@ ಸಿಶೇ ಕಜೆಮಾರ್
ಪುತ್ತೂರು: ಹಣ್ಣುಗಳ ರಾಜ ಎಂದೇ ಕರೆಸಿಕೊಂಡಿರುವ, ಮನುಷ್ಯನ ಆರೋಗ್ಯದ ವಿಚಾರದಲ್ಲೂ ಬಹು ಮಹತ್ತರ ಪಾತ್ರ ವಹಿಸುವ, ಮನೆಯ ಸುತ್ತಮುತ್ತ, ತೋಟಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಸಿಗುವ ಬಾಂಗ್ಲಾ ದೇಶದ ರಾಷ್ಟ್ರೀಯ ಹಣ್ಣು ಆಗಿರುವ ಹಲಸಿನ ಹಣ್ಣು ಈಗ ಹಣ್ಣಾಗಲು ಆರಂಭವಾಗಿದ್ದು ಎಲ್ಲೆಲ್ಲೂ ಹಲಸಿನ ಹಣ್ಣು ದೊರೆಯುತ್ತಿದೆ. ಗಾತ್ರದಲ್ಲಿ ತಾನೇ ದೊಡ್ಡವ ಎಂದುಕೊಂಡಿರುವ ಹಲಸು ಕೇವಲ ಹಣ್ಣು ಮಾತ್ರವಲ್ಲ ಕಾಯಿ, ಹಣ್ಣು, ಬೀಜ ಎಲ್ಲವೂ ಆಹಾರ ಪದಾರ್ಥಗಳ ತಯಾರಿಗೆ ಬರುತ್ತದೆ. ನಮ್ಮನೆಯ ತೋಟದಲ್ಲಿ ಬೆಳೆದ ಹಲಸಿನ ಹಣ್ಣು ಹಾಳಾಗುವ ಮುನ್ನ ಅದರ ಮಹತ್ವವನ್ನು ತಿಳಿದುಕೊಳ್ಳೋಣ…
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ…
ಹಳ್ಳಿ ಕಡೆ ಹೆಚ್ಚಿನವರು ಹೇಳುವುದುಂಟು ಹಲಸಿನ ಹಣ್ಣು ತಿಂದರೆ ಹೊಟ್ಟೆ ಉಬ್ಬರ ಬರುತ್ತದೆ ಎಂದು ಆದರೆ ಯಾವುದನ್ನೇ ಆಗಲಿ ಒಂದು ಮಿತಿಯಲ್ಲಿ ತಿಂದರೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಮುಖ್ಯವಾಗಿ ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಅತ್ಯಧಿಕ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ದೇಹಕ್ಕೆ ಸೋಂಕು ತರುವ ಬ್ಯಾಕ್ಟೀರಿಯಾ ಕ್ರಿಮಿಗಳಿಂದ ರಕ್ಷಣೆ ನೀಡುತ್ತದೆ. ರಕ್ತದಲ್ಲಿರುವ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚು ಮಾಡಲು ಹಲಸು ಸಹಕಾರಿಯಾಗಿದೆ. ದೇಹಕ್ಕೆ ದಾಳಿ ಮಾಡುವ ಕ್ರಿಮಿಗಳ ವಿರುದ್ಧ ಸೆಣೆಸುವ ಮೂಲಕ ದೇಹವನ್ನು ಆರೋಗ್ಯದಿಂದ ಇಡಲು ಸಹಕಾರಿಯಾಗಿದೆ.
ಹಲಸಿನ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿ…
ನೀವು ನಂಬುತ್ತೀರಾ ಇಲ್ಲವೋ ಗೊತ್ತಿಲ್ಲ ಮಾರಕ ಕ್ಯಾನ್ಸರ್ ರೋಗ ಬರುವುದನ್ನು ಕೂಡ ಈ ಹಲಸಿನ ಹಣ್ಣಿನ ಸೇವನೆಯಿಂದ ತಪ್ಪಿಸಬಹುದು ಎನ್ನುತ್ತಾರೆ ವೈದ್ಯರು. ಹಲಸಿನಲ್ಲಿ ಲಿಗ್ನಾನ್ಸ್, ಸ್ಯಾಪೋನಿನ್ಸ್ ಮತ್ತು ಐಸೋಫ್ಲೇವೋನ್ಸ್ ಎಂಬ ಪೋಷಕಾಂಶಗಳಿವೆ. ಇವು ದೇಹಕ್ಕೆ ಬರಬಹುದಾದ ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಆವರಿಸದಂತೆ ತಡೆಯುತ್ತದೆ. ಹಲಸಿನ ಹಣ್ಣು ಸೇವನೆಯಿಂದ ಕರುಳುಗಳ ಹುಣ್ಣು ಶೀಘ್ರವಾಗಿ ವಾಸಿಯಾಗುತ್ತದೆ. ಮಲಬದ್ಧತೆಯನ್ನು ತಡೆಯುವ ಶಕ್ತಿ ಕೂಡ ಈ ಹಣ್ಣಿಗಿದೆ.
ಬಿಪಿ ಕಡಿಮೆ ಮಾಡುತ್ತದೆ…
ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಹಲಸು ಸಹಕಾರಿಯಾಗಿದೆ. ಹಲಸಿನಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತಸಂಚಾರ ಸುಗಮಗೊಂಡು ಹೃದಯಸ್ಥಂಭನದ ಸಂಭವತೆಯನ್ನು ಕಡಿಮೆಗೊಳಿಸುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಬರುವ ರಕ್ತಹೀನತೆಯನ್ನು ಕಡಿಮೆಗೊಳಿಸಲು ಹಲಸಿನ ಹಣ್ಣು ಸೇವನೆ ಪ್ರಯೋಜನಕಾರಿಯಾಗಿದೆ. ಅಸ್ಥಿಮಜ್ಜೆಯಿಂದ ಹೊಸ ರಕ್ತಕಣಗಳು ಉತ್ಪತ್ತಿಯಾಗಲು ಈ ಹಣ್ಣಿನ ಸೇವನೆ ಸಹಕಾರಿಯಾಗಿದೆ. ಇದಲ್ಲದೆ ಥೈರಾಯ್ಡ್ ಗ್ರಂಥಿಯಿಂದ ನಿಯಮಿತವಾಗಿ ಹಾರ್ಮೊನು ಬಿಡುಗಡೆ ಮಾಡುವುದರಿಂದ ಥೈರಾಯ್ಡ್ ಸೋಂಕು ಆಗುವುದನ್ನು ಕೂಡ ತಪ್ಪಿಸುತ್ತದೆ. ಮೂಳೆಗಳನ್ನು ಬಲಪಡಿಸಲು ಕೂಡ ಹಲಸು ಸಹಕಾರಿಯಾಗಿದೆ. ಒಟ್ಟಿನಲ್ಲಿ ಹಲಸಿನ ಹಣ್ಣು ಆರೋಗ್ಯದಾಯಕ ಹಣ್ಣು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಕೇರಳ ರಾಜ್ಯದ ಅಧಿಕೃತ ಹಣ್ಣು…
ಹಣ್ಣುಗಳ ರಾಜ ಎಂದೇ ಕರೆಸಿಕೊಂಡಿರುವ ಹಲಸಿನ ಹಣ್ಣನ್ನು ಕೇರಳ ರಾಜ್ಯದ ಅಧಿಕೃತ ಹಣ್ಣಾಗಿ ಘೋಷಣೆ ಮಾಡಲಾಗಿದೆ. ಕೇರಳದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹಲಸು ಬೆಳೆಸಲಾಗುತ್ತಿದೆ. ವಿವಿಧ ತಳಿಯ ಕೋಟ್ಯಾಂತರ ಹಲಸಿನ ಹಣ್ಣುಗಳು ಇಲ್ಲಿ ಬೆಳೆಯುತ್ತವೆ. ಪ್ರತಿ ವರ್ಷ ಸುಮಾರು ೧೫ ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲೂ ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಕಳೆದ ಕೆಲವು ವರ್ಷದಿಂದ ಬಹಳಷ್ಟು ಮಂದಿ ಹಲಸಿನ ಹಣ್ಣು ಬೆಳೆಯುತ್ತಿದ್ದಾರೆ. ಅಲ್ಲಲ್ಲಿ ಹಲಸಿನ ಮೇಳಗಳ ಕೂಡ ನಡೆಯುತ್ತಿವೆ.
ರುಚಿಯಾದ ಉಪ್ಪಡಚ್ಚಿಲ್…
ಹಳ್ಳಿಗಳಲ್ಲಿ ಹಲಸಿನ ಹಣ್ಣಿನ ಸೊಳೆಯನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಿ ಮಳೆಗಾಲಕ್ಕೆ ಕಟ್ಟಿ ಇಡುತ್ತಾರೆ. ಇದನ್ನು ಮಳೆಗಾಲದಲ್ಲಿ ತಿನ್ನೋಕೆ ರುಚಿಯಾಗಿರುತ್ತದೆ. ಹಲಸಿನ ಕಾಯಿಯ ಸೋಳೆಯಿಂದ ಬೀಜವನ್ನು ತೆಗೆದು ಸೋಳೆಯನ್ನು ಭರಣಿಯಲ್ಲಿ ಉಪ್ಪು ನೀರಲ್ಲಿ ಹಾಕಿಡಬೇಕು. ವರ್ಷ ಬಿಟ್ಟು ತೆಗೆದರೂ ಹಲಸಿನ ಸೋಳೆ ಹಾಗೆಯೇ ಇರುತ್ತದೆ. ಇದನ್ನು ಹಳ್ಳಿಗಳಲ್ಲಿ ಉಪ್ಪಂಡಚ್ಚಿಲ್ ಎಂದು ಕರೆಯುತ್ತಾರೆ. ಇದನ್ನು ಶುಗರ್ ಇರುವವರೂ ಕೂಡ ಬಳಸಬಹುದಾಗಿದೆ. ಹಲಸಿನ ಬೀಜವನ್ನು ಮಣ್ಣು ಮತ್ತು ಎಂಜಿರ್ ಬಳ್ಳಿಯ ಎಲೆಗಳನ್ನು ಬೆರೆಸಿ ವರ್ಷಗಟ್ಟಲೆ ಇಡಬಹುದಾಗಿದೆ.
ಘಮಘಮಿಸುವ ಖಾದ್ಯಗಳು
ಬಹಳ ಸುಲಭದಲ್ಲಿ ಸಿಗುವ ಹಲಸಿನ ಹಣ್ಣಿನಿಂದ ವಿವಿಧ ರೀತಿಯ ಆರೋಗ್ಯಭರಿತ ಖಾದ್ಯಗಳನ್ನು ತಯಾರು ಮಾಡಬಹುದಾಗಿದೆ. ಹಲಸಿನ ಹಣ್ಣನ್ನು ಕೊಯ್ದು ಬಿಡಿಸಲು ಸ್ವಲ್ಪ ಕಷ್ಟವಾದರೂ ತಿನ್ನೋಕೆ ಮಾತ್ರ ಇಷ್ಟವಾಗುತ್ತದೆ. ಮುಖ್ಯವಾಗಿ ಹಲಸಿನ ಹಣ್ಣಿನ ಹಪ್ಪಳ, ಐಸ್ಕ್ರೀಮ್, ಹಲ್ವ, ಪಾಯಸ, ಹೋಳಿಗೆ, ಚಿಪ್ಸ್, ಜಾಮ್, ಸಂಡಿಗೆ ಇತ್ಯಾದಿ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು.
ಹಲಸು ವಿಟಮಿನ್ಯುಕ್ತ ಆರೋಗ್ಯದಾಯಕ ಹಣ್ಣಾಗಿದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಯಾರೂ ಬೇಕಾದರು ತಿನ್ನಬಹುದು. ಆದರೆ ಅತಿಯಾಗಿ ತಿನ್ನಬಾರದು. ಹೊಟ್ಟೆ ತುಂಬಿದ ನಂತರ ಹಲಸು ತಿನ್ನುವುದು ಸರಿಯಲ್ಲ. ಹಿಂದಿನ ಕಾಲದಲ್ಲಿ ಖಾಲಿ ಹೊಟ್ಟೆಗೆ ಹಲಸಿನ ಹಣ್ಣು ತಿನ್ನುತ್ತಿದ್ದರು. ಹಲಸಿನ ಹಣ್ಣಿನಲ್ಲಿ ಹಳದಿ ಬಣ್ಣದ ಹಣ್ಣಿಗಿಂತ ಬಿಳಿ ಬಣ್ಣದ ಹಣ್ಣು ಉತ್ತಮ.
ಡಾ| ಬಾಲಕೃಷ್ಣ ಡೆಚ್ಚಾರ್, ಅನುಗ್ರಹ ಆಯುರ್ವೇದಿಕ್ ಕ್ಲಿನಿಕ್ ಎಂ.ಟಿ ರೋಡ್ ಪುತ್ತೂರು
ಆಪಲ್, ಮುಸುಂಬಿ ಇತ್ಯಾದಿ ಹಣ್ಣುಗಳಿಗಿಂತಲೂ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ಹಣ್ಣು ಇದ್ದರೆ ಅದು ಹಲಸಿನ ಹಣ್ಣು. ಇದರಲ್ಲಿ ಹೇರಳ ವಿಟಮಿನ್ಸ್ ಇದೆ. ಅಲ್ಲದೆ ಯಾವುದೇ ರಾಸಾಯನಿಕ ಬಳಕೆ ಇಲ್ಲದೆ ಬೆಳೆಯುವ ಹಣ್ಣಾಗಿದೆ. ಶುಗರ್ ಇರುವವರು ಕೂಡ ಇದನ್ನು ಮಿತವಾಗಿ ತಿನ್ನಬಹುದು.
ಡಾ| ಮುರಳೀಕೃಷ್ಣ ರೈ, ಚಿರಾಯು ಕ್ಲಿನಿಕ್ ಕುಂಬ್ರ