“ಅಟ್ಟಾಮುಟ್ಟಾ” ಮಕ್ಕಳ ಬೇಸಿಗೆ ಶಿಬಿರ ಸಮಾಪನ-ವಿವಿಧ ಚಟುವಟಿಕೆಗಳ ಜೊತೆ ಮೇಳೈಸಿತು “ಮಕ್ಕಳ ಸಂತೆ”

0

ಪುತ್ತೂರು: ಸಂಸಾರ ಜೋಡುಮಾರ್ಗ ಸಂಸ್ಥೆಯ ಆಶ್ರಯದಲ್ಲಿ ಜ್ಞಾನ ಬೆಳಕು ಬಳಗ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಹಾಗೂ ರೋಟರಿ ಪುತ್ತೂರು ಎಲೈಟ್ ಸಹಯೋಗದಲ್ಲಿ ಪುತ್ತೂರಿನ ಲಯನ್ಸ್ ಹಾಲ್ ನಲ್ಲಿ ನಡೆದ ನಾಲ್ಕು ದಿನಗಳ ’ಅಟ್ಟಾಮುಟ್ಟಾ’ ಮಕ್ಕಳ ಬೇಸಿಗೆ ಶಿಬಿರ ಮೇ.14 ರಂದು ಸಮಾಪನಗೊಂಡಿತು.


27 ಶಾಲೆಗಳ 52 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದು, ಹಲವು ವಿಶಿಷ್ಟ ಚಟುವಟಿಕೆಗಳು ಅಟ್ಟಾಮುಟ್ಟಾಕ್ಕೆ ಮೆರುಗು ತಂದಿತು. ರಂಗಾಟಗಳು,ಹಾಡು,ಕುಣಿತ,ಪೊಲೀಸ್ ಠಾಣೆ ಭೇಟಿ,ವಿಜ್ಞಾನ ಪ್ರಪಂಚ,ಕಥಾಲೋಕ,ನಾಟಕ, ಕ್ರಾಫ್ಟ್,ಕಸದಿಂದ ರಸ,ಚಿತ್ರಕಲೆ,ಯೋಗ ಮೊದಲಾದವುಗಳನ್ನು ಅರ್ಥಪೂರ್ಣವಾಗಿ ಸಂಯೋಜಿಸಲಾಗಿತ್ತು. ಇದೇ ವೇಳೆ ನಡೆಸಿದ ಮಕ್ಕಳ ಸಂತೆ ಶಿಬಿರದ ಮಕ್ಕಳ ಲವಲವಿಕೆಯೊಂದಿಗೆ ಪರಿಣಾಮಕಾರಿಯಾಗಿ ಮೂಡಿಬಂತು.


ಏನಿದು ಮಕ್ಕಳ ಸಂತೆ..?
ಮಕ್ಕಳು ತಾವೇ ವ್ಯಾಪಾರಿಗಳಾಗಿ ಗ್ರಾಹಕರನ್ನು ಕರೆದು ತರಕಾರಿ ಮಾರುವ ದೃಶ್ಯ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂತು. ತಲೆಗೆ ಮುಂಡಾಸು ಕಟ್ಟಿಕೊಂಡ ಬಾಲಕರು ಗ್ರಾಹಕರನ್ನು ತಮ್ಮತ್ತ ಆಕರ್ಷಿಸಿ, ತರಕಾರಿಗಳ ದರ ಹೇಳಿ, ಕೇಳಿದಷ್ಟನ್ನು ತೂಕದ ಯಂತ್ರದಲ್ಲಿ ತೂಗಿ ಕೊಟ್ಟು ಹಣ ಪಡೆದುಕೊಳ್ಳುತ್ತಿದ್ದರು. ನಾಲ್ಕು ಗುಂಪುಗಳಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳು ಉತ್ತಮ ವ್ಯಾಪಾರ ನಡೆಸಿದರೆ, ಪುಟ್ಟ ಪುಟಾಣಿ ಮಕ್ಕಳು ಗೊಂಬೆ ಹಾಗೂ ಮುಸುಂಬಿ ಮಾರಾಟ ನಡೆಸಿದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಹಾಗೂ ರೋಟರಿ ಪುತ್ತೂರು ಎಲೈಟ್ ಸದಸ್ಯ ಈಶ್ವರ್ ಬೆಡೇಕರ್ ಮಕ್ಕಳ ಸಂತೆಯಲ್ಲಿ ಭಾಗಿಯಾಗಿ ಮಕ್ಕಳನ್ನು ಹುರಿದುಂಬಿಸಿದರು. ಸಂತೆ ವ್ಯಾಪಾರದ ಮೂಲಕ ಮಕ್ಕಳು ಮಾರುಕಟ್ಟೆ ವ್ಯವಸ್ಥೆಯ ಪರಿಕಲ್ಪನೆ, ಸಂವಹನ ಕೌಶಲ್ಯ, ವ್ಯವಹಾರದ ಚತುರತೆ, ಹಣಕಾಸಿನ ಲೆಕ್ಕಾಚಾರ, ಲಾಭ ನಷ್ಟಗಳ ಅಂದಾಜು ಇವುಗಳ ಕುರಿತಾಗಿ ತಿಳಿದುಕೊಂಡರು.


ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಎಸ್.ಎನ್.ಭಟ್ ಅವರು, ಸಮಾರೋಪದ ಮಾತುಗಳನ್ನಾಡಿದರು. ಪ್ರತೀ ಮಕ್ಕಳಿಗೆ ಬೇಸಿಗೆ ಶಿಬಿರದ ಅನುಭವಗಳು ದೊರಕಬೇಕು, ಅಟ್ಟಾಮುಟ್ಟಾ ವಿಶೇಷ ಅನುಭವಗಳನ್ನು ಕಟ್ಟಿಕೊಟ್ಟಿದೆ ಎಂದರು. ಶಿಕ್ಷಕ ಸತೀಶ್ ರವರು ಮಾತನಾಡಿ, ಕಳೆದ ಬಾರಿಯ ಶಿಬಿರಕ್ಕಿಂತ ವಿಭಿನ್ನವಾಗಿ ಈ ಬಾರಿಯ ಅಟ್ಟಾಮುಟ್ಟಾ ಆಯೋಜನೆಯಾಗಿತ್ತು ಎಂದರು. ಜ್ಞಾನಬೆಳಕು ಬಳಗದ ಟ್ರಸ್ಟಿ ರಾಕೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದ ಮಕ್ಕಳು ಹಾಗೂ ಮಕ್ಕಳ ಪೋಷಕರು ಅನಿಸಿಕೆ ವ್ಯಕ್ತಪಡಿಸಿದರು. ಇದೇ ವೇಳೆ ಶಿಬಿರದ ಯಶಸ್ಸಿಗೆ ಸಹಕರಿಸಿದ ಜ್ಞಾನಬೆಳಕು ಬಳಗದ ಮುಖ್ಯಸ್ಥ ಚಂದ್ರಮೌಳಿ, ಶಿಕ್ಷಕಿಯರಾದ ಅನುಸೂಯ, ಜಯಶ್ರೀ ಆಚಾರ್ಯ, ಚೈತ್ರಾ ರವರನ್ನು ಗೌರವಿಸಲಾಯಿತು. ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here