ಸಿಡಿಲು ಬಡಿದು ಮೃತಪಟ್ಟ ಶ್ರೀಕಿಸುನ್ ಮೃತದೇಹ ವಿಮಾನದ ಮೂಲಕ ಯುಪಿಗೆ ರವಾನೆ

0

ನೆಲ್ಯಾಡಿ: ಮೇ .11ರಂದು ಸಂಜೆ ಇಚ್ಲಂಪಾಡಿಯಲ್ಲಿ ಸಿಡಿಲು ಬಡಿದು ಮೃತರಾದ ಉತ್ತರ ಪ್ರದೇಶ ಮೂಲದ ಕಾರ್ಮಿಕ ಶ್ರೀಕಿಸುನ್(56.ವ)ಅವರ ಮೃತದೇಹವನ್ನು ವಿಮಾನದ ಮೂಲಕ ತವರು ರಾಜ್ಯಕ್ಕೆ ಕೊಂಡೊಯ್ಯಲಾಗಿದೆ. ಈ ಮಧ್ಯೆ ಸಿಡಿಲಿನ ಅಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರು ಕಾರ್ಮಿಕರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.


ಮೃತ ಶ್ರೀಕಿಸುನ್ ಹಾಗೂ ಇತರೇ ಆರು ಮಂದಿ ಕೂಲಿಕಾರ್ಮಿಕರು ಮೇ.11ರಂದು ಸಂಜೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ಎಂಬಲ್ಲಿ ಗುಂಡ್ಯ ಹೊಳೆಯಿಂದ ಮರಳು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ ಗುಡುಗು-ಮಳೆ ಬಂದ ಹಿನ್ನಲೆಯಲ್ಲಿ ಅಲ್ಲೇ ಪಕ್ಕದಲ್ಲಿದ್ದ ಶೆಡ್‌ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಜೋರಾಗಿ ಸಿಡಿಲು ಮಳೆ ಪ್ರಾರಂಭವಾಗುವ ಹೊತ್ತಿಗೆ ಶ್ರೀಕಿಸುನ್ ಹಾಗೂ ಇತರರು ಶೆಡ್‌ಗೆ ಬಂದು ಬೆಳ್ತಿಗೆ ಅಕ್ಕಿಯ ಆಹಾರವನ್ನು ತಟ್ಟೆಯಲ್ಲಿ ಹಾಕಿಕೊಂಡು ತಿನ್ನುತ್ತಿದ್ದರು. ಏಕಾಏಕಿ ಶೆಡ್ ಪಕ್ಕದ ಮರವೊಂದಕ್ಕೆ ಬಡಿದ ಸಿಡಿಲು, ಅಲ್ಲಿಂದ ನೇರವಾಗಿ ಶೆಡ್‌ಗೆ ಬಡಿದು ಊಟ ಮಾಡುತ್ತಿದ್ದ ಶ್ರೀಕಿಸುನ್ ಎದೆಯ ಭಾಗಕ್ಕೆ ಸಿಡಿಲು ಬಡಿದು ಅವರು ಸ್ಥಳದಲ್ಲೇ ಮೃತಪಟ್ಟದ್ದಾರೆ ಎಂದು ಹೇಳಲಾಗಿದೆ.


ಮೃತದೇಹ ಯುಪಿಗೆ ರವಾನೆ:
ಮೃತ ಶ್ರೀಕಿಸುನ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ಆಸ್ಪತ್ರೆಯಲ್ಲಿ ನಡೆಸಿ ಮೇ.12ರಂದು ಬೆಳಗ್ಗೆ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕೊಂಡೊಯ್ದು ಅಲ್ಲಿಂದ ತಡರಾತ್ರಿ ವಿಮಾನದ ಮೂಲಕ ಮೃತದೇಹವನ್ನು ಉತ್ತರ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಮೂಲಕ ಚಹತು ಮಹ್ತೋ, ಗೌರಿ ಚೌದರಿ ಎಂಬವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ ಘಟನೆಗೆ ಸಂಬಂಧಿಸಿ ಮರುಳಗಾರಿಕೆಯ ಕಾರ್ಯನಿರ್ವಾಹ ಕೋಡಿಂಬಾಳ ನಿವಾಸಿ ಸನೀಶ್ ಬಿ.ಟಿ.ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಎಂದು ಕೇಸು ದಾಖಲಾಗಿದೆ.

ಕೂಲಿಗಾಗಿ ಬಂದಿದ್ದರು:
ಶ್ರೀಕಿಸುನ್ ಹಾಗೂ ಆರೇಳು ಜನರ ತಂಡ ಹಲವು ತಿಂಗಳ ಹಿಂದೆ ಕಡಬ ಭಾಗಕ್ಕೆ ಕೆಲಸಕ್ಕೆ ಬಂದಿದ್ದು, ಕೆಲವೆಡೆ ದಿನಗೂಲಿ ಕೆಲಸ ನಿರ್ವಹಿಸಿ ಕೆಲವು ದಿನದ ಹಿಂದೆ ಮರಳು ತೆಗೆಯುವ ಕೆಲಸಕ್ಕೆ ಸೇರಿಕೊಂಡಿದ್ದರು. ಇವರು ಊರಿಗೆ ತೆರಳುವ ಸಿದ್ಧತೆಯಲ್ಲೂ ಇದ್ದರು. ಇದರ ಮಧ್ಯೆ ಶ್ರೀಕಿಸುನ್ ಸಿಡಿಲಿಗೆ ಬಲಿಯಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಒರ್ವ ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here