ಉಪ್ಪಿನಂಗಡಿ :ರಸ್ತೆ ಮಧ್ಯೆ ಹೂತು ಹೋದ ಲಾರಿ

0

ಉಪ್ಪಿನಂಗಡಿ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಾಗಾರಿ ಸಂಬಂಧ ನಿರ್ಮಾಣಗೊಂಡ ಎತ್ತರಿಸಿದ ರಸ್ತೆಯ ಅಂಡರ್ ಪಾಸ್ ಬಳಿ ಗುರುವಾರ ಸಂಭವಿಸಿದ ಟ್ರಾಫಿಕ್ ಜಾಮ್ ಗೆ ಪರಿಹಾರವಾಗಿ ಅಳವಡಿಸಲಾದ ಕಾಂಕ್ರೀಟ್ ಚರಂಡಿಯ ಮೇಲ್ಭಾಗಕ್ಕೆ ತರಾತುರಿಯಲ್ಲಿ ಮಣ್ಣುಹಾಕಿ ನಿರ್ಮಿಸಲಾದ ರಸ್ತೆಯಲ್ಲಿ ಶುಕ್ರವಾರದಂದು ಲಾರಿಯೊಂದು ಹೂತು ಹೋಗಿ ಸಮಸ್ಯೆ ಮೂಡಿಸಿತ್ತು.


ಉಪ್ಪಿನಂಗಡಿಯ ರಾಜ ಕಾಲುವೆಯ ಹಾದಿಯಲ್ಲಿ ಕಿರಿದಾದ ಮೋರಿಯನ್ನು ತೆರವುಗೊಳಿಸಿ ಬೃಹತ್ ಗಾತ್ರದ ಕಾಂಕ್ರೀಟ್ ಮೋರಿಯನ್ನು ಅಳವಡಿಸುವ ಕಾಮಗಾರಿ ನಡೆದಿತ್ತು. ಈ ವೇಳೆ ಮೋರಿ ಹಾದು ಹೋಗುವ ರಸ್ತೆಯ ಅರ್ಧ ಭಾಗ ವನ್ನು ಮಣ್ಣು ಹಾಕಿ ಸಂಚಾರ ಯೋಗ್ಯವನ್ನಾಗಿಸಲಾಗಿತ್ತು. ಅರ್ಧ ಭಾಗ ಮಳೆಯ ಕಾರಣಕ್ಕೆ ಮಣ್ಣು ಹಾಕದೆ ಬಾಕಿ ಇರಿಸಲಾಗಿತ್ತು. ಆದರೆ ಗುರುವಾರ ಗಂಟೆಗಟ್ಟಲೆ ವಾಹನಗಳು ಸಂಚರಿಸಲಾಗದೆ ಟ್ರಾಫಿಕ್ ಜಾಮ್ ಆಗಿದ್ದರಿಂದ ರಸ್ತೆಯ ಉಳಿದ ಅರ್ಧ ಭಾಗಕ್ಕೂ ತರಾತುರಿಯಲ್ಲಿ ಮಣ್ಣು ತುಂಬಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.


ಮಳೆ ಸುರಿಯುತ್ತಿದ್ದ ಸಮಯದಲ್ಲಿ ಮೃದು ಮಣ್ಣನ್ನು ತುಂಬಿಸಿ ನಿರ್ಮಿಸಲಾದ ರಸ್ತೆಯಲ್ಲಿ ಶುಕ್ರವಾರದಂದು ಘನ ವಾಹನವೊಂದು ಸಂಚರಿಸಿದಾಗ ಲಾರಿಯ ಚಕ್ರವು ರಸ್ತೆಯ ಮಧ್ಯ ಭಾಗವನ್ನು ಸೀಳಿದಂತೆ ಹೂತು ಹೋಯಿತು. ಇದರಿಂದಾಗಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು. ಎಚ್ಚೆತ್ತ ನಿರ್ಮಾಣ ನಿರತ ಸಂಸ್ಥೆಯವರು ತುರ್ತು ಕಾರ್ಯಾಚರಣೆ ನಡೆಸಿ ಹೂತು ಹೋದ ವಾಹನವನ್ನು ಸ್ಥಳಾಂತರಿಸಿ ರಸ್ತೆಯಲ್ಲಿ ಹಾಕಲಾದ ಒಂದಷ್ಟು ಮೃದು ಮಣ್ಣನ್ನು ತೆರವುಗೊಳಿಸಿದರು. ಬಳಿಕ ಜಲ್ಲಿ ಮಿಶ್ರಿತ ಗಟ್ಟಿ ಮಣ್ಣನ್ನು ಹಾಕಿ ರಸ್ತೆಯನ್ನು ಪುನರ್ ನಿರ್ಮಿಸಿದರು. ತನ್ಮೂಲಕ ಪುನರಪಿ ವಾಹನ ಸಂಚಾರಕ್ಕೆ ತಡೆಯಾಗದಂತೆ ನೋಡಿಕೊಂಡರು.


ದ.ಕ ಜಿಲ್ಲಾಧಿಕಾರಿ ಹಾಗೂ ಪುತ್ತೂರು ಸಹಾಯಕ ಕಮಿಷನರ್ ರವರ ಆಶಯದಂತೆ ರಾಜಕಾಲುವೆಯ ಕಾಂಕ್ರೀಟ್ ಮೋರಿ ಅಳವಡಿಸುವ ಕಾರ್ಯ ವನ್ನು ಹೆದ್ದಾರಿ ಅಗಲೀಕರಣದ ಕಾಮಗಾರಿಯ ಹೊಣೆ ಹೊತ್ತ ಕೆಎನ್‌ಆರ್ ಸಂಸ್ಥೆಯವರು ನಿರ್ವಹಿಸಿದ್ದು, ಮುಂದಿನ ಕಾಮಗಾರಿಯಾದ ಕಾಂಕ್ರೀಟ್ ಚರಂಡಿಯ ಎರಡೂ ಪಾರ್ಶ್ವದಲ್ಲಿ ಮಣ್ಣು ಜರಿಯದಂತೆ, ಹಾಗೂ ವಾಹನ ಸವಾರರು ಮತ್ತು ಪಾದಚಾರಿಗಳು ಬೀಳದಂತೆ ತಡೆಗೋಡೆಯನ್ನು ನಿರ್ಮಿಸಿ ಸುರಕ್ಷತೆಯನ್ನು ಒದಗಿಸಬೇಕಾದ ಕಾಮಗಾರಿಯನ್ನು ತುರ್ತಾಗಿ ನಡೆಸಬೇಕಾಗಿದೆ.

LEAVE A REPLY

Please enter your comment!
Please enter your name here