ಷ್ಯ ಮಾಡುವುದಲ್ಲ. ಇಲ್ಲಿ ಒಡೆದು ಹೋಗಿರುವ ಪೈಪ್‌ಗಳನ್ನು ಮರು ಜೋಡಿಸುವ ಕೆಲಸ ಮೊದಲು ಮಾಡಿ. ಆಮೇಲೆ ನಿಮ್ಮ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಸ್ಥಳೀಯರ ಆಕ್ರೋಶ ಕಂಡ ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳಾದ ರಾಘವೇಂದ್ರ ಹಾಗೂ ಮಹಾದೇವಯ್ಯ ಒಡೆದು ಹೋದ ಪೈಪ್‌ಗಳನ್ನು ಈಗಲೇ ಮರುಜೋಡಿಸಲಾಗುವುದು ಎಂದು ಭರವಸೆ ನೀಡಿದರು.


ಗುತ್ತಿಗೆದಾರ ಸಂಸ್ಥೆಯವರ ಮೇಲೆ ಹಲವು ಆರೋಪ:
ಗುತ್ತಿಗೆದಾರ ಸಂಸ್ಥೆಯವರು ಮೊದಲಿನ ಎಸ್ಟಿಮೇಟ್ ಪ್ರಕಾರ ಕೆಲಸ ಮಾಡುತ್ತಿಲ್ಲ. ಕೆಲವು ಕಡೆ ತಾರತಮ್ಯವೆಸಗಿದ್ದಾರೆ. ತಮಗೆ ಬೇಕಾದವರಿಗೆ ಎಸ್ಟಿಮೇಟ್ ತಪ್ಪಿಸಿ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ. ಕೆಲವು ದಿನಗಳ ಹಿಂದೆ ಖಾಸಗಿ ವ್ಯಕ್ತಿಯೋರ್ವರ ಅಂಗಳದಲ್ಲಿ ಸುಮಾರು ಒಂದು ವಾರಗಳ ತನಕ ಗುತ್ತಿಗೆದಾರ ಸಂಸ್ಥೆಯ ಜೆಸಿಬಿ ಸಹಿತ ಮೆಷಿನರಿಗಳು ಕೆಲಸ ಮಾಡಿಕೊಂಡಿತ್ತು. ರಸ್ತೆ ಕಾಮಗಾರಿ ಸಂದರ್ಭ ರಸ್ತೆ ಬದಿಯ ಎಲ್ಲಾ ಮರಗಳನ್ನು ಕಡಿದ ಇವರು ನೆಕ್ಕಿಲಾಡಿ ಶಾಲಾ ಬಳಿ ರಸ್ತೆ ಬದಿಯ ಸರಕಾರಿ ಜಮೀನಿನಲ್ಲಿ ಇರುವ ಒಂದು ಮರವನ್ನು ಉಳಿಸಿಕೊಂಡಿದ್ದಾರೆ. ಆ ಮರವು ಎಚ್.ಟಿ. ಲೈನ್‌ಗೆ ತಾಗುತ್ತಿದ್ದು, ಇದು ಶಾಲಾ ಮಕ್ಕಳು ಓಡಾಡುವ ಜಾಗವಾದ್ದರಿಂದ ಅಪಾಯವುಂಟಾಗುವ ಸಾಧ್ಯತೆ ಇದೆ. ಇದನ್ನು ಇವರಲ್ಲಿ ಉರುಳಿಸಲು ಹೇಳಿದರೆ, ಅಲ್ಲೇ ಇರುವ ಖಾಸಗಿ ಮನೆಯವರು ಹೇಳಿದರೆ ಮಾಡುತ್ತೇವೆ. ಇಲ್ಲದಿದ್ದಲ್ಲಿ ನೀವು ಮೆಸ್ಕಾಂನವರಿಗೆ ಹೇಳಿ ಎನ್ನುತ್ತಾರೆ. ಕೆಲವರ ಮನೆ ಬಾಗಿಲಿನಲ್ಲಿ ಒಡೆದು ಹೋದ ಪೈಪ್‌ಗಳನ್ನು ತಕ್ಷಣವೇ ಮರು ಜೋಡಿಸಿ ಕೊಡುತ್ತಾರೆ. ಈಗ ಇಲ್ಲಿ ರಸ್ತೆ ಕಾಮಗಾರಿಗೆ ಮಣ್ಣಿನ ಕೊರತೆಯಾಗಿದೆ ಎಂದು ಹೇಳುವ ಇವರು, ಇಲ್ಲಿ ಬೇಕಾದಷ್ಟು ಇದ್ದ ಮಣ್ಣನ್ನು ಯಾರ‍್ಯಾರದ್ದೋ ತೋಟಕ್ಕೆ, ಖಾಸಗಿ ವ್ಯಕ್ತಿಗಳ ಅಗತ್ಯಕ್ಕೆ ನೀಡಿದ್ದಾರೆ ಎಂದು ಅಲ್ಲಿದ್ದವರು ಆರೋಪಿಸಿದರು.


ಈ ಸಂದರ್ಭ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಂದರ್ ಶಾಫಿ, ಬೂತ್ ಅಧ್ಯಕ್ಷರಾದ ಇಸಾಕ್, ಅಬ್ದುಲ್ ಖಾದರ್, ನವಾಝ್ ಕರ್ವೇಲು, ಕಾಂಗ್ರೆಸ್ ಕಾರ್ಯಕರ್ತರಾದ ಗಣೇಶ್ ನಾಯಕ್, ಅಶೋಕ್ ನಾಯಕ್, ಇಬ್ರಾಹೀಂ, ಜಯಶೀಲ ಶೆಟ್ಟಿ, ತನಿಯಪ್ಪ ಶಾಂತಿನಗರ, ಹಮೀದ್ ಕೆ., ಸುಲೈಮಾನ್ ಅರಪ್ಪಾ, ಯಹ್ಯಾ, ನಾಸೀರ್, ಅಶ್ರಫ್, ಅಬ್ದುಲ್ ಖಾದರ್ ಕರ್ವೇಲು, ಇಬ್ರಾಹೀಂ, ಸ್ಥಳೀಯರಾದ ಸಚಿನ್ ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿ ಎಸ್ಟಿಮೇಟ್ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ. ಕೆಲವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬಂದಿವೆ. ಇದನ್ನು ಶಾಸಕರ ಗಮನಕ್ಕೆ ತರಲಾಗುವುದು. ಪಿಡಬ್ಲ್ಯೂಡಿ ಇಲಾಖೆಯ ಎಂಜಿನಿಯರ್‌ಗಳನ್ನು ಸೇರಿಸಿಕೊಂಡು ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಲು ಶಾಸಕರಿಗೆ ಮನವಿ ಮಾಡಲಾಗುವುದು. ಇಂದಾಜೆ ಬಳಿ ರಸ್ತೆಯು ತಿರುವಿನಿಂದ ಕೂಡಿದ್ದು, ಶಾಸಕರಾದ ಅಶೋಕ್ ಕುಮಾರ್ ರೈಯವರು ಇದು ತನ್ನ ಗಮನಕ್ಕೆ ಬಂದ ಕೂಡಲೇ ಇಲ್ಲಿನ ತಿರುವನ್ನು ತೆಗೆದು ನೇರ ರಸ್ತೆ ಮಾಡುವಂತೆ ಈಗಾಗಲೇ ಪಿಡಬ್ಲ್ಯೂಡಿ ಇಲಾಖೆಯವರಿಗೆ ಸೂಚನೆ ನೀಡಿದ್ದಾರೆ. ಅದಕ್ಕಾಗಿ ಭೂ ಸ್ವಾಧೀನ ಪಡೆಯಲಾಗಿದ್ದು, ಇಲ್ಲಿ ನೇರ ರಸ್ತೆ ಮಾಡುವ ಕಾಮಗಾರಿ ನಡೆಯುತ್ತಿದೆ.
ಅನಿ ಮಿನೇಜಸ್
ಅಧ್ಯಕ್ಷರು, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್

LEAVE A REPLY

Please enter your comment!
Please enter your name here