ಕಡಬ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯ 3ನೇ ಶಾಖೆ ಉದ್ಘಾಟನೆ

0

ಸಂಘದ ಬೆಳವಣಿಗೆಗೆ ಮಾನಸಿಕ ಗಟ್ಟಿತನ, ಚಾಕಚಕ್ಯತೆ, ಸಾರ್ವಜನಿಕ ಸಂಪರ್ಕ ಅತೀ ಮುಖ್ಯ: ಸುಬ್ರಹ್ಮಣ್ಯ ಶ್ರೀ

  • ಸೌಹಾರ್ದತೆಯಿಂದ ಮುನ್ನಡೆಯುತ್ತಿದೆ: ಪಿ.ಕೆ.ಅಬ್ರಹಾಂ
  • ನಂಬಿಕೆ,ವಿಶ್ವಾಸದ ಮೇಲೆ ನಡೆಯುತ್ತಿವೆ: ಇನಾಯತ್ ಆಲಿ
  • ರಾಜ್ಯದಲ್ಲಿ 5600 ಸೌಹಾರ್ದ ಸಹಕಾರಿ ಸಂಘ: ವಿಜಯ ಬಿ.ಎಸ್.
  • ಕಡಬದಲ್ಲಿ 40 ಬ್ಯಾಂಕ್‌ಗಳಿವೆ: ಸೈಮನ್ ಸಿ.ಜೆ.
  • ಸಮಾಜದ ಎಲ್ಲಾ ವರ್ಗದ ಜನರ ಬೆಂಬಲವಿದೆ: ಹರೀಶ್‌ಕುಮಾರ್

ಕಡಬ: ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯ 3ನೇ ಕಡಬ ಶಾಖೆ ಮೇ 16ರಂದು ಕಡಬ ಚಾಚಾ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತು.ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಶಾಖೆ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಗ್ರಾಮೀಣ ಪ್ರದೇಶದಲ್ಲಿ ಸೌಹಾರ್ದ ಸಹಕಾರಿ ಸಂಘಗಳು ಸರಳ ನಿಯಮಗಳೊಂದಿಗೆ ಜನರಿಗೆ ಉತ್ತಮ ಸೇವೆ ನೀಡುತ್ತಿವೆ. ಅವಿಭಜಿತ ದ.ಕ.ಜಿಲ್ಲೆ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಇವುಗಳನ್ನು ಮಾದರಿಯಾಗಿಟ್ಟುಕೊಂಡೇ ಎಲ್ಲಾ ಕಡೆ ಬ್ಯಾಂಕಿಂಗ್ ವ್ಯವಸ್ಥೆ ಬೆಳೆದಿದೆ.

ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲೂ ಸಹಕಾರಿ ಸಂಘಗಳದ್ದು ಪ್ರಮುಖ ಪಾತ್ರವಿದೆ ಎಂದು ನುಡಿದರು. ಸಹಕಾರಿ ಸಂಘಗಳ ಬೆಳವಣಿಗೆಗೆ ಮಾನಸಿಕ ಗಟ್ಟಿತನ, ಚಾಕಚಕ್ಯತೆ, ಸಾರ್ವಜನಿಕರ ಸಂಪರ್ಕ ಅತೀ ಮುಖ್ಯವಾಗಿದೆ. ಇವೆಲ್ಲವನ್ನೂ ಬೆಳೆಸಿಕೊಂಡಿರುವ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಹರೀಶ್‌ಕುಮಾರ್ ಅವರು ಜನರೊಂದಿಗೆ ಪಕ್ಷಾತೀತವಾಗಿ ಬೆರೆತುಕೊಂಡಿರುವುದರಿಂದಲೇ ಈ ಸಹಕಾರಿ ಸಂಘವೂ ಉತ್ತಮವಾಗಿ ಬೆಳೆದಿದೆ. ಈ ಸಂಘದಿಂದ ಸ್ಥಳೀಯರಿಗೆ ಹೆಚ್ಚಿನ ಸಹಕಾರ ಸಿಗಲಿ. ಮುಂದೆ ಜಿಲ್ಲೆ, ರಾಜ್ಯದಲ್ಲೂ ಶಾಖೆ ತೆರೆಯುವಂತೆ ಆಗಲಿ. ಈ ಮೂಲಕ ಹರೀಶ್ ಕುಮಾರ್ ಅವರ ಕೀರ್ತಿಯೂ ಉತ್ತುಂಗಕ್ಕೇರಲಿ ಎಂದು ಸ್ವಾಮೀಜಿ ಹಾರೈಸಿದರು.

ಸೌಹಾರ್ದತೆಯಿಂದ ಮುನ್ನಡೆಯುತ್ತಿದೆ:
ಭದ್ರತಾ ಕೊಠಡಿ ಉದ್ಘಾಟಿಸಿದ ಅತೀ ವಂದನೀಯ ಪಿ.ಕೆ.ಅಬ್ರಹಾಂ ಕೋರ್ ಎಪಿಸ್ಕೋಪಾ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಕಡಬದಲ್ಲಿ ಸುಮಾರು 40 ಬ್ಯಾಂಕ್‌ಗಳಿವೆ. ಇದು ಕಡಬದ ಜನತೆಗೆ ಹೆಗ್ಗಳಿಕೆಯೂ ಆಗಿದೆ. ಇದೀಗ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಇನ್ನೊಂದು ಸೇರ್ಪಡೆಯಾಗಿದೆ. ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯೂ ಎಲ್ಲರನ್ನೂ ಸೇರಿಸಿಕೊಂಡು ಸೌಹಾರ್ದತೆಯಿಂದ ಮುನ್ನಡೆಯುತ್ತಿದೆ. ಇದರ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಹೇಳಿದರು.

ನಂಬಿಕೆ,ವಿಶ್ವಾಸದ ಮೇಲೆ ನಡೆಯುತ್ತಿವೆ:
ನಿರಖು ಠೇವಣಿ ಪತ್ರ ಬಿಡುಗಡೆಗೊಳಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಮಾತನಾಡಿ, ಬ್ಯಾಂಕ್, ಸೊಸೈಟಿಗಳು ನಂಬಿಕೆ, ವಿಶ್ವಾಸದ ಮೇಲೆ ನಡೆಯುತ್ತವೆ. ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಹರೀಶ್‌ಕುಮಾರ್ ಮತ್ತು ಅವರ ತಂಡ ಗ್ರಾಹಕರ ನಂಬಿಕೆ, ವಿಶ್ವಾಸ ಗಳಿಸಿ ನಿಸ್ವಾರ್ಥ ಸೇವೆಯಿಂದ ಕೆಲಸ ಮಾಡುತ್ತಿದೆ. ದ.ಕ.ಜಿಲ್ಲೆ ದೇಶಕ್ಕೆ 5 ಬ್ಯಾಂಕ್‌ಗಳನ್ನು ನೀಡಿತ್ತು. ಈಗಿರುವ ಬ್ಯಾಂಕ್‌ಗಳು ಇನ್ನಷ್ಟೂ ಬ್ಯಾಂಕ್‌ಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳಲಿ. ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯು ಗುರುಪುರ ಸುರತ್ಕಲ್‌ನಲ್ಲೂ ತನ್ನ ಶಾಖೆ ತೆರೆಯಬೇಕು. ರಾಜ್ಯದುದಕ್ಕೂ ಇದರ ಶಾಖೆ ಆರಂಭಗೊಳ್ಳಲಿ ಎಂದರು.

ರಾಜ್ಯದಲ್ಲಿ 5600 ಸೌಹಾರ್ದ ಸಹಕಾರಿ ಸಂಘ:
ಗಣಕಯಂತ್ರ ಉದ್ಘಾಟಿಸಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಜಿಲ್ಲಾ ಸಂಯೋಜಕರಾದ ವಿಜಯ ಬಿ.ಎಸ್.ಅವರು ಮಾತನಾಡಿ,
2000-01ನೇ ಸಾಲಿನಲ್ಲಿ ಸೌಹಾರ್ದ ಸಹಕಾರಿ ಕಾನೂನು ಜಾರಿಗೆ ಬಂದಿದೆ. ಈಗ ರಾಜ್ಯದಲ್ಲಿ 6500 ಸೌಹಾರ್ದ ಸಹಕಾರಿ ಸಂಘಗಳಿವೆ. ದ.ಕ.ಜಿಲ್ಲೆಯಲ್ಲಿ 135 ಸೌಹಾರ್ದ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸೌಹಾರ್ದ ಸಹಕಾರಿ ಸಂಘಗಳು ಸರಕಾರದಿಂದ ಯಾವುದೇ ಸಹಾಯವನ್ನು ಪಡೆಯದೇ ಸದಸ್ಯರಿಂದಲೇ ಠೇವಣಿ ಸಂಗ್ರಹಿಸಿ ಸದಸ್ಯರಿಗೆ ಸಾಲ, ಇತರೇ ಸೌಲಭ್ಯ ನೀಡಿ ಅದರಿಂದ ಬರುವ ಲಾಭವನ್ನು ಡಿವಿಡೆಂಡ್ ರೂಪದಲ್ಲಿ ನೀಡುತ್ತಿವೆ. ನಾಲ್ಕು ವರ್ಷದ ಹಿಂದೆ ಬೆಳ್ತಂಗಡಿಯಲ್ಲಿ ಆರಂಭಗೊಂಡಿರುವ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಆರ್ಥಿಕ ಸೌಲಭ್ಯ ಒದಗಿಸುವ ಉದ್ದೇಶವಿಟ್ಟುಕೊಂಡು ಶಾಖೆ ಆರಂಭಿಸುತ್ತಿದೆ. ಮುಂದೆ ನಗರ ಪ್ರದೇಶದಲ್ಲೂ ಶಾಖೆ ತೆರೆಯಬೇಕು. ಜಿಲ್ಲೆಗೆ, ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಹೇಳಿದರು.

ಕಡಬದಲ್ಲಿ 40 ಬ್ಯಾಂಕ್‌ಗಳಿವೆ:
ಕಡಬ ಚಾಚಾ ಕಾಂಪ್ಲೆಕ್ಸ್‌ನ ಮಾಲಕರಾದ ಸೈಮನ್ ಸಿ.ಜೆ.ಅವರು ಮಾತನಾಡಿ, ಕಡಬ ಸಂತೆಕಟ್ಟೆ ಪ್ರದೇಶದ ಮೂರು ಕಟ್ಟಡದಲ್ಲಿ 9 ಬ್ಯಾಂಕ್‌ಗಳಿವೆ. ಕಡಬ ಪೇಟೆಯಲ್ಲಿ ಒಟ್ಟು 40 ಬ್ಯಾಂಕ್‌ಗಳಿವೆ. ಎಲ್ಲಾ ಬ್ಯಾಂಕ್‌ಗಳಲ್ಲೂ ಉತ್ತಮ ವ್ಯವಹಾರ ನಡೆಯುತ್ತಿದೆ. ಇನ್ನಷ್ಟೂ ಬ್ಯಾಂಕ್‌ಗಳೂ ಇಲ್ಲಿಗೆ ಬರಬೇಕು. ಪೈಪೋಟಿ ಇರುವುದರಿಂದ ಸಿಬ್ಬಂದಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು. ಈ ಮೂಲಕ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯು ಕಡಬದ ಜನತೆಗೆ ಪ್ರಿಯವಾದ ಬ್ಯಾಂಕ್ ಆಗಿ ಮೂಡಿಬರಲಿ ಎಂದು ಹೇಳಿದರು.

ಸಮಾಜದ ಎಲ್ಲಾ ವರ್ಗದ ಜನರ ಬೆಂಬಲವಿದೆ:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯ ಅಧ್ಯಕ್ಷರೂ, ವಿಧಾನ ಪರಿಷತ್ ಸದಸ್ಯರೂ ಆಗಿರುವ ಹರೀಶ್‌ಕುಮಾರ್ ಅವರು ಮಾತನಾಡಿ, ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘಕ್ಕೆ ಯಾವುದೇ ಜಾತಿ ಸಂಘಟನೆ, ಸಂಘ ಸಂಸ್ಥೆಯ ಬೆಂಬಲವಿಲ್ಲ. ಸಮಾಜದ ಎಲ್ಲಾ ವರ್ಗದ ಜನರ ವಿಶ್ವಾಸ, ನಂಬಿಕೆಯ ಬಲವಾದ ಬೆಂಬಲದೊಂದಿಗೆ ಮುನ್ನಡೆಯುತ್ತಿದೆ. ಗ್ರಾಮೀಣ ಪ್ರದೇಶವನ್ನೇ ಆಯ್ದುಕೊಂಡು ಶಾಖೆ ತೆರೆಯುತ್ತಿದ್ದೇವೆ. ಕಳೆದ ವರ್ಷ ನಿಡ್ಲೆಯಲ್ಲಿ ಶಾಖೆ ತೆರೆಯಲಾಗಿತ್ತು. ಇದೀಗ ಕಡಬದಲ್ಲಿ ಶಾಖೆ ಆರಂಭಿಸಿದ್ದು ಸಂಘವನ್ನು ಬೆಳೆಸುವ ಜವಾಬ್ದಾರಿ ಕಡಬದ ಜನರದ್ದೇ ಆಗಿದೆ ಎಂದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯದ ನೌಕರರೇ ಹೆಚ್ಚಿರುವುದರಿಂದ ಇಲ್ಲಿನ ಜನರಿಗೆ ವ್ಯವಹಾರ ಕಷ್ಟ ಆಗುತ್ತಿದೆ. ಆದರೆ ಸಹಕಾರಿ ಸಂಘಗಳಲ್ಲಿ ಸ್ಥಳೀಯ ನೌಕರರೇ ಇರುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ಸಿಗುತ್ತಿದೆ. ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘವು ಗ್ರಾಹಕರ ಸಹಕಾರ, ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಲಾಭದಲ್ಲಿ ಮುನ್ನಡೆಯುತ್ತಿದೆ. ಕಳೆದ ವರ್ಷ 120 ಕೋಟಿ ರೂ.ವ್ಯವಹಾರ ಮಾಡಿ 43 ಲಕ್ಷ ರೂ.ಲಾಭಗಳಿಸಿದೆ. ಶೇ.98ರಷ್ಟು ಸಾಲ ವಸೂಲಾತಿಯೂ ಆಗಿದೆ ಎಂದು ಹೇಳಿದರು.


ಸಂಘದ ನಿರ್ದೇಶಕ ಉಮೇಶ್ ಎ.ಬಿ.ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾನ್ಯ ಜನರಿಗೆ ಹಾಗೂ ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಸೌಲಭ್ಯ ಒದಗಿಸುವ ಸದುದ್ದೇಶದೊಂದಿಗೆ ವಿಧಾನಪರಿಷತ್ ಸದಸ್ಯರಾದ ಹರೀಶ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿಯು ಆರಂಭಗೊಂಡಿದೆ. 2020 ಜ.25ರಂದು ಬೆಳ್ತಂಗಡಿಯಲ್ಲಿ ಸಂಘ ಉದ್ಘಾಟನೆಗೊಂಡಿತು. ಪ್ರಾರಂಭಿಕ ವರ್ಷದಲ್ಲೇ ಸಂಘ 5.91 ಲಕ್ಷ ರೂ.ಲಾಭಗಳಿಸಿತ್ತು. 2022-23ನೇ ಸಾಲಿನಲ್ಲಿ 43.62 ಲಕ್ಷ ರೂ.ಲಾಭಗಳಿಸಿತ್ತು. 2023-24ನೇ ಸಾಲಿನಲ್ಲಿ 50 ಲಕ್ಷ ರೂ.ಲಾಭಗಳಿಸುವ ನಿರೀಕ್ಷೆ ಇದೆ. ಲೆಕ್ಕಪರಿಶೋಧನೆಯಲ್ಲಿ ಎ ತರಗತಿಯಲ್ಲಿದೆ. ನಿಡ್ಲೆಯಲ್ಲಿ ಸಂಘದ ೨ನೇ ಶಾಖೆ ತೆರೆಯಲಾಗಿದ್ದು ಇದೀಗ ಕಡಬದಲ್ಲಿ 3ನೇ ಶಾಖೆ ಆರಂಭಿಸಲಾಗಿದ್ದು ಇನ್ನಷ್ಟೂ ಶಾಖೆ ತೆರೆಯಲು ಗ್ರಾಹಕರು ಸಹಕಾರ ನೀಡಬೇಕೆಂದು ಹೇಳಿದರು.


ಸಂಘದ ಸದಸ್ಯರಾದ ಚಂದಪ್ಪ ಪೂಜಾರಿ, ಸುಗಂಧಿ ಕೆ. ಹಾಗೂ ರೋಹಿಣಿ ಅವರಿಗೆ ನಿರಖು ಠೇವಣಿ ಪತ್ರ ನೀಡಲಾಯಿತು. ಸಂಘದ ಉಪಾಧ್ಯಕ್ಷರಾದ ಗಂಗಾಧರ ಮಿತ್ತಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್‌ಕುಮಾರ್ ವರದಿ ವಾಚಿಸಿದರು. ನಿರ್ದೇಶಕರಾದ ರಾಮಚಂದ್ರ ಗೌಡ ಸ್ವಾಗತಿಸಿ, ಮೋಹನ್ ಶೆಟ್ಟಿಗಾರ್ ವಂದಿಸಿದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ನಿರೂಪಿಸಿದರು.

ಸಿಬ್ಬಂದಿಗಳಾದ ಅನುಶ್ರೀ ಎಂ., ರಮ್ಯಶಾರದಾ ಅವರು ಪ್ರಾರ್ಥಿಸಿದರು. ನಿರ್ದೇಶಕರಾದ ಬಿ.ಎಂ.ಅಬ್ದುಲ್ ಹಮೀದ್, ಬಿ.ರಾಜಶೇಖರ ಅಜ್ರಿ, ಕೆ.ಎಸ್.ಯೋಗೀಶ್‌ಕುಮಾರ್, ಶೈಲೇಶ್‌ಕುಮಾರ್, ಎ.ರಮೇಶ್ ಪೂಜಾರಿ, ರಾಮಚಂದ್ರ ಭಟ್ ಅರೆಕ್ಕಲ್, ಉಷಾಶರತ್, ಜೆಸಿಂತಾ ಮೋನಿಸ್, ರಾಗ್ನೀಶ್, ಅಭಿನಂದನ್ ಹರೀಶ್‌ಕುಮಾರ್, ಸಿಬ್ಬಂದಿಗಳಾದ ಜನೀಶ್, ಯುವರಾಜ್, ಮನೋಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆಯರಾದ ಉಷಾ ಅಂಚನ್, ಆಶಾ ಲಕ್ಷ್ಮಣ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸತೀಶ್‌ಕುಮಾರ್ ಕೆಡೆಂಜಿ, ಗಣೇಶ್ ಕೈಕುರೆ, ಬಾಲಕೃಷ್ಣ ಬಳ್ಳೇರಿ, ವಿಜಯಕುಮಾರ್ ಕೆರ್ಮಾಯಿ, ಶಿರಾಡಿ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್, ಪ್ರಮುಖರಾದ ನಮಿತಾಹರೀಶ್ ಕುಮಾರ್, ವಿಜಯಕುಮಾರ್ ಸೊರಕೆ, ಶೀನಪ್ಪ ಗೌಡ ಬೈತಡ್ಕ, ಕೆ.ಪಿ.ತೋಮಸ್ ನೆಲ್ಯಾಡಿ, ಮುತ್ತಪ್ಪ ಪೂಜಾರಿ ನೆಯ್ಯಲ್ಗ, ಜನಾರ್ದನ ಗೌಡ ಪಣೆಮಜಲು, ಪ್ರವೀಣ್ ಕುಮಾರ್ ಕೆಡೆಂಜಿ, ನೀಲಾವತಿ ಶಿವರಾಮ್, ಯತೀಶ್ ಬಾನಡ್ಕ, ಕೆ.ಎಂ.ಹನೀಫ್, ಹೆಚ್.ಕೆ.ಇಲ್ಯಾಸ್, ಅಭಿಲಾಷ್ ಪಿ.ಕೆ., ಎಂ.ಕೆ.ಪೌಲೋಸ್, ಲಕ್ಷ್ಮೀಶ ಗಬ್ಲಡ್ಕ, ಟಿ.ಎಂ.ಮ್ಯಾಥ್ಯು, ಶಾಜು ಸೇರಿದಂತೆ ಹಲವು ಮಂದಿ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here