@ ಸಿಶೇ ಕಜೆಮಾರ್
ಅನಾದಿ ಕಾಲದಿಂದಲೆ ತುಳುನಾಡಿನ ಜನ ತಮಗೆ ತಾವೇ ವಿಧಿಸಿಕೊಂಡು ಬಂದಿರುವ ಧಾರ್ಮಿಕ, ಸಾಮಾಜಿಕ ಆಚರಣೆಯ ಗಡುವೇ ಈ ಪತ್ತನಾಜೆ. ಅಂದಿನಿಂದ ಇಂದಿಗೂ ಆಚರಣೆ, ನಂಬಿಕೆಯ ತಳಹದಿಯಲ್ಲಿ ಈ ಪತ್ತನಾಜೆ ಪದ್ಧತಿಯು ನಡೆದುಕೊಂಡು ಬಂದಿದೆ. ತುಳುನಾಡಿನಲ್ಲಿ ಪತ್ತನಾಜೆಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಹೆಚ್ಚಿನ ವರ್ಷಗಳಲ್ಲಿ ಮೇ.24ನೇ ತಾರೀಖಿಗೆ ಬೇಷ ತಿಂಗಳ ಹತ್ತನೇ ದಿನ ಬರುವುದು ವಾಡಿಕೆ. ಕೆಲವೊಮ್ಮೆ ಅದು ಮೇ.25ಕ್ಕೆ ಬರುವುದುಂಟು. ಈ ವರ್ಷ ಮೇ.24ಕ್ಕೆ( ಬೇಷ ತಿಂಗಳ 10ನೇ ದಿನ) ಪತ್ತನಾಜೆ ಬಂದಿದೆ. ಇಂದು ತುಳುನಾಡಿಗೆ ಪತ್ತನಾಜೆಯ ಸಂಭ್ರಮ. ಪತ್ತನಾಜೆ ತುಳುನಾಡಿನಲ್ಲಿ ಆಚರಣೆಗೆ ಒಂದು ಗಡುವನ್ನು ನಿಗಧಿ ಮಾಡುತ್ತದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪತ್ತನಾಜೆ ನಿಯಮವನ್ನು ಪಾಲಿಸಲಾಗುತ್ತದೆ. ದೈವ ದೇವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ, ವಿಶೇಷ ಪರ್ವಗಳು, ಉತ್ಸವಗಳು ಈ ದಿನಕ್ಕೆ ಕೊನೆಗೊಳ್ಳುತ್ತದೆ. ಮುಂದಿನ ಮೂರು ತಿಂಗಳು ಬಿಡುವು ಆಗಿದ್ದು ಯಾವುದೇ ನೇಮ, ಕೋಲ, ಅಂಕ ಆಯನಗಳು ನಡೆಯುವುದಿಲ್ಲ. ಯಾವುದೇ ವಿಶೇಷ ಉತ್ಸವಗಳು ತುಳುನಾಡಿನ ದೇವಸ್ಥಾನಗಳಲ್ಲಿ ನಡೆಯುವುದಿಲ್ಲ ಆದರೆ ನಿತ್ಯ ಪೂಜೆ, ನಿತ್ಯ ಬಲಿ ಮಾತ್ರ ಎಂದಿನಂತೆ ನಡೆಯುತ್ತದೆ. ಅದನ್ನು ಹೊರತುಪಡಿಸಿ ಇತರ ಯಾವುದೇ ವಿಶೇಷ ಪರ್ವಗಳು, ಉತ್ಸವಗಳು ನಡೆಯುವುದಿಲ್ಲ.
ಆಚರಣೆಗಳಿಗೆ ತೆರೆ
ತುಳುನಾಡು ದೈವ ದೇವರುಗಳ ನಾಡೇ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಇಲ್ಲಿರುವಷ್ಟು ದೈವ ದೇವರುಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ವಿಶೇಷವಾಗಿ ದೈವಾರಾಧನೆಯ ಅಂಗಳವಾಗಿರುವ ತುಳುನಾಡಿಲಿನಲ್ಲಿ ಕೋಲ, ನೇಮ, ತಂಬಿಲ, ಅಗೇಲು ವಿಶೇಷವಾಗಿರುತ್ತದೆ. ಮನೆಯ, ಜಾಗದ ದೈವದ ಆಚರಣೆಗಳು, ಗ್ರಾಮ ದೈವಗಳ ಪರ್ವ ಇತ್ಯಾದಿಗಳು ಪತ್ತನಾಜೆಯಂದು ಮುಗಿಯಲೇಬೇಕು ಎಂಬುದು ಇಲ್ಲಿನ ನಂಬಿಕೆ. ‘ಪತ್ತನಾಜೆ ಮುಗಿದರೆ ದೈವಗಳು ಘಟ್ಟ ಹತ್ತುತ್ತವೆ’ ಎಂಬ ನಂಬಿಕೆಯೂ ತುಳುವರಲ್ಲಿದೆ. ಆದರೆ ಮಳೆಗಾಲದಲ್ಲಿ ನೇಮ, ಕೋಲ, ತಂಬಿಲ ನಡೆಸಲು ಕಷ್ಟಕರವಾದ ಕಾರಣ ಈ ಗಡುವು ಮತ್ತು ನಂಬಿಕೆ ಹುಟ್ಟಿಕೊಂಡಿರಬಹುದು ಎಂದು ಹೇಳಲಾಗಿದೆ. ಏನೇ ಆದರೂ ತುಳುವರ ಪ್ರತಿಯೊಂದು ನಂಬಿಕೆ, ಆಚರಣೆಗೆ ವಿಶೇಷವಾದ ಹಿನ್ನೆಲೆ ಇದ್ದೇ ಇರುತ್ತದೆ.
ಮಳೆಗಾಲದ ಆರಂಭಕ್ಕೆ ಮುನ್ನುಡಿ
ಪತ್ತನಾಜೆ ಮುಗಿದು ಹೋಯಿತು ಎಂದರೆ ತುಳುನಾಡಲ್ಲಿ ಮಳೆಗಾಲ ಆರಂಭವಾಯಿತು ಎಂದೇ ನಂಬಿಕೆ. ಇದು ಹೌದು ಕೂಡ. ಹಿಂದಿನ ಕಾಲದಲ್ಲಿ ಪತ್ತನಾಜೆ ದಿನ ಹತ್ತು ಹನಿ ಮಳೆ ನೀರಾದರೂ ಭೂಮಿಗೆ ಬೀಳುತ್ತಿತ್ತಂತೆ. ‘ಪತ್ತನಾಜೆದಾನಿ ಪತ್ತ್ ಪನಿ ಬರ್ಸೊ ಬರೋಡು, ಇಜ್ಜಂಡ್ ಊರುಗು ಗಂಡಾಂತರ ಉಂಡು’ ಎಂಬುದು ತುಳುವರ ನಂಬಿಕೆಯಾಗಿತ್ತು. ಪತ್ತನಾಜೆ ದಿನದಿಂದ ಮಳೆಗಾಲ ಆರಂಭ ಎಂಬುದು ಅನಾದಿಯಿಂದಲೂ ತುಳುನಾಡಿನ ಜನರು ಮಾಡಿಕೊಂಡು ಬಂದ ಪಂಚಾಂಗವಾಗಿದೆ. ಆರು ತಿಂಗಳು ಮಳೆ, ಆರು ತಿಂಗಳು ಬಿಸಿಲು ಎಂಬುದು ತುಳುನಾಡಿನ ಜನರ ಹವಾಮಾನ. ಮಳೆ ಆರಂಭವಾದ ಬೆನ್ನಲ್ಲೆ ತುಳುನಾಡಲ್ಲಿ ಬೇಸಾಯ ಶುರುವಾಗುತ್ತದೆ. ಜನರು ಬೇಸಾಯದಲ್ಲಿ ಬ್ಯುಸಿಯಾಗಿರುವುದರಿಂದ ಉತ್ಸವಾಧಿಗಳನ್ನು ಮಾಡಲು ಪುರುಷೊತ್ತು ಕೂಡ ಸಿಗುವುದಿಲ್ಲ. ಇದರಿಂದಲೂ ಉತ್ಸವಾಧಿಗಳಿಗೆ ಪತ್ತನಾಜೆ ಗಡು ಆಗಿರಲೂಬಹುದು. ಇತ್ತೀಚಿನ ದಿನಗಳಲ್ಲಿ ಬೇಸಾಯವೇ ಕಣ್ಮರೆಯಾಗುತ್ತಿರುವ ಕಾರಣ ಪತ್ತನಾಜೆಗೂ ಕೃಷಿಕರಿಗೂ ಸಂಬಂಧ ಇಲ್ಲ ಎಂಬತಾಗಿದೆ. ಆದರೂ ಧಾರ್ಮಿಕ ನೆಲೆಗಟ್ಟಿನಲ್ಲಿ ಪತ್ತನಾಜೆಯ ಆಚರಣೆ ಉಳಿದುಕೊಂಡಿರುವುದು ಮಾತ್ರ ಸಂಸತದ ಸಂಗತಿಯಾಗಿದೆ.
ಗೆಜ್ಜೆ ಬಿಚ್ಚುವ ಕಲಾವಿದರು
ಯಕ್ಷಗಾನ ಮೇಳಗಳು ಪತ್ತನಾಜೆಯ ದಿನ ಆ ವರ್ಷದ ತಿರುಗಾಟವನ್ನು ಮುಕ್ತಾಯ ಮಾಡುವುದು ಸಂಪ್ರದಾಯ. ಕಟೀಲು ಮೇಳಕ್ಕೆ ಸಂಬಂಧಿಸಿ ಹೇಳುವುದಾದರೆ ದೀಪಾವಳಿ ಸಂದರ್ಭ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಎಲ್ಲ ಐದು ಮೇಳಗಳ ಕಲಾವಿದರು ಗೆಜ್ಜೆಕಟ್ಟಿ ದೇವರೆದುರು ಯಕ್ಷ ನಾಟ್ಯ ಪ್ರದರ್ಶಿಸುವ ಮೂಲಕ ವರ್ಷದ ಸೇವೆ ಆರಂಭಿಸುವುದು ರೂಢಿ. ಪಾಂಡವಾಶ್ವಮೇಧದೊಂದಿಗೆ ಪ್ರದರ್ಶನ ಆರಂಭವಾದರೆ ಅಸ್ರಣ್ಣರು ಸೂಚಿಸುವ ಪ್ರಸಂಗವನ್ನು ಕೊನೆಯ ದಿನ ಪ್ರದರ್ಶಿಲಾಗುತ್ತದೆ. ಪತ್ತನಾಜೆಯ ನಂತರ ಯಾವುದೇ ಯಕ್ಷಗಾನ ನಡೆಯುವಂತಿಲ್ಲ. ಕಲಾವಿದರು ಗೆಜ್ಜೆ ಕಟ್ಟುವಂತಿಲ್ಲ. ಇದು ಕೂಡ ಅನಾದಿ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ದೈವಗಳಿಗೆ ತಂಬಿಲ ಸೇವೆ
ತುಳುವರು ದೈವರಾಧಕರಾಗಿದ್ದಾರೆ. ಇಲ್ಲಿನ ಹೆಚ್ಚಿನ ಮನೆಗಳಲ್ಲಿ ದೈವದ ಮಣೆ ಮಂಚಾವು ಇರುತ್ತದೆ. ಪ್ರತಿ ವರ್ಷ ನೇಮ, ಕೋಲ, ತಂಬಿಲ ಸೇವೆಗಳು ನಡೆಯುತ್ತವೆ. ಇತರ ದಿನಗಳಲ್ಲಿ ತಂಬಿಲ ಸೇವೆ ಮಾಡಲು ಸಾಧ್ಯವಾಗದೇ ಇರುವವರು ಪತ್ತನಾಜೆ ದಿನ ತಂಬಿಲ ಸೇವೆ ಮಾಡುತ್ತಾರೆ. ಜಾಗದ ದೈವಗಳಿಗೆ, ಮನೆ ದೈವಗಳಿಗೆ ವಿಶೇಷವಾದ ಪತ್ತನಾಜೆ ತಂಬಿಲ ಮಾಡಲಾಗುತ್ತದೆ. ಏನಿಲ್ಲದಿದ್ದರೂ ಸೀಯಾಳ ಇಟ್ಟು ಊದುಬತ್ತಿ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ವಿಶೇಷವಾಗಿ ಗುಳಿಗರಾಜನಿಗೆ ಮತ್ತು ಬೈರವ ದೈವಕ್ಕೆ ಈ ದಿನ ತಂಬಿಲ ಪರ್ವ ನಡೆಯುತ್ತದೆ. ಗುಳಿಗ ದೈವ ಜನರಿಗೆ ಬರುವ ರೋಗಳಿಂದ ಕಾಪಾಡುತ್ತಾನೆ. ಹಾಗೆ ಬೈರವ ದೈವ ಜಾನುವಾರುಗಳಿಗೆ ಬರುವ ತೊಂದರೆಯನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ತುಳುವರಲ್ಲಿದೆ. ಮನೆಯಿಂದ ಯಾರಾದರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರೆ ಅವರು ಪತ್ತನಾಜೆ ದಿನ ಮನೆಗೆ ಬರುತ್ತಾರೆ. ಹೊರ ದೇಶಕ್ಕೆ ಹೋಗುವವರನ್ನು ನೀನು ಯಾವಾಗ ಬರುತ್ತೀಯಾ ಎಂದು ಕೇಳಿದರೆ ಪತ್ತನಾಜೆಗೆ ಬರುತ್ತೇನೆ ಎನ್ನುತ್ತಾರೆ. ಏಕೆಂದರೆ ಪತ್ತನಾಜೆ ದಿನ ಮನೆಯಲ್ಲಿ ದೈವಗಳಿಗೆ ವಿಶೇಷ ತಂಬಿಲ ಸೇವೆ ನಡೆಯುತ್ತದೆ. ದೈವಕ್ಕಿಂತ ಮಿಗಿಲಾದುದು ಬೇರಾವುದು ಇಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಬೇಕಾಗಿದೆ.