‘ಅಲ್ ಮಾಹಿರಾ’ ಪದವಿ ಸ್ವೀಕರಿಸಿದ 240 ಶರೀಅತ್ ವಿದ್ಯಾರ್ಥಿನಿಯರು
ಸಾವಿರಾರು ಮಹಿಳೆಯರು ಭಾಗಿ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಐತಿಹಾಸಿಕ ಪದವಿ ಪ್ರದಾನ ಸಮ್ಮೇಳನ ಮೇ.16ರಂದು ನಡೆಯಿತು.ಶರೀಅತ್ ವಿಭಾಗದಲ್ಲಿ ಕಲಿತ 240 ವಿದ್ಯಾರ್ಥಿನಿಯರಿಗೆ ‘ಅಲ್ ಮಾಹಿರಾ’ ಪದವಿ ಪ್ರದಾನ ಮಾಡಲಾಯಿತು. ಪದವಿ ಪ್ರದಾನ ಸಮಾರಂಭದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ನಿರೀಕ್ಷೆಗೂ ಮೀರಿ ಸಾವಿರಾರು ಮಂದಿ ಆಗಮಿಸಿದ್ದರು. ಸಯ್ಯಿದತ್ ಕುಬ್ರಾ ಬೀವಿ ಬಾಅಲವಿ ಉಜಿರೆ, ಸಯ್ಯಿದತ್ ಮೈಮೂನ ಬೀವಿ ಅಲ್ ಮಶಹೂರ್ ಆದೂರ್, ಸಯ್ಯಿದತ್ ತಾಹಿರಾ ಬೀವಿ ಅಲ್ ಬುಖಾರಿ ಸುಳ್ಯ ಇವರು ನೂತನ ಪದವೀದರ ವಿದ್ಯಾರ್ಥಿನಿಯರಿಗೆ ಮಾಹಿರಾ ಪದವಿ, ಸರ್ಟಿಫಿಕೇಟ್ ಹಸ್ತಾಂತರ ಮಾಡಿದರು.ಮಹಿಳಾ ಸಮಾವೇಶ ಸಭಾಧ್ಯಕ್ಷತೆಯನ್ನು ಬೀಫಾತಿಮಾ ಅರಿಯಡ್ಕ ವಹಿಸಿದ್ದರು.
ಸಮಾಜದ ಅಭಿಮಾನ-ಸಯೀದಾ
ಸಭೆ ಉದ್ಘಾಟಿಸಿದ ಕೆ.ಸಿ ರೋಡ್ ಮಿನ್ಹಾಜ್ ಮಹಿಳಾ ಕಾಲೇಜಿನ ಉಪ ಪ್ರಾಂಶುಪಾಲರಾದ ಸಯೀದಾ ಫಾತಿಮಾ ಅಲ್ ಮಾಹಿರಾ ಮಾತನಾಡಿ ಸಮಾಜದಲ್ಲಿ ಸಂಸ್ಕಾರಯುತ, ಆದರ್ಶ ಮಹಿಳೆಯರನ್ನು ತಯಾರುಗೊಳಿಸುವ ಮರ್ಕಝ್ ಸಂಸ್ಥೆ ಸಮಾಜದ ಅಭಿಮಾನವಾಗಿದೆ ಎಂದು ಹೇಳಿದರು.
ಮರ್ಕಝ್ ಸಮಾಜದ ಸೊತ್ತು-ಡಾ.ಮರ್ಯಂ ಅಂಜುಮ್
ಅತಿಥಿಯಾಗಿದ್ದ ಡಾ.ಮರ್ಯಂ ಅಂಜುಮ್ ಇಫ್ತಿಕಾರ್ ಮಂಗಳೂರು ಮಾತನಾಡಿ ಇಂತಹ ಅದ್ಭುತವಾದ ಸಂಸ್ಥೆ ನೋಡಿ ನನಗೆ ಸಂತೋಷವಾಗಿದೆ. ಮರ್ಕಝ್ ಸಮಾಜದ ಸೊತ್ತು. ಇದನ್ನು ಬೆಳೆಸಿ ಪೋಷಿಸಬೇಕು. ಸಮಾಜದ ಅದ್ಬುತ ಕ್ರಾಂತಿಗೆ ಇದು ಇನ್ನಷ್ಟು ಬೆಳೆದು ನಿಲ್ಲಲಿ ಎಂದು ಹಾರೈಸಿದರು.
ಫಾತಿಮಾ ಅಲ್ ಮಾಹಿರಾ ಮುಕ್ವೆ ದುವಾ ನೆರವೇರಿಸಿದರು. ಫಹೀಮಾ ಇಂದ್ರಾಜೆ ಖಿರಾಅತ್ ಪಠಿಸಿದರು.
ಶರೀಅತ್ ಶಿಕ್ಷಕಿ ಬುಶ್ರಾ ಅಲ್ ಮಾಹಿರಾ ಸ್ವಾಗತಿಸಿದರು. ಶರೀಅತ್ ಉಪನ್ಯಾಸಕಿ ಹಸ್ನಾ ಸೋಫಿಯಾ ವಂದಿಸಿದರು.ವೇದಿಕೆಯಲ್ಲಿ ಹಾಜರಾ ಕೈಕಾರ, ತಾಹಿರಾ ಸುಳ್ಯ, ರುಹಾನ ಮಂಗಳೂರು, ಝೈನಬಾ ರೆಂಜ, ಸಮೀರಾ ಶೇಕಮಲೆ, ಖೈರುನ್ನಿಸಾ, ಮುಫೀಸಾ, ಸಂಶಾದ್ ಬೇಗಂ ಸುಳ್ಯ, ಝುಬೈದಾ ಮೈದಾನಿಮೂಲೆ, ಝುಬೈದಾ ಆಕರ್ಷಣ್, ಖೈರುನ್ನಿಸಾ ಎಸ್.ಎಂ ಶೇಖಮಲೆ ಮರ್ಕಝುಲ್ ಹುದಾ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಸಂಧ್ಯಾ ಪಿ ಉಪಸ್ಥಿತರಿದ್ದರು.