ಪುತ್ತೂರು: ವರ್ಷದ ಮೊದಲ ಗಾಳಿ-ಮಳೆಗೆ 228 ಕಂಬ, 5 ಟಿ.ಸಿ.ಗಳಿಗೆ ಹಾನಿ: ರೂ.18 ಲಕ್ಷ ನಷ್ಟ

0

ಪುತ್ತೂರು:ಈ ವರ್ಷದ ಮೊದಲ ಗಾಳಿ, ಮಳೆ ಮೆಸ್ಕಾಂಗೆ ದೊಡ್ಡ ಹೊಡೆತ ನೀಡಿದೆ.ಎರಡು ದಿನಗಳಲ್ಲಿ ಸುರಿದ ಗಾಳಿ,ಮಳೆಗೆ ಮರಗಳು ವಿದ್ಯುತ್ ಲೈನ್, ಕಂಬಗಳ ಮೇಲೆ ಬಿದ್ದು ಕಂಬಗಳು, ಪರಿವರ್ತಕಗಳಿಗೆ ಹಾನಿಯುಂಟಾಗಿದ್ದು ಮೆಸ್ಕಾಂ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಅಪಾರ ನಷ್ಟ ಉಂಟಾಗಿದೆ.


ಮಳೆಗಾಲ ಆರಂಭಕ್ಕೂ ಮುನ್ನವೇ ಅಂದರೆ ಕಳೆದ ಎರಡು ದಿನಗಳಲ್ಲಿ ಸುರಿದ ಗಾಳಿ ಸಹಿತ ಮಳೆಗೆ ಪುತ್ತೂರು ವಿಭಾಗದ ವ್ಯಾಪ್ತಿಯ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ 228 ಕಂಬ ಹಾಗೂ 5 ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯುಂಟಾಗಿದ್ದು ರೂ.18 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.


ಮೇ 11ರ ಗಾಳಿ, ಮಳೆಗೆ ಮರಬಿದ್ದು ಪುತ್ತೂರಿನಲ್ಲಿ 11 ಕಂಬ, ಸುಳ್ಯದಲ್ಲಿ 29 ಕಂಬ, ಕಡಬದಲ್ಲಿ 26 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.ಮೇ 12ರ ತೀವ್ರ ಗಾಳಿ ಮಳೆಗೆ ಪುತ್ತೂರಿನಲ್ಲಿ 28 ಕಂಬಗಳು, ಸುಳ್ಯದಲ್ಲಿ 53 ವಿದ್ಯುತ್ ಕಂಬ ಹಾಗೂ 1 ವಿದ್ಯುತ್ ಪರಿವರ್ತಕ, ಕಡಬದಲ್ಲಿ 61 ವಿದ್ಯುತ್ ಕಂಬ ಹಾಗೂ 4 ವಿದ್ಯುತ್ ಪರಿವರ್ತಕಗಳಿಗೆ ಹಾನಿಯುಂಟಾಗಿದೆ.ಎರಡು ದಿನಗಳಲ್ಲಿ ಉಂಟಾದ ಹಾನಿಯಿಂದ ಮೆಸ್ಕಾಂಗೆ ಸುಮಾರು ರೂ.18 ಲಕ್ಷ ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.


ಹಾನಿಯಾದ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಪವರ್‌ಮೆನ್‌ಗಳ ಮೂಲಕ ನಿರ್ವಹಿಸಲಾಗುತ್ತಿದೆ.ಉಳಿದಂತೆ ಮಾನ್ಸೂನ್ ಗ್ಯಾಂಗ್ ಮತ್ತು ಸ್ಥಳೀಯ ಗುತ್ತಿಗೆದಾರರ ಮೂಲಕ ನೆರವೇರಿಸಲಾಗುತ್ತಿದೆ. ವಿದ್ಯುತ್ ಕಂಬಗಳು, ಪರಿವರ್ತಕ, ವಿದ್ಯುತ್ ಮಾರ್ಗಗಳ ಮರುಜೋಡಣೆಯಲ್ಲಿ ಮೆಸ್ಕಾಂ ಸಿಬ್ಬಂದಿಗಳು ಕಾರ್ಯನಿರತರಾಗಿದ್ದು ಶೇ.75ರಷ್ಟು ಮರುಜೋಡಣೆಯಾಗಿದೆ. ಮೇ .13ರ ಸಂಜೆ ವೇಳೆಗೆ ಸಂಪೂರ್ಣವಾಗಿ ಮರುಜೋಡಣೆಯಾಗಲಿದೆ.ಸಿಬ್ಬಂದಿಗಳ ಕೊರತೆಯ ಮಧ್ಯೆಯೂ ತುರ್ತು ಕಾಮಗಾರಿಗಳನ್ನು ನಡೆಸಲಾಗುತ್ತಿದೆ.ಗ್ರಾಹಕರು ಸಹಕರಿಸುವಂತೆ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here