ಉಪ್ಪಿನಂಗಡಿ: ತೀವ್ರಗೊಂಡಿರುವ ಬಿಸಿಲ ಬೇಗೆಯ ನಡುವೆ ಅಲ್ಲಲ್ಲಿ ಮಳೆ ಸುರಿಯುತ್ತಿದ್ದರೂ ಮಂಗಳೂರಿಗೆ ಕುಡಿಯುವ ನೀರು ಒದಗಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಕುಸಿತವಾಗಿದ್ದು, ಸಮತೋಲನ ಅಣೆಕಟ್ಟಾಗಿರುವ ಬಿಳಿಯೂರು ಅಣೆಕಟ್ಟಿನಿಂದ ಸೋಮವಾರದಂದು ಪೂರ್ಣ ಪ್ರಮಾಣದಲ್ಲಿ ನೀರನ್ನು ಹರಿಯ ಬಿಟ್ಟ ಪರಿಣಾಮ ಹಿನ್ನೀರು ತಿಂಬಿಕೊಂಡಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿಯ ಒಡಲು ಬರಿದಾಗಿ ಹೋಗಿದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಸಣ್ಣ ನೀರಾವತಿ ಇಲಾಖಾ ಇಂಜಿನಿಯರ್ ಶಿವಪ್ರಸನ್ನರವರು , ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಹರಿಯ ಬಿಡಬೇಕೆಂದು ಜಿಲ್ಲಾಡಳಿತದಿಂದ ನಿರ್ದೇಶನ ಬಂದಿದ್ದು, ಸೋಮವಾರದಂದು ಎಲ್ಲಾ ಗೇಟುಗಳನ್ನು ತೆರೆಯಲಾಗಿದೆ. ಪರಿಣಾಮ ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದ ನೀರು ಸಂಪೂರ್ಣ ಹರಿದು ಹೋಗಿ ನದಿ ಬರಿದಾಗಿದೆ. ಹಾಗೂ ಮುಂಬರುವ ಮಳೆಗಾಲದ ಕಾರಣಕ್ಕೆ ಮತ್ತೆ ಗೇಟುಗಳನ್ನು ಅಳವಡಿಸಲಾಗುವುದಿಲ್ಲ. ಇನ್ನು ಏನಿದ್ದರೂ ಮಳೆಯ ನೀರನ್ನು ಅವಲಂಬಿಸಿ ನದಿಯಲ್ಲಿ ನೀರಿನ ಪ್ರಮಾಣ ಕಾಣಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ 1.5 ಮೀಟರ್ ಎತ್ತರದ ನೀರಿನ ಸಂಗ್ರಹವು ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರವುಗೊಳಿಸಿದ ಕಾರಣ ಸಾಯಂಕಾಲದ ವೇಳೆ ಉಪ್ಪಿನಂಗಡಿಯಲ್ಲಿ ನದಿಯ ಒಡಲು ಮುಕ್ಕಾಲು ಭಾಗ ತೆರೆದುಕೊಂಡಿದೆ. ಸೋಮವಾರ ನಸುಕಿನಲ್ಲಿ ಸುರಿದ ಭಾರೀ ಮಳೆ ಆದಿತ್ಯವಾರ ಸಾಯಂಕಾಲ ಒಂದು ಗಂಟೆ ಸಮಯ ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು, ಸೋಮವಾರ ನಸುಕಿನಲ್ಲಿಯೂ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗಾಳಿ ಮಳೆ ಸುರಿದಿದೆ.