ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಗುರುಗಳ ವರ್ಗಾವಣೆ ಪಟ್ಟಿ ಪ್ರಕಟ

0

ಉಪ್ಪಿನಂಗಡಿಗೆ ವಂ|ಜೆರಾಲ್ಡ್, ಮರೀಲಿಗೆ ವಂ|ಜೆ.ಬಿ ಮೊರಾಸ್, ಫಿಲೋಮಿನಾ ಪ್ರೌಢಶಾಲೆಯ ಮು.ಗುರುಗಳಾಗಿ ವಂ|ಮ್ಯಾಕ್ಸಿಂ, ಮರೀಲು ಚರ್ಚ್‌ನ ವಂ|ನೀಲೇಶ್ ಕ್ರಾಸ್ತಾ, ಸ.ಆಡಳಿತಾಧಿಕಾರಿಯಾಗಿ ಫಾ.ಮುಲ್ಲರ್‍ಸ್‌ಗೆ, ಫಿಲೋಮಿನಾ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೊ ಮುಕ್ಕಾಕ್ಕೆ, ಉಪ್ಪಿನಂಗಡಿ ಚರ್ಚ್‌ನ ವಂ|ಅಬೆಲ್ ಲೋಬೊ ಉಜಿರೆಗೆ ವರ್ಗಾವಣೆ

ಪುತ್ತೂರು: ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ|ಡಾ.ಪೀಟರ್ ಪಾವ್ಲ್ ಸಲ್ದಾನ್ಹಾರವರ ಆದೇಶದಂತೆ 2024ರ ಸಾಲಿನ ಧರ್ಮಗುರುಗಳ ವರ್ಗಾವಣೆ ಪಟ್ಟಿ ಪ್ರಕಟಗೊಂಡಿದ್ದು, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯ ಚರ್ಚ್‌ಗೆ ಪ್ರಧಾನ ಧರ್ಮಗುರುಗಳಾಗಿ ವಂ|ಜೆರಾಲ್ಡ್ ಡಿ’ಸೋಜ, ಮರೀಲು ಸೇಕ್ರೆಡ್ ಹಾರ್ಟ್ ಚರ್ಚ್‌ಗೆ ಪ್ರಧಾನ ಧರ್ಮಗುರುಗಳಾಗಿ ವಂ|ಜಾನ್ ಬ್ಯಾಪ್ಟಿಸ್ಟ್(ಜೆ.ಬಿ)ಮೊರಾಸ್, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಗುರುಗಳಾಗಿ ಹಾಗೂ ಬಾಲಕರ ವಸತಿನಿಲಯದ ವಾರ್ಡನ್ ಆಗಿ ವಂ|ಮ್ಯಾಕ್ಸಿಂ ಡಿ’ಸೋಜರವರು ನೇಮಕಗೊಂಡಿದ್ದಾರೆ.


ಕಳೆದ 2021ರಿಂದ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕ ಹಾಗೂ ಕ್ಯಾಂಪಸ್ ನಿರ್ದೇಶಕರಾಗಿದ್ದ ವಂ|ಸ್ಟ್ಯಾನಿ ಪಿಂಟೋರವರು ಮುಕ್ಕಾ ಚರ್ಚ್‌ಗೆ ಪ್ರಧಾನ ಧರ್ಮಗುರುಗಳಾಗಿ, ಕಳೆದ ಆರು ವರ್ಷಗಳಿಂದ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರುಗಳಾಗಿದ್ದ ವಂ|ಅಬೆಲ್ ಲೋಬೊರವರು ಉಜಿರೆ ಸಂತ ಅಂತೋನಿ ಚರ್ಚ್‌ಗೆ ಧರ್ಮಗುರುಗಳಾಗಿ ಹಾಗೂ ಮರೀಲು ಚರ್ಚ್‌ನಲ್ಲಿ ಕಳೆದ ಐದು ವರ್ಷಗಳಿಂದ ಧರ್ಮಗುರುಗಳಾಗಿದ್ದು, ಸುಳ್ಯದಿಂದ ಪುತ್ತೂರಿಗೆ ಧರ್ಮಗುರುಗಳೊಂದಿಗೆ ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭದಲ್ಲಿ ಕುಂಬ್ರದಲ್ಲಿ ನಡೆದ ಕಾರು ಅಪಘಾತದ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೀಡಾದ ವಂ|ವಲೇರಿಯನ್ ಫ್ರ್ಯಾಂಕ್‌ರವರ ಜಾಗಕ್ಕೆ ಕಿರು ಅವಧಿ(6 ತಿಂಗಳು)ಗೆ ಆಗಮಿಸಿದ್ದ ವಂ|ನೀಲೇಶ್ ಡೊನಾಲ್ಡ್ ಕ್ರಾಸ್ತಾರವರು ಸಹಾಯಕ ಆಡಳಿತಾಧಿಕಾರಿಯಾಗಿ ಮಂಗಳೂರು ಫಾ.ಮುಲ್ಲರ್‍ಸ್ ಆಸ್ಪತ್ರೆಗೆ ವರ್ಗಾವಣೆಗೊಂಡಿರುತ್ತಾರೆ.

ವಂ|ಜೆರಾಲ್ಡ್ ಡಿ’ಸೋಜ:
ಅಜೆಕಾರು ಮಾರ್ಸೆಲ್ ಡಿ’ಸೋಜ ಹಾಗೂ ಎವ್ಲಿನ್ ಆಳ್ವ ದಂಪತಿ ಪುತ್ರರಾಗಿರುವ ವಂ|ಜೆರಾಲ್ಡ್ ಡಿ’ಸೋಜರವರು 1985, ಏಪ್ರಿಲ್ 16 ರಂದು ಗುರುದೀಕ್ಷೆಯನ್ನು ಪಡೆದುಕೊಂಡಿರುತ್ತಾರೆ. ಬಳಿಕ 1985 ರಿಂದ 87ರ ವರೆಗೆ ಆಗ್ರಾರ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, 1987 ರಿಂದ 88ರ ವರೆಗೆ ಬೆಳ್ಮಣ್ಣು ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, 1988-95ರ ವರೆಗೆ ಕಡಬ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ, 1995-2002ರವರೆಗೆ ತಾಕೊಡೆ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ, 2002-07ರವರೆಗೆ ಬೆಳ್ತಂಗಡಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಹಾಗೂ ಬೆಳ್ತಂಗಡಿ ವಲಯ ಚರ್ಚ್‌ಗಳ ಪ್ರಧಾನ ಧರ್ಮಗುರುಗಳಾಗಿ, 2007-14ರವರೆಗೆ ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾಗಿ ಹಾಗೂ ಪುತ್ತೂರು ವಲಯ ಚರ್ಚ್‌ಗಳ ಪ್ರಧಾನ ಧರ್ಮಗುರುಗಳಾಗಿ, 2014-18ರವರೆಗೆ ಮಂಗಳೂರು ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್ ಇದರ ಕಾರ್ಯದರ್ಶಿಯಾಗಿ, 2018-24ರವರೆಗೆ ಶಕ್ತಿನಗರ ಚರ್ಚ್‌ನ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು.

ವಂ|ಜೆ.ಬಿ ಮೊರಾಸ್:
ಅಲ್ಲಿಪಾದೆ ತೋಮಸ್ ಮೊರಾಸ್ ಹಾಗೂ ಮೆಟಿಲ್ಡಾ ಮೊರಾಸ್ ದಂಪತಿ ಪುತ್ರರಾಗಿರುವ ವಂ|ಜೆ.ಬಿ ಮೊರಾಸ್‌ರವರು 2010, ಏಪ್ರಿಲ್ 15 ರಂದು ಗುರುದೀಕ್ಷೆಯನ್ನು ಪಡೆದುಕೊಂಡಿರುತ್ತಾರೆ. ಬಳಿಕ 2010-12ರವರೆಗೆ ಕೊರ್ಡೆಲ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, 2012-14ರವರೆಗೆ ಬೆಂದೂರ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, 2014-16ರವರೆಗೆ ಬೆಳ್ಮಣ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, 2016-17ರವರೆಗೆ ಬಂಟ್ವಾಳ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, 2017ರಿಂದ ನಾರಂಪಾಡಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿರುತ್ತಾರೆ.


ವಂ|ಮ್ಯಾಕ್ಸಿಂ ಡಿ’ಸೋಜ:
ಮಿಯಾರು ಮೈಕಲ್ ಡಿ’ಸೋಜ ದಂಪತಿ ಪುತ್ರರಾಗಿರುವ ವಂ|ಮ್ಯಾಕ್ಸಿಂ ಎಂ.ಡಿ’ಸೋಜರವರು 2007,ಏಪ್ರಿಲ್ 17 ರಂದು ಗುರುದೀಕ್ಷೆಯನ್ನು ಪಡೆದುಕೊಂಡಿರುತ್ತಾರೆ. ಬಳಿಕ 2007-09ರವರೆಗೆ ಬೊಂದೆಲ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, 2009-10ರವರೆಗೆ ಉದ್ಯಾವರಕ್ಕೆ ಸ್ಟಡಿ ನಿಮಿತ್ತ, 2010ರಲ್ಲಿ ಮೂಡುಬೆಳ್ಳೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ, 2010-17ರವರೆಗೆ ಪುತ್ತೂರು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, 2017-22ರವರೆಗೆ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ, 2022ರಲ್ಲಿ ನೀರುಡೆ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here