ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸುತ್ತಾಡುತ್ತಿದ್ದ ಬೀಡಾಡಿ ಎರಡು ಹೋರಿಗಳು ನಾಪತ್ತೆಯಾದ ಬಳಿಕ ಹೋರಿಗಳು ಮರಳಿ ಬರುವಂತೆ ಭಕ್ತರು ಶ್ರೀ ದೇವರ ಮೊರೆ ಹೋಗಿದ್ದಾರೆ. ಹೋರಿ ನಾಪತ್ತೆಯಾದ ಮೂರು ದಿನದೊಳಗೆ ಕೆಲ ಭಕ್ತರು ಪ್ರತ್ಯೇಕ ಪ್ರತ್ಯೇಕವಾಗಿ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.
ಸಾಧು ಸ್ವಭಾವದ ಬಿಳಿ ಬಣ್ಣದ ಮತ್ತು ಕಪ್ಪು ಬಣ್ಣದ ಎರಡು ಹೋರಿಗಳು ಹಲವು ಸಮಯಗಳಿಂದ ದೇವಳದ ವಠಾರದಲ್ಲೇ ಸುತ್ತಾಡುತ್ತಿತ್ತು. ಭಕ್ತರು ನೀಡುವ ಬಾಳೆಹಣ್ಣು ತಿಂದು, ಮಧ್ಯಾಹ್ನ, ಸಂಜೆ ಎಪಿಎಂಸಿ, ರೈಲ್ವೇ ನಿಲ್ದಾಣ ರಸ್ತೆ ಹೀಗೆ ಹಲವು ಕಡೆ ಸುತ್ತಾಡುತ್ತಿತ್ತು. ಆದರೆ ಮೇ.1ರಿಂದ ಹೋರಿಗಳೆರಡು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು ದೇವಳಕ್ಕೆ ನಿತ್ಯ ಬರುವ ಭಕ್ತರು ಹೋರಿ ನಾಪತ್ತೆಯ ಕುರಿತು ಬೇಸರ ವ್ಯಕ್ತಪಡಿಸಿದರು. ಈ ನಡುವೆ ಕೆಲ ಭಕ್ತರು ದೇವಳದಲ್ಲಿ ಹೋರಿ ಮತ್ತೆ ಬರುವಿಕೆಯ ಕುರಿತು ದೇವಳದಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಜ್ಯೋತಿಷಿ ಮೊರೆ ಹೋದ ಭಕ್ತರು:
ಕೆಲ ಭಕ್ತರು ಹೋರಿಯ ಪತ್ತೆಗಾಗಿ ಜ್ಯೋತಿಷಿ ಮೊರೆ ಹೋಗಿದ್ದು, ಜ್ಯೋತಿಷಿ ಪ್ರಕಾರ ಹೋರಿಗಳೆರಡು ಸುಮಾರು 30 ಕಿ.ಮೀ ದೂರದಲ್ಲಿ ಬಂಧನದಲ್ಲಿದೆ. ದೇವರಿಗೆ ಸಂಬಂಧಿಸಿದ ಹೋರಿಯಾದ್ದರಿಂದ ಅವರು ಅದನ್ನು ಬಿಟ್ಟು ಬಿಡುವ ಸಾಧ್ಯತೆ ಇದೆ ಎಂದು ಜ್ಯೋತಿಷಿ ತಿಳಿಸಿರುವ ಕುರಿತು ಹೆಸರು ಹೇಳಲು ಇಚ್ಚಿಸದ ಭಕ್ತರು ಮಾಹಿತಿ ನೀಡಿದ್ದಾರೆ.