ಶಾಸಕ ಹರೀಶ್ ಪೂಂಜರನ್ನು ಬಂಧಿಸಿದರೆ ದ.ಕ. ಜಿಲ್ಲೆ ಬಂದ್- ಸಂಸದ ನಳಿನ್ ಕುಮಾರ್ ಕಟೀಲ್

0

ಮಾನ್ಯ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್‌ರವರೇ.. ಪ್ರಧಾನಿ ಮೋದೀಜಿ ಎರಡು ಬಾರಿ ಸಂಸದರಾಗಿದ್ದರೆ ನೀವು ಅವರಿಗಿಂತ ಹೆಚ್ಚು ಸಲ 3ಸಲ ಸಂಸದರಾಗಿದ್ದೀರಿ. ಜಿಲ್ಲೆಯನ್ನು ದೇಶದಲ್ಲಿ ಪ್ರತಿನಿಧಿಸಿದ್ದೀರಿ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದೀರಿ. ಇನ್ನು ಮುಂದೆಯೂ ಅಧಿಕಾರ ಹಿಡಿಯಲಿದ್ದೀರಿ. ಜನ ಸೇವಕರಾಗಿ ಜನರಿಂದ ಆಯ್ಕೆಯಾಗಿರುವ ನೀವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಬಂಧನವನ್ನು ಪೊಲೀಸರು ಮಾಡಿದರೆ ದ.ಕ. ಜಿಲ್ಲಾ ಬಂದ್ ಎಂಬ ಹೇಳಿಕೆ ಕೊಟ್ಟಿದ್ದೀರಿ. ಯಾಕೆ!? ದ.ಕ. ಜಿಲ್ಲೆಯ ಎಲ್ಲರೂ ನಿಮ್ಮ ಪಕ್ಷದ ಅಭಿಮಾನಿಗಳು ಸಹಿತ ಅದನ್ನು ಸ್ವಯಂಪ್ರೇರಿತರಾಗಿ ಸ್ವೀಕರಿಸುತ್ತಾರೆ ಎಂಬ ಅಭಿಪ್ರಾಯ ತಮ್ಮಲ್ಲಿ ಇಲ್ಲವಲ್ಲ? ಹಾಗಿರುವಾಗ ಅದರಿಂದ ದಿನನಿತ್ಯದ ಸಂಪಾದನೆಯಲ್ಲಿ ಬದುಕುವ ಎಷ್ಟೋ ಜನರ ಜೀವನಕ್ಕೆ ಗಂಭೀರ ಸಮಸ್ಯೆ, ಹೆಚ್ಚಿನವರಿಗೆ ಆರ್ಥಿಕ ಸಮಸ್ಯೆ, ವ್ಯವಹಾರಕ್ಕೆ ತೊಂದರೆ, ಜೀವ, ಸೊತ್ತು ಹಾನಿಯೂ ಉಂಟಾಗಬಹುದು ಎಂದೆಲ್ಲಾ ತಮಗೆ ತಿಳಿದಿದೆ. ಸುಪ್ರೀಂ ಕೋರ್ಟ್ ಕೂಡ ಬಲಾತ್ಕಾರದ ಬಂದ್‌ಗೆ ಕರೆ ಕೊಡಬಾರದು, ಅದು ಅತ್ಯಾಚಾರಕ್ಕೆ ಸಮ. ಶಿಕ್ಷಾರ್ಹ, ಬಂದ್‌ಗೆ ಕರೆ ಕೊಟ್ಟವರು ಅದರಿಂದ ಆಗುವ ತೊಂದರೆಗಳಿಗೆ ಪರಿಹಾರವೂ ಕೊಡಬೇಕು ಎಂದು ಹೇಳಿದೆ.


ನಾವು ಕಳೆದ ಕೆಲವು ವರ್ಷಗಳಿಂದ ಬಲಾತ್ಕಾರದ ಬಂದ್‌ನ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಕ್ಷುಲ್ಲಕ ಕ್ಷುಲ್ಲಕ ಕಾರಣಗಳಿಗೆ ಕ್ಷಣ ಮಾತ್ರದಲ್ಲಿ ಬಂದ್‌ಗೆ ಕರೆ ಕೊಡುತ್ತಿದ್ದ ಸಂಪ್ರದಾಯವನ್ನು ನಿಲ್ಲಿಸಲು ಜನರು ಬೆಂಬಲ ನೀಡಿದ್ದಾರೆ. ಬಲಾತ್ಕಾರದ ಬಂದ್ ತಿರಸ್ಕರಿಸಿದ್ದಾರೆ. ಹರೀಶ್ ಪೂಂಜರ ಬಂಧನವಾದರೆ ಅದರಿಂದ ಅನ್ಯಾಯವಾಗಿದೆ ಎಂದು ತಮಗೆ ಕಂಡು ಬಂದರೆ ಅದಕ್ಕೆ ಬೇಕಾದಷ್ಟು ಪ್ರತಿಭಟನೆಗಳಿಗೆ ಅವಕಾಶಗಳಿವೆ ಎಂದು ತಮಗೆ ತಿಳಿದಿದೆ. ಆದರೆ ಅದರ ಬದಲಾಗಿ ದ.ಕ. ಜಿಲ್ಲಾ ಬಂದ್‌ಗೆ ಕರೆ ಕೊಟ್ಟರೆ ಅದರಿಂದ ಗಲಾಟೆ ಆಗುತ್ತದೆ, ಜೀವ ಹಾನಿ, ಸಾರ್ವಜನಿಕರ ಸೊತ್ತುಗಳಿಗೆ ಹಾನಿ ಆಗಿಯೇ ಆಗುತ್ತದೆ ಎಂದು ತಮಗೆ ತಿಳಿದಿಲ್ಲವೇ?. ಮೂರು ಬಾರಿ ಸಂಸದರಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿದ್ದ ತಮಗೆ ಹೋರಾಟಕ್ಕೆ ಬಂದ್ ಬಿಟ್ಟು ಬೇರೆ ಯಾವ ದಾರಿಯೂ ಸಿಗಲಿಲ್ಲವೇ?. ನೀವೇ ಆ ರೀತಿ ಕರೆ ಕೊಟ್ಟರೆ ಮುಂದಕ್ಕೆ ಪ್ರತಿಭಟನೆಯಾಗಿ ಎಲ್ಲರೂ ಅದನ್ನು ಅನುಸರಿಸುವುದರಿಂದ ದ.ಕ ಜಿಲ್ಲೆ ಆಗಾಗ ಬಂದ್ ಆಗುತ್ತಾ ಜನರ ಜೀವನ ಶಾಶ್ವತವಾಗಿ ಬಂದ್ ಆಗಬಹುದು. ಆದುದರಿಂದ ತಾವು ಈ ಬಲಾತ್ಕಾರದ ಬಂದ್‌ಗಳನ್ನು ವಿರೋಧಿಸುವ, ಜನ ಸಾಮಾನ್ಯರಿಗೆ ಆಗುವ ತೊಂದರೆಗಳನ್ನು ನಿವಾರಿಸುವ ಜನಪ್ರತಿನಿಧಿಯಾಗಿ, ಜನ ನಾಯಕರಾಗಿ ಬೆಳೆಯಿರಿ ಎಂದು ಮನವಿ ಮಾಡುತ್ತಿದ್ದೇನೆ.

ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ, ಪುತ್ತೂರು, ಸುಳ್ಯ, ಬೆಳ್ತಂಗಡಿ

LEAVE A REPLY

Please enter your comment!
Please enter your name here