ವಿಧಾನಸಭೆಯಿಂದ ಪರಿಷತ್‌ಗೆ ಚುನಾವಣೆ ಬಿಜೆಪಿ ಪ್ರಮುಖರ ಪಟ್ಟಿಯಲ್ಲಿ ನಳಿನ್ ಕುಮಾರ್ ಕಟೀಲ್ ಹೆಸರು: ನಾನೂ ಆಕಾಂಕ್ಷಿ-ಡಿ.ವಿ.ಎಸ್

0

ಬೆಂಗಳೂರು:ಜೂನ್ 13ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ 11 ಸ್ಥಾನಗಳಲ್ಲಿ ಬಿಜೆಪಿಗೆ ಲಭಿಸಲಿರುವ 3 ಸ್ಥಾನಗಳಿಗೆ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಸಂಸದ ಡಿ.ವಿ.ಸದಾನಂದ ಗೌಡ ಸಹಿತ 44 ಆಕಾಂಕ್ಷಿಗಳಿದ್ದು ಕೋರ್ ಕಮಿಟಿ 12 ಮಂದಿಯ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನೆ ಮಾಡಿದೆ.ಇದರಲ್ಲಿ ದ.ಕ.ಸಂಸದರೂ ಆಗಿರುವ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರೂ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಜಾತಿವಾರು ಹಾಗೂ ಪ್ರದೇಶವಾರು ಆಧರಿಸಿ 12 ಮಂದಿಯ ಅಂತಿಮ ಪಟ್ಟಿ ತಯಾರು ಮಾಡಲಾಗಿದ್ದು ಈ ಪೈಕಿ ಮೂವರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮೇ 22ರಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು.ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಸ್ಥಾನ ಸಿಕ್ಕಿದ್ದು, ಆ ಮೂರು ಸ್ಥಾನಕ್ಕೆ ಪಟ್ಟಿ ಸಿದ್ದಪಡಿಸುವ ಕುರಿತು ಆಕಾಂಕ್ಷಿಗಳ ಪಟ್ಟಿಯೊಂದಿಗೆ ಸಭೆಯಲ್ಲಿ ಚರ್ಚಿಸಲಾಯಿತು.ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಆಕಾಂಕ್ಷಿಗಳ ಪಟ್ಟಿಯಲ್ಲಿ ಇಲ್ಲದ ಹೆಸರುಗಳ ಬಗ್ಗೆಯೂ ಪ್ರಸ್ತಾಪಿಸಿ ಚರ್ಚೆ ನಡೆಸಲಾಗಿದೆ.

ನಾನೂ ಆಕಾಂಕ್ಷಿ-ಡಿ.ವಿ: ಪರಿಷತ್ ಸದಸ್ಯ ಸ್ಥಾನಕ್ಕೆ ನಾನೂ ಆಕಾಂಕ್ಷಿ.ಲೋಕಸಭಾ ಚುನಾವಣೆಯಲ್ಲಿ ನನಗೆ ಅನ್ಯಾಯ, ಅವಮಾನ ಆಗಿದೆ.ನನ್ನನ್ನು ಪರಿಷತ್ ಸದಸ್ಯನಾಗಿ ಮಾಡಿ ವಿಪಕ್ಷ ನಾಯಕ ಮಾಡಿ ಎಂದು ಡಿ.ವಿ.ಸದಾನಂದ ಗೌಡ ಸಭೆಯಲ್ಲಿ ಹೇಳಿದರು.ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್, ಸೋತವರಿಗೆ ಅವಕಾಶ ಬೇಡ ಎಂದರು.ಇದರಿಂದ ಕೋಪಗೊಂಡ ಮಾಜಿ ಸಚಿವ ಸಿ.ಟಿ.ರವಿ ಹಾಗೂ ಡಿ.ವಿ.ಸದಾನಂದ ಗೌಡರು ಸಭೆಯಲ್ಲಿದ್ದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.ಸೋತವರಿಗೆ ಯಾಕೆ ಟಿಕೆಟ್ ನೀಡಬಾರದು? ಎಂದು ಪ್ರಶ್ನಿಸಿದ ಅವರುಗಳು,ಹಿಂದೆ ವಿಧಾನಸಭೆಯಲ್ಲಿ ಸೋತ ಬಿಎಸ್‌ವೈ, ಈಶ್ವರಪ್ಪ, ಯೋಗೇಶ್ವರ್, ಸೋಮಣ್ಣ, ಲಕ್ಷ್ಮಣ್ ಸವದಿ, ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್, ರುದ್ರೇಗೌಡ, ಸುನಿಲ್ ವಲ್ಯಾಪುರೆ, ರಘುನಾಥ್ ಮಲ್ಕಾಪುರೆ, ಡಿ.ಎಸ್ ವೀರಯ್ಯ, ಸಿ.ಹೆಚ್.ವಿಜಯಶಂಕರ್ ಅವರನ್ನು ಪರಿಷತ್‌ಗೆ ಆಯ್ಕೆ ಮಾಡಿಲ್ವಾ? ಮೊನ್ನೆ ಲೋಕಸಭೆಯಲ್ಲಿ ಸೋತವರಿಗೆ ಟಿಕೆಟ್ ನೀಡಿದ್ರಿ.ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾನದಂಡವೇ ಎಂದು ಕೇಳಿದರು.ಈ ವೇಳೆ ಸಭೆಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಒಂದು ಮಾತನ್ನೂ ಆಡದೇ ಮೌನವಾಗಿದ್ದರು.

ಕಟೀಲ್ ಅವರನ್ನೂ ಸೇರಿಸೋಣ: ಚರ್ಚೆಯ ಸಂದರ್ಭ ಮಾತನಾಡಿದ ಆರ್.ಅಶೋಕ್, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನೂ ಸೇರಿಸೋಣ.ಅವರು ಈಗ ಕರೆ ಮಾಡಿದರು ಎಂದು ಹೇಳಿದರು.ಕೊನೆಗೆ ನಳಿನ್ ಕುಮಾರ್ ಕಟೀಲ್ ಅವರ ಹೆಸರನ್ನೂ ಸೇರಿಸಿ 12 ಮಂದಿಯ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲು ಸಭೆ ತೀರ್ಮಾನಿಸಿದೆ ಎಂದು ವರದಿಯಾಗಿದೆ.11 ಸ್ಥಾನಗಳ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 3 ಅಂತಿಮ ದಿನವಾಗಿದ್ದು, ಜೂನ್ 13ರಂದು ಚುನಾವಣೆ ನಡೆಯಲಿದೆ.ವಿಧಾನಸಭೆ ಶಾಸಕರು ಪರಿಷತ್ ಸದಸ್ಯರ ಆಯ್ಕೆಗೆ ಮತ ಚಲಾಯಿಸಲಿದ್ದಾರೆ.ಅದೇ ದಿನ ಸಂಜೆ ಮತ ಎಣಿಕೆ ನಡೆಯಲಿದೆ.

ಕಟೀಲ್‌ಗೆ ಪರಿಷತ್‌ನ ಪ್ರತಿಪಕ್ಷ ನಾಯಕ ಸ್ಥಾನ?: ಹಾಲಿ ಸಂಸದನಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರದ ಅವಧಿ ಇನ್ನೇನು ಮುಗಿಯಲಿದೆ.ಈ ಬಾರಿ ಲೋಕಸಭೆಗೆ ಅವರಿಗೆ ಅವಕಾಶ ನೀಡಲಾಗಿಲ್ಲ.ಈ ನಿಟ್ಟಿನಲ್ಲಿ ಅವರನ್ನು ಪರಿಷತ್ ಸದಸ್ಯನಾಗಿ ಮಾಡುವ ಜೊತೆಗೆ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಸ್ಥಾನ ನೀಡುವ ಕುರಿತು ಪಕ್ಷದ ಪ್ರಮುಖರು ತೀರ್ಮಾನಿಸಿದ್ದಾರೆ.ಪರಿಷತ್‌ನ ಪ್ರತಿಪಕ್ಷದ ನಾಯಕನಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ಈಗಾಗಲೇ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದಾರೆ.

ಪ್ರಮುಖರ ಪಟ್ಟಿಯಲ್ಲಿ: ಸದ್ಯ ರಾಜ್ಯ ಬಿಜೆಪಿ ಸಿದ್ಧಪಡಿಸಿರುವ 12 ಜನರ ಪಟ್ಟಿಯಲ್ಲಿ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಎನ್.ರವಿ ಕುಮಾರ್, ಬಿಜೆಪಿ ಮರಾಠ ಮುಖಂಡ ಮಾರುತಿ ರಾವ್ ಮೂಳೆ, ಬಿಜೆಪಿ ಮರಾಠ ನಾಯಕಿ ಧನಶ್ರೀ ಸರ್‌ದೇಸಾಯಿ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ, ಹಾವೇರಿ ಬಿಜೆಪಿ ನಾಯಕ ಬೋಜರಾಜು ಪ್ರಮುಖರಾಗಿದ್ದಾರೆ.ಡಿ.ವಿ.ಸದಾನಂದ ಗೌಡರ ಹೆಸರು ಸೇರ್ಪಡೆಯಾಗಿದೆಯೇ ಎನ್ನುವ ಖಚಿತ ಮಾಹಿತಿ ಲಭ್ಯವಾಗಿಲ್ಲ.ಸದ್ಯ ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದು ಮೇ 30ರ ನಂತರವಷ್ಟೇ ರಾಜ್ಯ ಬಿಜೆಪಿ ಕಳಿಸಿರುವ ಪಟ್ಟಿ ಬಗ್ಗೆ ಗಮನ ಹರಿಸಲಿದೆ.

LEAVE A REPLY

Please enter your comment!
Please enter your name here