ಶಾಲಾ ಬಳಿಯ ಕಾಲನಿ ನಿವಾಸಿಗಳ ಅಳಲು ಕೇಳುವವರೇ ಇಲ್ಲದಾಗಿದೆ…!?
ಪುತ್ತೂರು: ಮಳೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆಯಲ್ಲಿ ಕೆಸರು ತುಂಬಿಕೊಂಡು ವಾಹನ ಸಂಚಾರ ಸೇರಿದಂತೆ ಜನ ಸಂಚಾರಕ್ಕೆ ತೊಂದರೆಯಾದ ಬಗ್ಗೆ ಕುಂಬ್ರ ಕೆಪಿಎಸ್ ಶಾಲಾ ಬಳಿಯಿಂದ ವರದಿಯಾಗಿದೆ. ಕುಂಬ್ರದಿಂದ ಕೆಪಿಎಸ್ ಶಾಲಾ ಬಳಿಯಲ್ಲಿ ಪರಿಶಿಷ್ಠ ಜಾತಿ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಸರು ತುಂಬಿಕೊಂಡಿದ್ದು ಇದರಿಂದ ದ್ವಿಚಕ್ರ ವಾಹನ, ಅಟೋ ರಿಕ್ಷಾ ಇತ್ಯಾದಿಗಳಿಗೆ ಸಂಚರಿಸಲು ಕಷ್ಟವಾಗಿದೆ. ಇದಲ್ಲದೆ ಮಳೆ ಬರುವ ಸಮಯದಲ್ಲಿ ರಸ್ತೆಯಲ್ಲಿ ಆಳೆತ್ತರದಲ್ಲಿ ನೀರು ತುಂಬಿಕೊಳ್ಳುವುದರಿಂದ ಜನ ಸಂಚಾರಕ್ಕೂ ತೊಂದರೆಯಾಗಿದೆ. ಇದರಿಂದ ಕಾಲನಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕುಂಬ್ರ ಕೆಪಿಎಸ್ ಶಾಲಾ ಆಟದ ಮೈದಾನದಿಂದ ಬರುವ ಮಳೆ ನೀರು ಹರಿದು ಹೋಗಲು ಮಾಡಿರುವ ಚರಂಡಿ ಮುಚ್ಚಿ ಹೋಗಿರುವುದರಿಂದ ನೀರು ನೇರವಾಗಿ ರಸ್ತೆಗೆ ಬರುತ್ತಿದೆ. ನೀರಿನೊಂದಿಗೆ ಆಟದ ಮೈದಾನದ ಕೆಸರು ಮಣ್ಣು ಕೂಡ ರಸ್ತೆಗೆ ಬಂದು ಬೀಳುತ್ತಿದೆ. ಇದರಿಂದಾಗಿ ಕಾಂಕ್ರೀಟ್ ರಸ್ತೆಯಲ್ಲಿ ಕೆಸರು ಮಿಶ್ರಿತ ಮಣ್ಣು ತುಂಬಿಕೊಂಡಿದ್ದು ನಡೆದು ಹೋಗಲು ಕೂಡ ಕಷ್ಟವಾಗಿದೆ. ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಇತ್ತೀಚೆಗೆ ಇದೇ ಜಾಗದಲ್ಲಿ ಮರವೊಂದು ಮರಿದು ಬಿದ್ದಿದ್ದು ಈ ಮರದ ಗೆಲ್ಲುಗಳನ್ನು ಮಾತ್ರ ತೆಗೆದು ಮರದ ಬುಡವನ್ನು ಹಾಗೇ ಬಿಡಲಾಗಿದೆ. ಇದು ರಸ್ತೆಗೆ ತಾಗಿಕೊಂಡು ಇದೆ. ಒಟ್ಟಿನಲ್ಲಿ ಈ ರಸ್ತೆಯ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ ಕಾಲನಿ ನಿವಾಸಿಗಳು ದೂರು ನೀಡಿದ್ದು ಸಮಸ್ಯೆಯನ್ನು ಪರಿಹರಿಸುತ್ತಾರೋ ಕಾದು ನೋಡಬೇಕಾಗಿದೆ.
ನಮ್ಮ ಕಾಲನಿಯಲ್ಲಿ ಸುಮಾರು 10 ಮನೆಗಳಿವೆ. ರಸ್ತೆಗೆ ನೀರು ಬರುತ್ತಿರುವುದರಿಂದ ಕೆಸರು ತುಂಬಿಕೊಂಡು ಜನ ಸಂಚಾರಕ್ಕೆ ಅಲ್ಲದೆ ಅಟೋ ರಿಕ್ಷಾ ಓಡಾಡಲು ಕೂಡ ಕಷ್ಟವಾಗುತ್ತಿದೆ. ಇದರಿಂದ ಕಾಲನಿ ನಿವಾಸಿಗಳಿಗೆ ತುಂಬಾ ಕಷ್ಟವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದೇವೆ. ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲದಾಗಿದೆ.
ಸುಂದರ ಮತ್ತು ಕಾಲನಿ ನಿವಾಸಿಗಳು, ಕುಂಬ್ರ ಶಾಲಾ ಬಳಿ
ಈ ಬಗ್ಗೆ ಪರಿಶೀಲನೆ ನಡೆಸಿ ಕಾಲನಿ ನಿವಾಸಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಮಸ್ಯೆಯನ್ನು ಸರಿ ಮಾಡಿಕೊಡಲಾಗುವುದು.
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ