ಉಪ್ಪಿನಂಗಡಿ: ವಿದ್ಯುತ್ ಸಂಪರ್ಕ ಕಡಿತಗೊಂಡು 10 ದಿನಗಳಿಂದ ಅಂಧ ಮಗನೊಂದಿಗೆ ಕಾಲ ಕಳೆಯುತ್ತಿದ್ದ ವೃದ್ಧೆಯ ಮನೆಗೆ ಕೊನೆಗೂ ವಿದ್ಯುತ್‌ ಸಂಪರ್ಕ-ಗ್ರಾ.ಪಂ ಸದಸ್ಯ ಯು.ಟಿ ತೌಸೀಫ್‌ ರವರ ಸಕಾಲಿಕ ಮಧ್ಯಪ್ರವೇಶ

0

ಉಪ್ಪಿನಂಗಡಿ : ವಿದ್ಯುತ್ ಸಂಪರ್ಕವಿದ್ದ ಮನೆಯ ವಿದ್ಯುತ್ ಸಂಪರ್ಕವನ್ನು ಕತ್ತರಿಸಲ್ಪಟ್ಟು ಹತ್ತು ದಿನಗಳಿಂದ ವಿದ್ಯುತ್ ಇಲ್ಲದೆ ಅತಂತ್ರ ಸ್ಥಿತಿಗೆ ಸಿಲುಕಿ, ಅಂಧ ಮಗನೊಂದಿಗೆ ಜೀವನ ನಡೆಸುತ್ತಿದ್ದ ವೃದ್ದೆಗೆ ಪಂಚಾಯತ್ ಸದಸ್ಯರೋರ್ವರ ಸಕಾಲಿಕ ಮಧ್ಯಪ್ರವೇಶದಿಂದಾಗಿ ವಿದ್ಯುತ್ ಸಂಪರ್ಕವನ್ನು ಪುನರ್ ಕಲ್ಪಿಸಿದ ಘಟನೆ ಆದಿತ್ಯವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಕನಾರ್ಟಕ ವಿಕಾಸ ಗ್ರಾಮೀಣ್ ಬ್ಯಾಂಕ್ ಬಳಿಯ ನಿವಾಸಿ ರಾಜಮಣಿ(75) ಮತ್ತವರ ಕಣ್ಣು ಕಾಣದ ಮಗ ತಂಗವೇಲು ವಾಸಿಸುತ್ತಿರುವ ಮನೆಯು ಹಲವು ಮನೆ ಮನೆ ನಿವೇಶನಗಳ ಮಧ್ಯದಲ್ಲಿದ್ದು, ಮನೆಯ ವಿದ್ಯುತ್ ಸಂಪರ್ಕದ ತಂತಿಯು ಮೇ.16 ರಂದು ಕಡಿತಕ್ಕೊಳಗಾಗಿತ್ತು. ಬಳಿಕ ಸದ್ರಿ ಸಂಪರ್ಕವನ್ನು ಪುನರ್ ಸ್ಥಾಪಿಸಲು ಸುತ್ತಮುತ್ತಲ ನಿವಾಸಿಗರು ಆಕ್ಷೇಪವನ್ನು ವ್ಯಕ್ತಪಡಿಸಿದರು. ವೃದ್ದೆಯ ಮನವಿಗೂ ಸ್ಥಳೀಯ ಪಂಚಾಯತ್ ಸದಸ್ಯ ಯು ಟಿ ತೌಸೀಫ್ ರವರ ಮನವಿಗೂ ಸ್ಪಂದನ ದೊರೆಯದೆ ನಿರಂತರ ಹತ್ತು ದಿನಗಳ ಕಾಲ ವೃದ್ದೆಯ ಕುಟುಂಬ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿಯೇ ಕಾಲ ಕಳೆಯಿತು.‌ ಈ ಸೂಕ್ಷತೆಯ ಬಳಿಕ ಮೆಸ್ಕಾಂ ಅಧಿಕಾರಿಗಳ ಸಹಕಾರ ಪಡೆದು ಭೂಮಿಯ ಅಂತರ್ಗತ ಕೇಬಲ್ ಅಳವಡಿಸಿ ಆದಿತ್ಯವಾರದಂದು ವೃದ್ದೆಯ ಮನೆಗೆ ವಿದ್ಯುತ್ ಸಂಪರ್ಕವನ್ನು ಪುನರಪಿ ಒದಗಿಸುವಲ್ಲಿ ಪಂಚಾಯತ್ ಸದಸ್ಯ ಯು ಟಿ ತೌಸೀಫ್ ಯಶಸ್ವಿಯಾದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜಮಣಿ ಅವರು, ನನ್ನ ಕುರುಡ ಮಗನಿಗೆ ಕತ್ತಲೆ ಯಾವುದು? ಬೆಳಕು ಯಾವುದು? ಎನ್ನುವುದೇ ತಿಳಿದಿಲ್ಲ. ಆತನನ್ನು ಸಾಕಿ ಸಲಹುವ ನನಗೆ ಬೆಳಕಿನ ಅಗತ್ಯತೆ ಇತ್ತು. ನನ್ನ ಮನೆಯ ವಿದ್ಯುತ್ ಸಂಪರ್ಕದ ತಂತಿ ಕಡಿತಗೊಂಡ ಬಳಿಕ ಹತ್ತು ದಿನಗಳ ಕಾಲ ಕತ್ತಲೆಯಲ್ಲೇ ದಿನ ಕಳೆದೆ. ಸುತ್ತಮುತ್ತಲ ಮನೆಯವರ ಭೂಮಿಯಿಂದ ಹಾದು ಹೋಗುವಂತೆ ವಿದ್ಯುತ್ ಸಂಪರ್ಕ ಸಾಧಿಸಲು ಯಾಚಿಸಿದೆನಾದರೂ ಯಾರೂ ಸ್ಪಂದಿಸಲಿಲ್ಲ. ನನ್ನ ವಿನಂತಿಯ ಮೇರೆಗೆ ನನ್ನ ಪರವಾಗಿ ಪಂಚಾಯತ್ ಸದಸ್ಯ ತೌಸೀಫ್ ರವರು ಎಲ್ಲರಲ್ಲಿ ವಿನಂತಿಸಿದ್ದರೂ ಅವರ ಮಾತಿಗೂ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ಮೆಸ್ಕಾಂ ಅಧಿಕಾರಿಗಳ ಸಹಕಾರ ಪಡೆದು ಭೂಮಿಯ ಅಡಿಯಿಂದ ಕೇಬಲ್ ಎಳೆದು ನನ್ನ ಮನೆಗೆ ಇವತ್ತು ಸಾಯಂಕಾಲದ ವೇಳೆ ವಿದ್ಯುತ್ ಒದಗಿಸಿದ್ದಾರೆ. ಹತ್ತು ದಿನಗಳಿಂದ ಕಾಡಿದ ಸಮಸ್ಯೆ ನಿವಾರಣೆಯಾಗಿದೆ ಎಂದು ಕಣ್ಣೀರು ಸುರಿಸುತ್ತಾ ಹೇಳಿದರು.

ಅಂಧ ಮಗನೊಂದಿಗೆ ಜೀವನ ನಡೆಸುತ್ತಿರುವ ವೃದ್ದೆಯ ಸಂಕಷ್ಟಕ್ಕೆ ಸ್ಪಂದಿಸಿದ ಪಂಚಾಯತ್ ಸದಸ್ಯ ಯು ಟಿ ತೌಸೀಫ್ ರವರ ಕಾರ್ಯ ವೈಖರಿಗೆ ನಾಗರಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here