ಈಶ್ವರಮಂಗಲ: ಅನ್ಯ ಯುವತಿಯೊಂದಿಗಿನ ಅನ್ಯೋನ್ಯತೆ-ಪತ್ನಿ,ಮನೆಯವರಿಗೆ ತಿಳಿದ ವಿಚಾರ-ವಿವಾಹಿತ ಆತ್ಮಹತ್ಯೆ

0

ವಾರದ ಹಿಂದೆ ಗೃಹ ಪ್ರವೇಶ ನಡೆದಿತ್ತು

ಮೃತ ಪ್ರಶಾಂತ್,ಮನೆಯವರು ನೂತನವಾಗಿ ಮನೆ ನಿರ್ಮಿಸಿದ್ದು ಇದರ ಗೃಹಪ್ರವೇಶವು ವಾರದ ಹಿಂದೆಯಷ್ಟೇ ನಡೆದಿದೆ.ಗೃಹ ಪ್ರವೇಶ ನಡೆದ ಕೆಲವೇ ದಿನಗಳಲ್ಲಿ ಪ್ರಶಾಂತ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ, ಗೃಹಪ್ರವೇಶ ನಡೆದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಪುತ್ತೂರು:ವಿವಾಹಿತನಾಗಿದ್ದರೂ ಬೇರೊಂದು ಯುವತಿಯೊಂದಿಗೆ ಅನ್ಯೋನ್ಯತೆಯಿಂದ ಇದ್ದ ವಿಚಾರ ಪತ್ನಿ ಮತ್ತು ಮನೆಯವರಿಗೆ ತಿಳಿದ ಬಳಿಕ ಮಾನಸಿಕವಾಗಿ ನೊಂದಿದ್ದ ಯುವಕ ದೂರದ ಗುಡ್ಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಚಿಮಿನಿಗುಡ್ಡೆ ಎಂಬಲ್ಲಿ ನಡೆದಿದೆ.

ಈಶ್ವರಮಂಗಲ ಸಮೀಪದ ಕತ್ರಿಬೈಲು ನಿವಾಸಿ ನಾರಾಯಣ ಮುಖಾರಿಯವರ ಪುತ್ರ ಪ್ರಶಾಂತ್ ಮುಖಾರಿ (೩೮ವ.)ಆತ್ಮಹತ್ಯೆ ಮಾಡಿಕೊಂಡವರು.ತನ್ನ ಮನೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಚಿಮಿನಿಗುಡ್ಡೆ ಎಂಬಲ್ಲಿ ನೇರಳೆ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಘಟನೆ ಕುರಿತು ಮೃತರ ಪತ್ನಿ ಶ್ರೀಮತಿ ಶೋಭಾ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯ ದೂರು…: ೭ ವರ್ಷಗಳ ಹಿಂದೆ ಪ್ರಶಾಂತ್‌ರೊಂದಿಗೆ ನನ್ನ ಮದುವೆ ಆಗಿದ್ದು ಸುಖೀ ಸಂಸಾರದೊಂದಿಗೆ ವಾಸವಿದ್ದೆವು.ಕಳೆದ ೩ ವರ್ಷಗಳಿಂದ ಪತಿ ಪ್ರಶಾಂತ್‌ರವರು ಬೇರೊಬ್ಬಳು ಯುವತಿಯೊಂದಿಗೆ ಅನ್ಯೋನ್ಯತೆಯಿಂದ ಇದ್ದು, ಈ ವಿಚಾರ ಎರಡು ದಿನಗಳ ಹಿಂದೆ ನನಗೆ ತಿಳಿದಿದ್ದು ಈ ಕುರಿತು ಗಂಡನಲ್ಲಿ ವಿಚಾರಿಸಿದ್ದೆ.ಬಳಿಕ ಅವರು ಮಾನಸಿಕವಾಗಿ ನೊಂದಿದ್ದರು.

ತಮ್ಮನನ್ನು ಈಶ್ವರಮಂಗಲಕ್ಕೆ ಬರಲು ಹೇಳಿದ್ದರು: ಮೇ ೧೧ರಂದು ೧೦:೧೫ ಗಂಟೆಗೆ ಪತಿ ಪ್ರಶಾಂತ್ ಅವರು ನನ್ನ ತಮ್ಮ ಲೋಲಾಕ್ಷನನ್ನು ಈಶ್ವರಮಂಗಲ ಪೇಟೆಗೆ ಬರಲು ಹೇಳಿ ಹೋಗಿದ್ದರು.ಸ್ವಲ್ಪ ಹೊತ್ತಿನ ಬಳಿಕ ತಮ್ಮನ ಮೊಬೈಲಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಱತಾನು ಚಿಮಿನಿಗುಡ್ಡೆಯಲ್ಲಿರುವುದಾಗಿೞ ತಿಳಿಸಿದ್ದರು.ಕೂಡಲೇ ಹೋಗಿ ನೋಡಲಾಗಿ ಅವರ ಬೈಕ್ ಅಲ್ಲೇ ಇತ್ತು.ಅವರ ಮೊಬೈಲ್‌ಗೆ ರಿಂಗ್ ಮಾಡಿ, ಗುಡ್ಡದಲ್ಲಿ  ರಿಂಗ್ ಶಬ್ಧ ಕೇಳಿದ ಜಾಗಕ್ಕೆ ತೆರಳಿ ನೋಡಿದಾಗ ನೆಟ್ಟಣಿಗೆಮುಡ್ನೂರು ಗ್ರಾಮದ ವಾಸುದೇವ ಭಟ್‌ರವರ ಗುಡ್ಡಜಾಗದಲ್ಲಿ ನೇರಳೆ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡಿದ್ದರು.ಬಳಿಕ ನಾನು, ಮಾವ ಮತ್ತು ಸಂಬಂಧಿಕರು ಬಂದು ನೋಡಿದಾಗ ಪತಿಯ ದೇಹದಲ್ಲಿ ಯಾವುದೇ ಚಲನವಲನ ಕಂಡು ಬಂದಿರುವುದಿಲ್ಲ ಎಂದು ಮೃತರ ಪತ್ನಿ ಶೋಭಾರವರು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯಾಗಿದ್ದರೂ ಬೇರೊಬ್ಬಳು ಯುವತಿಯೊಂದಿಗೆ ಅನ್ಯೋನ್ಯತೆಯಿಂದ ಇದ್ದ ಬಗ್ಗೆ ನನಗೆ ಮತ್ತು ಮನೆಯವರಿಗೆ ವಿಷಯ ತಿಳಿದ ಬಳಿಕ ಮಾನಸಿಕವಾಗಿ ನೊಂದು, ಜೀವನದಲ್ಲಿ ಜಿಗುಪ್ಸೆಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದು,ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂದೂ ದೂರಿನಲ್ಲಿ ಅವರು ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತರು ತಂದೆ ನಾರಾಯಣ ಮುಖಾರಿ,ತಾಯಿ ರಾಜೀವಿ, ಪತ್ನಿ ಶೋಭಾ ಹಾಗೂ ಒಂದು ವರ್ಷ ಪ್ರಾಯದ ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here