ಬೆಟ್ಟಂಪಾಡಿ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಎನ್ನೆಸ್ಸೆಸ್ ಫೆಸ್ಟ್

0

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಎನ್ಎಸ್ಎಸ್ ಹಬ್ಬ ‘ಅಭ್ಯುದಯ’ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಲಾಯ್ಡ್  ವಿಕ್ಕಿ ಡಿಸೋಜಾ ಮಾತನಾಡಿ ಅಭ್ಯುದಯವು ಸ್ವಯಂಸೇವಕರ ಹುರುಪಿನ ಚಿಲುಮೆಯಾಗಿದ್ದು, ಒಗ್ಗಟ್ಟು ಹಾಗೂ ಶ್ರಮದ ಪ್ರತಿಫಲವಾಗಿದೆ. ಕಾಲೇಜಿನ ಎನ್ಎಸ್ಎಸ್ ಘಟಕವು ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈ ಅಭ್ಯುದಯ ಕಾರ್ಯಕ್ರಮವು ನಮ್ಮ ಹಿರಿಮೆಯ ಕಿರೀಟಕ್ಕೆ ಮತ್ತೊಂದು ಮುತ್ತನ್ನು ಪೋಣಿಸುವಂತದ್ದಾಗಿದೆ. ಈ ಕಾರ್ಯಕ್ರಮವು ಹಲವರ ಪ್ರತಿಭೆಗೆ ವೇದಿಕೆಯಾಗಿ ಸ್ಪೂರ್ತಿಯಾಗುವಂಥದ್ದು ಎಂದರು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿನ ಎನ್ಎಸ್ಎಸ್ ಯೋಜನಾಧಿಕಾರಿ ಶೇಷಪ್ಪ ಅಮೀನ್ ಮಾತನಾಡಿ ಗ್ರಾಮೀಣ ಭಾಗದ ಸರಕಾರಿ ಕಾಲೇಜಿನಲ್ಲಿ ನಡೆಯುತ್ತಿರುವಂತಹ ಈ ಕಾರ್ಯಕ್ರಮವು ಹಲವಾರು ಇತರ ಕಾಲೇಜುಗಳಿಗೆ ಪ್ರೇರಣೆಯಾಗುವಂಥದ್ದು, ಸರ್ವರ ಸೇವೆಯಿಂದ ಸಫಲತೆ ಲಭಿಸುವುದು ಇಲ್ಲಿ ನಿರೂಪಿತಗೊಂಡಿದೆ ಎಂದು ಹೇಳಿದರು.

 ಮುಖ್ಯ ಅತಿಥಿ ನವೀನ್ ರೈ ಚೆಲ್ಯಡ್ಕ ಮಾತನಾಡಿ ಎನ್ನೆಸ್ಸೆಸ್ ಎಂಬುದು ವಿದ್ಯಾರ್ಥಿಗಳಿಗೆ ಬಾಹ್ಯಜ್ಞಾನಗಳನ್ನು ತುಂಬುವ ತಾಣವಾಗಿದೆ. ಸನ್ಮಾರ್ಗದಲ್ಲಿ ಜೀವನವನ್ನು ಮುನ್ನಡೆಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಜೀವನ ಮೌಲ್ಯಗಳನ್ನು ಅರ್ಥೈಸುವುದರ ಜೊತೆಗೆ ಸಮಾಜದ ಜೊತೆಗಿನ ಬಂಧವನ್ನು ಬಿಗಿತಗೊಳಿಸುವಲ್ಲಿ ಎನ್ನೆಸ್ಸೆಸ್ ನ ಪಾತ್ರವಿದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಆಂತರಿಕ ಗುಣಮಟ್ಟ  ಭರವಸಾ ಕೋಶದ ಸಂಚಾಲಕ ಡಾ. ಕಾಂತೇಶ್ ಎಸ್ ಇಂತಹ ಪಠ್ಯೇತರ ವಿಷಯಗಳಿಂದ ಸಾಮಾನ್ಯ ಬದುಕಿಗೆ ಅಗತ್ಯವಿರುವ ಪಾಠವನ್ನು ನಾವು ಪಡೆಯುತ್ತೇವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನ ಆಗುಹೋಗುಗಳ ಬಗ್ಗೆ ಅರಿವಾಗಲು ಸತತ ಅಭ್ಯಾಸ ಮತ್ತು ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದರು.

 ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಕಾಲೇಜುಗಳು ವಿದ್ಯಾರ್ಥಿಗಳ ಸಾಧನೆಗಳಿಂದ ಎಲ್ಲೆಡೆ ಪ್ರಖ್ಯಾತಿ ಹೊಂದುತ್ತವೆ. ಇಂತಹ ಕಾರ್ಯಕ್ರಮಗಳನ್ನು ಸಂಯೋಜಿಸುವುದರಿಂದ ಜವಾಬ್ದಾರಿಗಳ ನಿರ್ವಹಿಸುವಿಕೆಯಿಂದ ಹಿಡಿದು ಕೌಶಲ್ಯಗಳನ್ನೂ ಅದ್ಭುತ ಅರಿವುಗಳನ್ನೂ ಪಡೆಯುವಂತಾಗುತ್ತದೆ ಎಂದರು.

  ‘ಅಭ್ಯುದಯ’ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ಸುಮಾರು ಹನ್ನೆರಡು ಸರಕಾರಿ ಕಾಲೇಜುಗಳ ಇನ್ನೂರಕ್ಕೂ ಅಧಿಕ ಎನ್ನೆಸ್ಸೆಸ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಘಟಕ ನಾಯಕಿ ಅಂಕಿತ ಎ ಎಚ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. 

ಸಂಜೆ ನಡೆದ ಸಮಾರೋಪ ಸಭೆಯಲ್ಲಿ  ಅಡ್ವಕೇಟ್ ಪ್ರಕಾಶ್ ಚಂದ್ರ ರೈ ಕೈಕಾರ  ಮಾತನಾಡಿ ಈ ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿಕೊಂಡ ಅನೇಕ ಮಂದಿಯ ಹಲವಾರು ದಿನಗಳ ಪರಿಶ್ರಮವು ಸಾಕಾರಗೊಂಡ ಕ್ಷಣವಿದು. ಕಡಿಮೆ ಖರ್ಚಿನಲ್ಲಿ ಉತ್ತಮ ಸೌಲಭ್ಯಗಳೊಂದಿಗೆ  ಶಿಕ್ಷಣದ ಅವಕಾಶವನ್ನು ಕಲ್ಪಿಸಿಕೊಟ್ಟ ಸರಕಾರಿ ಕಾಲೇಜುಗಳ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ ಎಂದರು. ವಿವಿಧ ಕಾಲೇಜುಗಳಿಂದ ಆಗಮಿಸಿದ ಕೆಲವು ಸ್ವಯಂಸೇವಕರೂ ಅಲ್ಲಿನ ಯೋಜನಾಧಿಕಾರಿಗಳೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಯೋಜನಾಧಿಕಾರಿ ಡಾ. ಲಾಯ್ಡ್ ವಿಕ್ಕಿ ಡಿಸೋಜ  ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

  ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯು ‘ಸಮಗ್ರ’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯವು ‘ರನ್ನರಪ್’  ಆಗಿ ಹೊರಹೊಮ್ಮಿತು. ಕಾರ್ಯಕ್ರಮದಲ್ಲಿ  ಅವಿನಾಶ್ ರೈ ಕುಡ್ಚಿಲ, ಪ್ರಕಾಶ್ ರೈ ಕೊಯ್ಲ ,ಗಣ್ಯರು , ಉಪನ್ಯಾಸಕರು, ಯೋಜನಾಧಿಕಾರಿಗಳು, ಸ್ವಯಂಸೇವಕರು ಉಪಸ್ಥಿತರಿದ್ದರು. ಡಾ ಕಾಂತೇಶ್ ಎಸ್ ಸ್ವಾಗತಿಸಿ, ಯೋಜನಾಧಿಕಾರಿ ಡಾ. ಯೋಗೀಶ್ ಎಲ್ ಎನ್ ವಂದಿಸಿದರು. ಘಟಕನಾಯಕಿ ಕೃತಿಕಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here