ಹಲಸು ಹಣ್ಣು ಮೇಳʼ ಏಳನೇ ಆವೃತ್ತಿ-ಜೈನ ಭವನದಲ್ಲಿ ಘಮಘಮಿಸುತ್ತಿವೆ ಹಲಸು ಖಾದ್ಯಗಳು

0

ನೀರುದೋಸೆ, ಸೇಮಿಗೆಯಂತೆ ಹಲಸು ಪ್ಯಾಕೇಟ್‌ ಮಾರುಕಟ್ಟೆಗೆ ಬರಲಿ – ಅಶೋಕ್‌ ರೈ
ಮೇಳ ಆಯೋಜನೆಯ ಉದ್ದೇಶ ಸದಾ ಜಾಗೃತವಾಗಿರಲಿ – ಕಿಶೋರ್‌ ಕುಮಾರ್‌ ಕೊಡ್ಗಿ

ಪುತ್ತೂರು: ನವತೇಜ ಟ್ರಸ್ಟ್, ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌, ಅಡಿಕೆ ಪತ್ರಿಕೆ ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರುಷದ ʻಹಲಸು ಹಣ್ಣು ಮೇಳ’ದ ಉದ್ಘಾಟನಾ ಸಮಾರಂಭ ಮೇ 24 ರಂದು ಸಂಜೆ ಜೈನಭವನದಲ್ಲಿ ಜರಗಿತು.


ಸಸ್ಯಗಳ ಬೆಳೆಸುವಿಕೆ ನಮ್ಮ ಮೊದಲ ಆದ್ಯತೆಯಾಗಲಿ – ಅಶೋಕ್‌ ರೈ
ಹಲಸು ಹಣ್ಣನ್ನು ಇಬ್ಭಾಗ ಮಾಡುವ ಮೂಲಕ ಶಾಸಕ ಅಶೋಕ್‌ ಕುಮಾರ್‌ ರೈ ಉದ್ಘಾಟಿಸಿ ಮಾತನಾಡಿ ʼಯುವ ಪೀಳಿಗೆಗೆ ಸಸ್ಯಗಳ ಮಹತ್ವ ಮತ್ತು ಸಸಿಗಳನ್ನು ನೆಡುವಲ್ಲಿ ಹಿರಿಯರಾದ ನಾವೆಲ್ಲಾ ಪ್ರೋತ್ಸಾಹ ನೀಡಬೇಕು. ಕಾಡು ಬೆಳೆಸಿ ನಾಡನ್ನು ಉಳಿಸುವಲ್ಲಿ ನಾವೆಲ್ಲಾ ಈಗಿಂದೀಗಲೇ ಪಣತೊಡಬೇಕಾಗಿದೆ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ಎಷ್ಟು ರುಚಿ ಕೊಡುತ್ತಿವೆಯೆಂದರೆ ನೀರುದೋಸೆ ಪುಂಡಿ, ಪತ್ರೊಡೆ ಅಂಗಡಿಯಲ್ಲಿ ಸಿಗುವ ರೀತಿಯಲ್ಲಿ ಹಲಸು ಹಣ್ಣು ಪ್ಯಾಕೇಟ್ ಮಾಡಿ ಸಪ್ಲೈ ಮಾಡಿದರೆ ಉತ್ತಮ ಮಾರುಕಟ್ಟೆ ಬರಬಹುದುʼ ಎಂದರು. ಮಾವಿನ ಮಿಡಿ ಕೊಯ್ಯುವುದನ್ನು ನಿಲ್ಲಿಸಬೇಕೆಂದು ಆದೇಶಿಸಿದ್ದೇನೆ. ಮರ ಗಿಡ ಬೆಳೆಸುವಲ್ಲಿ ನಮ್ಮದು‌ ಮೊದಲ ಆದ್ಯತೆಯಾಗಿದೆ. ಅರಣ್ಯ ಇಲಾಖೆ ಮ್ಯಾಂಜಿಯಂ ಗಿಡ ನೆಡುವುದರ ಬದಲು ಹಣ್ಣಿನ ಗಿಡಗಳನ್ನು ನೆಡಬೇಕು. ಹಣ್ಣುಗಳನ್ನು ನಾವೂ ತಿನ್ನಬೇಕು. ಪ್ರಾಣಿ ಪಕ್ಷಿಗಳಿಗೂ ತಿನ್ನಲು ಬಿಡಬೇಕುʼ ಎಂದ ಶಾಸಕರು ಸ್ವಿಗ್ಗಿ ಮೂಲಕ ಬ್ರೆಡ್ ತಿನ್ನುವ ಕಾಲಕ್ಕೆ ಬಂದಿದ್ದೇವೆ. ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪರಿಚಯವೇ ಇಗಿನ ಮಕ್ಕಳಲ್ಲಿಲ್ಲ. ಹಲಸು ಮೇಳ ಆಯೋಜನೆಯ ಮೂಲಕ ಇದು ನಡೆಯುತ್ತಿರುವು ಅಭಿನಂದನಾರ್ಹʼ ಎಂದರು. ಹಲಸು ತಿನ್ನಿ, ಹಲಸು ಪ್ರಮೋಟ್ ಮಾಡಿ, ಜೊತೆಗೆ ಒಂದೊಂದು ಗಿಡ ತಗೊಂಡು ಹೋಗಿ. ಹಣ್ಣಿನ ಗಿಡಗಳನ್ನು ಬೆಳೆಸುತ್ತಿರುವವರಿಗೆ ನಾವು ಪ್ರೋತ್ಸಾಹ ನೀಡೋಣ. ಮುಂದಕ್ಕೆ ಹಲಸು ಮೇಳದ ಜೊತೆಗೆ ಸಸ್ಯ ಮೇಳವೂ ನಡೆಯಲಿ ಎಂದು ಶಾಸಕ ರೈಯವರು ಆಶಿಸಿದರು.


ಕ್ಯಾಂಪ್ಕೋ‌ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ʻಹಲಸು ಹಣ್ಣು ಮೇಳ ಆಯೋಜಿಸುತ್ತಿರುವುದು ಅದು ಸಾಮಾಜಿಕ ಜಾಗೃತಿಯ ಉದ್ದೇಶ ಹೊಂದಿರಬೇಕು. ಕೇವಲ ವಾಣಿಜ್ಯ ಉದ್ದೇಶದಿಂದ ನಡೆದಲ್ಲಿ ಅದರ ಮಹತ್ವ ಕಳೆದುಕೊಳ್ಳುತ್ತದೆ. ಕೆಲವೊಂದು ಮೇಳಗಳಲ್ಲಿ ಹಲಸಿನ ತಿಂಡಿ ತಿನಿಸುಗಳಿಗೆ, ಹಲಸು ಹಣ್ಣಿಗೆ ಸಿಕ್ಕಾಪಟ್ಟೆ ಬೆಲೆ ಇರುವುದು ಗ್ರಾಹಕರಲ್ಲಿ ಬೇಸರ ಮೂಡಿಸುತ್ತದೆ. ಮೇಳದ ಆಯೋಜನೆಯ ಹಿಂದಿನ ಉದ್ದೇಶ ಈಡೇರುವಲ್ಲಿ ಪುತ್ತೂರಿನಲ್ಲಿ ನಡೆಯುತ್ತಿರುವ ಹಲಸು ಮೇಳ ಯಶಸ್ವಿಯಾಗಿ ಏಳು ವರ್ಷಗಳಲ್ಲಿ ನಡೆಯುತ್ತಿರುವುದು ಸಾಕ್ಷಿಯಾಗಿದೆʼ ಎಂದರು.


ಮುಖ್ಯ ಅತಿಥಿಗಳಾಗಿದ್ದ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮರವರು ಮಾತನಾಡಿ ʻಅಡಿಕೆ ಪತ್ರಿಕೆಯ ಆಂದೋಲನ ಇಂದು ಮೂರ್ತ ಸ್ವರೂಪ ಪಡೆದಿದೆ. ಹಲಸು ಮೇಳದ ಮೂಲಕ ಸೀಮಿತ ಖಾದ್ಯಕ್ಕೆ ಇದ್ದ ಹಲಸು, ಹಲಸಿನ ಬಗ್ಗೆ ಇದ್ದ ಋಣಾತ್ಮಕ ದೃಷ್ಟಿಕೋನ ಇಂದು ಮರೆಮಾಚಿದೆʼ ಎಂದರು.


ನಾ.‌ಕಾರಂತ ರವರ ಲೇಖನಗಳೊಂದಿಗೆ ಹಲಸು ಸ್ನೇಹಿ ಕೂಟದ ಹಿನ್ನೋಟದ ಹೆಜ್ಜೆಗಳು ‘ಫಲಪ್ರದ’ ಕೃತಿಯನ್ನು ಅಡಿಕೆ ಪತ್ರಿಕೆಯ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿ ಅನಾವರಣಗೊಳಿಸಿ ಮಾತನಾಡಿ ʻಅಡಿಕೆ ಪತ್ರಿಕೆ ಮತ್ತು ಹಲಸು ಸ್ನೇಹಿ ಕೂಟ ಅತ್ಯಂತ ನಿಟಕ ಸಂಬಂಧವನ್ನು ಹೊಂದಿದೆ. ಹಲಸು ಸ್ನೇಹಿ ಕೂಟದಿಂದ ಅಡಿಕೆ ಪತ್ರಿಕೆಯಲ್ಲಿಯೂ ಅನೇಕ ಲೇಖನಗಳು ಪ್ರಕಟಗೊಂಡಿವೆ. ಹಿತ್ತಲ ಗಿಡವಾಗಿದ್ದ ಹಲಸು ಇಂದು ತನ್ನ ಮೌಲ್ಯವರ್ಧಿತ ಉತ್ಪನ್ನಗಳಿಂದಾಗಿ, ವಿಶೇಷ ಆವಿಷ್ಕಾರಗಳಿಂದಾಗಿ ತುಂಬಾ ಬೆಳೆದಿದೆ. ಅಡಿಕೆ ಪತ್ರಿಕೆಯಲ್ಲಿ ಹಲಸುಗೆ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಹಲಸು ಅಭಿಯಾನ ಜರಗುತ್ತಿದೆʼ ಎಂದರು.


ಡಿಸಿಆರ್  ನಿರ್ದೇಶಕ ಡಾ. ದಿನಕರ ಅಡಿಗರವರು ಮಾತನಾಡಿ ‘ಹಣ್ಣುಗಳನ್ನು ಬರೀ ಹೊಟ್ಟೆಗೆ ತಿಂದಲ್ಲಿ ಅದರ ಪೋಷಕಾಂಶಗಳು ದೇಶಕ್ಕೆ ಹೀರಿಕೊಳ್ಳುತ್ತವೆ. ಗುಡ್ಡೆಯ ಹಣ್ಣುಗಳನ್ನೂ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ನೀಡಿ ರೈತನಿಗೆ ಸುಸ್ಥಿರ ಆದಾಯ ಕೊಡುವ ಕೆಲಸವನ್ನು ನಾವು ಮಾಡಬೇಕಾಗಿದೆ. ಮೂರು ದಿವಸದ ಮೇಳಕ್ಕೆ ಇದು ಸೀಮಿತವಾಗಬಾರದು. ನಿರಂತರ ಪ್ರೋತ್ಸಾಹ ಸಿಗಬೇಕು. ಪುತ್ತೂರಿನಲ್ಲಿ ಹಲಸು ಹಣ್ಣಿನ ಪ್ರಾಡಕ್ಟ್ ಇರುವ ಹೊಟೇಲ್ ತೆರೆದರೆ ಉತ್ತಮʼ ಎಂದರು.


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಸಹಮ್ಹಾಲಕರಾರ ಲಕ್ಷ್ಮಿಕಾಂತ ಆಚಾರ್ಯರವರು ಮಾತನಾಡಿ ʻಹಲಸು ಮೇಳ ತುಂಬಾ ಉತ್ತಮ ರೀತಿಯಲ್ಲಿ ಆಯೋಜನೆಯಾಗಿದೆ. ಇಲ್ಲಿನ ಮಳಿಗೆಗಳನ್ನು ನೋಡುವಾಗ ನಾವೂ‌ ಚಿಕ್ಕಂದಿನಲ್ಲಿ ಅಜ್ಜನ ತೋಟದಲ್ಲಿದ್ದ‌ ನೆನಪು‌ ಮರುಕಳಿಸುತ್ತಿದೆ’ ಎಂದು ಹೇಳಿ ಶುಭಾಶಿಸಿದರು.
ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ರವರು ಏಳು ವರ್ಷಗಳ ಹಿನ್ನೋಟದ ಬಗ್ಗೆ ಮಾತನಾಡಿ ʻ2018 ರಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮೇಳ ಆಯೋಜಿಸುವಾಗ ಕೇವಲ 10 ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಜನರಿಂದ ಉತ್ತಮ ಸ್ಪಂದನೆ ದೊರಕಿತ್ತು. ಅದೇ ಪ್ರೇರಣೆ ಹಲಸು ಮೇಳವನ್ನು ಏಳನೇ ವರ್ಷದವರೆಗೆ ತಂದಿದೆ. ನವತೇಜ ಟ್ರಸ್ಟ್ ಮುಂದುವರಿಸುತ್ತಾ ಕೃಷಿ ಸಂಬಂಧಿಸಿದ ಮೇಳಗಳನ್ನು ಆಯೋಜಿಸಲಿದ್ದೆವೆʼ ಎಂದರು.


ಆಯೋಜಕರಾದ ವೇಣುಗೋಪಾಲ್ ಎಸ್. ಜೆ. ಸ್ವಾಗತಿಸಿ, ಜೆಸಿಐ ಪುತ್ತೂರು ಅಧ್ಯಕ್ಷ ಮೋಹನ್ ಕೆ. ವಂದಿಸಿದರು. ಅಡಿಕೆ ಪತ್ರಿಕೆಯ ಲೇಖಕ ನಾ. ಕಾರಂತ ಪೆರಾಜೆಯವರು ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಮರಿಕೆಯವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ʻಫಲಪ್ರದʼ ಪುಸ್ತಕದ ಪ್ರಥಮ ಗೌರವ ಪ್ರತಿಯನ್ನು ಡಾ. ಮನೋಹರ ಉಪಾಧ್ಯರವರಿಗೆ ನೀಡಲಾಯಿತು. ಮುಖಪುಟ ವಿನ್ಯಾಸಕ ಎಸ್ಸಾರ್‌ ಪುತ್ತೂರುರವರನ್ನು ಇದೇ ವೇಳೆ ಗುರುತಿಸಲಾಯಿತು. ನಿಧಿ ಪ್ರಾಡಕ್ಟ್ ನವರ ಹಲಸು ʻಕಾಯಿನ್ ಪಪ್ಪಡ್ʼ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಮಂಚೂರಿ, ಟಿಕ್ಕ, ಕಬಾಬ್‌, ಬಜ್ಜಿ, ಮಿಲ್ಕ್‌ಶೇಕ್‌… ಘಮ ಘಮ
ಹಲಸು ಮೇಳದಲ್ಲಿವೆ ಸ್ಪೆಷಲ್‌ ಸ್ಪೆಷಲ್‌..

ಮೇಳವನ್ನು ಮೂರು ವಿಭಾಗ ಮಾಡಿದ್ದು, ಆರಂಭದಲ್ಲಿ ಹಲಸಿನ ಗಿಡಗಳು, ಅದರ ಉತ್ಪನ್ನ, ಹಲಸಿನ ಸೋಳೆಯನ್ನು ಬಿಡಿಸುವ ಪರಿಕರಗಳ ಮಳಿಗೆ, ಇತರ ಹಣ್ಣುಗಳ ಮಳಿಗೆ, ಕೃಷಿ ಪರಿಕರಗಳ ಮಳಿಗೆ, ಆಹಾರ ಮೇಳಗಳು ಸಿಗುತ್ತವೆ.  ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರ ಬಾಯಿ ಚಪ್ಪರಿಸಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ. ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶವಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ವಿಶೇಷ ಖಾದ್ಯಗಳಾಗಿವೆ. ಹಲಸು ತಿನ್ನುವ, ಹಲಸು ಎತ್ತುವ ಸಹಿತ ವಿವಿಧ ಸ್ಪರ್ಧೆಗಳು ಮೇ 25 ರಂದು ಜರಗಲಿವೆ. ಮಕ್ಕಳಿಗೆ ಹಲಸಿನ ಉತ್ಪನಗಳ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳು ನಡೆಯಲಿವೆ.

ಹಲಸು ಖಾದ್ಯ ಸವಿದ ಅಶೋಕ್‌ ರೈ ಮತ್ತು ಮಕ್ಕಳು
ಉದ್ಘಾಟನಾ ಸಮಾರಂಭದ ಬಳಿಕ ಹಲಸು ಖಾದ್ಯ ಮಳಿಗೆಗಳಿಗೆ ಪುತ್ರ ಪ್ರಧಿಲ್‌ ರೈ, ಪುತ್ರಿಯರಾದ ರಿಧಿ ರೈ ಮತ್ತು ಶೃಧಿ ರೈ ಯವರೊಂದಿಗೆ ಭೇಟಿ ನೀಡಿದ ಶಾಸಕ ಅಶೋಕ್‌ ರೈಯವರು ಹಲಸಿನ ವಿವಿಧ ಖಾದ್ಯಗಳನ್ನು ಸವಿದರು. ʻಸುದ್ದಿʼಯೊಂದಿಗೆ ಮಾತನಾಡಿದ ರೈಯವರ ಮಕ್ಕಳು ʻಹಲಸು ಮೇಳʼ ನೋಡಿ ತುಂಬಾ ಸಂತೋಷವಾಗಿದೆ. ಇಲ್ಲಿನ ಖಾದ್ಯಗಳ ಟೇಸ್ಟ್‌ ತುಂಬಾ ರುಚಿಕರವಾಗಿದೆʼ ಎಂದರು.

ಇಂದು ನಡೆಯಲಿದೆ ʻಹಣ್ಣುಗಳೊಂದಿಗೆ ನಾವು ನೀವುʼ
ಮೇ 25ಕ್ಕೆ ʻಹಣ್ಣುಗಳೊಂದಿಗೆ ನಾವು ನೀವುʼ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಮಾವಿನ ರಕ್ಷಣೆ ಕುರಿತು ಮಂಗಳೂರಿನ ಡಾ. ಮನೋಹರ ಉಪಾಧ್ಯ ಮತ್ತು ಅದರ ಅಭಿವೃದ್ಧಿ, ಸಂರಕ್ಷಣೆ ಕುರಿತು ಸುಳ್ಯದ ಜಯರಾಮ ಮುಂಡೋಳಿಮೂಲೆ ಮಾತನಾಡಲಿದ್ದಾರೆ.  ಕೊಕ್ಕೋ ಮೌಲ್ಯವರ್ಧನೆ ಕುರಿತು ಪುಣಚದ ನವೀನ ಕೃಷ್ಣ ಶಾಸ್ತ್ರಿಯವರು, ರಂಬುಟಾನ್ ಕೃಷಿ ಮಾರುಕಟ್ಟೆಯ ಕುರಿತು ವಿಶ್ವಪ್ರಸಾದ್ ಸೇಡಿಯಾಪು, ನವನೀತ ನರ್ಸರಿಯ ವೇಣುಗೋಪಾಲ್ ಎಸ್ ಜೆ ಅವರು ಸಮನ್ವಯಕಾರರಾಗಿರಲಿದ್ದಾರೆ.  ಶ್ರೀ ರಾಮಚಂದ್ರಪುರ ಮಠದ ಮಾತೃತ್ವಂ ಇದರ ಅಧ್ಯಕ್ಷೆ ಈಶ್ವರೀ ಶ್ಯಾಮ ಭಟ್ ಬೇರ್ಕಡವು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here