ಇಚ್ಲಂಪಾಡಿ ಹಾ.ಉ.ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಆರಿಗ ಆತ್ಮಹತ್ಯೆ

0

ನೆಲ್ಯಾಡಿ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಮೇ .14ರಂದು ರಾತ್ರಿ ನಡೆದಿದೆ.


ಇಚ್ಲಂಪಾಡಿ ಗ್ರಾಮದ ಬೀಡುಬೈಲು ನಿವಾಸಿ, ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಆರಿಗ(78ವ.) ಆತ್ಮಹತ್ಯೆ ಮಾಡಿಕೊಂಡವರು. ನಾಗರಾಜ ಆರಿಗ ಅವರು ಬೀಡುಬೈಲು ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಒಬ್ಬಂಟಿಯಾಗಿ ವಾಸವಾಗಿದ್ದರು. ಇವರ ಮನೆ ಕೆಲಸದವರಾದ ಸುಧಾಕರ ಅವರು ಮೇ.14ರಂದು ಬೆಳಿಗ್ಗೆ 6.30 ಗಂಟೆಗೆ ನಾಗರಾಜ ಆರಿಗ ಅವರ ಮನೆಯಿಂದ ಎದ್ದು ಹೋದವರು ಹಗಲು ಕೆಲಸಕ್ಕೆ ಬಂದಿರಲಿಲ್ಲ. ಅದೇ ದಿನ ರಾತ್ರಿ 8.45 ಗಂಟೆಗೆ ಮನೆಗೆ ಮಲಗಲೆಂದು ಬಂದಾಗ ಮನೆಯಲ್ಲಿ ಲೈಟ್ ಉರಿಯದಿರುವುದನ್ನು ಕಂಡು ಮನೆಯ ಬಳಿ ಹೋಗಿ ನಾಗರಾಜ ಆರಿಗ ಅವರನ್ನು ಜೋರಾಗಿ ಕರೆದಾಗ ಮಾತನಾಡದೇ ಇದ್ದು ಸುತ್ತ ಮುತ್ತ ಹುಡುಕಾಡಿದಾಗ ರಾತ್ರಿ 9.45ರ ವೇಳೆಗೆ ಮನೆಯ ಸಮೀಪದಲ್ಲಿದ್ದ ಹುಣಸೆ ಮರದ ಗೆಲ್ಲಿಗೆ ನೈಲಾನ್ ಹಗ್ಗವನ್ನು ಬಿಗಿದುಕೊಂಡು ನೇತಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಸುಧಾಕರ ಅವರು ನಾಗರಾಜ ಆರಿಗ ಅವರ ಪುತ್ರಿ ರಶ್ಮಿ ಅವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದರು. ಅವರು ಮೇ.15ರದು ಬೆಳಿಗ್ಗೆ 5 ಗಂಟೆಗೆ ಬೀಡುಬೈಲು ಮನೆಗೆ ಬಂದಾಗ ನಾಗರಾಜ ಆರಿಗರವರು ಮೃತಪಟ್ಟಿದ್ದರು. ನಾಗರಾಜ ಆರಿಗ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ಹುಣಸೆ ಮರದ ಗೆಲ್ಲಿಗೆ ಹಾಗೂ ಕುತ್ತಿಗೆಗೆ ನೈಲಾನ್ ಹಗ್ಗವನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ಅವರ ಪುತ್ರಿ, ಬೆಂಗಳೂರಿನಲ್ಲಿ ನೆಲೆಸಿರುವ ಶಿಲ್ಪಾ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ನಾಗರಾಜ ಆರಿಗ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಲ್ಲಿ ಮೇಲ್ವಿಚಾರಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ ಧರ್ಮಸ್ಥಳ ಮೇಳದಲ್ಲಿ ಹಲವು ವರ್ಷಗಳ ಕಾಲ ’ಚೆಂಡೆ’ಗಾರರಾಗಿ ಕೆಲಸ ಮಾಡಿದ್ದು ಚೆಂಡೆ ನಾಗರಾಜ ಎಂದೇ ಕರೆಸಿಕೊಂಡಿದ್ದರು. ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯಲ್ಲೂ ಸಕ್ರಿಯವಾಗಿ ಕೆಲಸ ಮಾಡಿಕೊಂಡಿದ್ದರು. ಮೃತರ ಪತ್ನಿ ಕುಶಾಲ ಎನ್.ಆರಿಗ ಅವರು ಎರಡು ವರ್ಷದ ಹಿಂದೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಮೃತರು ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮೇ 15ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಡೆಯಿತು. ಹಲವು ಮಂದಿ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here