ಎಸ್‌ಆರ್‌ಕೆ ರಜತ ಸಂಭ್ರಮ ಸಮಾರೋಪ-ಸಭಾ ಕಾರ್ಯಕ್ರಮ, ಸನ್ಮಾನ

0

ಎಲ್ಲರ ಮನಸ್ಸು ಅರಿಯುವ ಮನಸ್ಸು ಕೇಶವ ಅಮೈ ಅವರಲ್ಲಿದೆ- ಭಾಗೀರಥಿ ಮುರುಳ್ಯ
ಏಣಿಯ ಮೂಲಕ ಜನರನ್ನು ಒಂದುಗೂಡಿಸಿದ್ದಾರೆ: ಮಠಂದೂರು
ಅನುಕಂಪ ಬೇಡ, ಅವಕಾಶ ನೀಡಿ: ಎಂ.ಬಿ.ಸದಾಶಿವ
ಎಸ್‌ಆರ್‌ಕೆ ಗ್ರಾಮೀಣ ಭಾರತದ ಹೆಮ್ಮೆಯ ಸಂಸ್ಥೆ: ಸುಚರಿತ ಶೆಟ್ಟಿ
ಹೊರ ದೇಶಗಳಿಗೂ ರಫ್ತು- ಆಗಲಿ: ಡಾ.ಮೋಹನ
ಪ್ರಗತಿಯ ಮೆಟ್ಟಿಲು ಮೇಲೇರಲಿ: ಡಾ.ಪ್ರಸನ್ನ ಹೆಬ್ಬಾರ್
ಸಮಾಜದ ಸೊತ್ತು, ರೋಲ್ ಮಾಡೆಲ್: ಸುರೇಶ್ ಬೈಲು
ಕೊಡುಗೈ ದಾನಿ: ಚಂದ್ರಶೇಖರ್
ಕೊಯಿಲದಲ್ಲಿ ಜಾತ್ರೆಯ ಸಂಭ್ರಮ: ಅರವಿಂದ ಬೋಳಾರ್
ಕೊರತೆಗಳೇ ಸಾಧನೆಗೆ ಸ್ಪೂರ್ತಿ: ರಾಮಕೃಷ್ಣ ಭಟ್

ಪುತ್ತೂರು: ಕೃಷಿ ಚಟುವಟಿಕೆಗಳಿಗೆ ಪೂರಕ ಯಂತ್ರೋಪಕರಣಗಳ ತಯಾರಿಕೆ ಮೂಲಕ ಮನೆ ಮಾತಾಗಿರುವ ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್‌ನ ರಜತ ಸಂಭ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ ಮೇ.25ರಂದು ರಾತ್ರಿ ಕೊಯಿಲ ಗ್ರಾಮದ ಕಲಾಯಿಗುತ್ತುನಲ್ಲಿ ನಡೆಯಿತು.


ಅತಿಥಿಯಾಗಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಕೇಶವ ಅಮೈ ಅವರು ಸಾಮಾನ್ಯರಲ್ಲಿ ಅಸಾಮಾನ್ಯ ವ್ಯಕ್ತಿಯಾಗಿದ್ದಾರೆ. ಎಲ್ಲರ ಮನಸ್ಸು ಅರಿಯುವ ಮನಸ್ಸು ಅವರಲ್ಲಿ ಇದೆ. ಹಿಂದೆ ಬಿದಿರಿನಿಂದ ತಯಾರಿಸಿದ ಏಣಿಯನ್ನು ಕೃಷಿಕರು ಬಳಸುತ್ತಿದ್ದರು. ಈ ಕಷ್ಟವನ್ನು ಅರಿತುಕೊಂಡೇ ಕೇಶವ ಅಮೈ ಅವರು ಅಲ್ಯುಮಿನಿಯಂ ಏಣಿ ತಯಾರಿಸುವ ಕಾಯಕ ಆರಂಭಿಸಿದ್ದಾರೆ. ಅವರಿಗೆ ಪತ್ನಿ, ಮನೆಯವರ ಸಹಕಾರ ದೊರೆತಿದೆ. ಕೃಷಿಕರಿಂದ ಪ್ರೋತ್ಸಾಹ ದೊರೆತಿದೆ. ಅವರ ಮೇಲಿನ ಪ್ರೀತಿಯಿಂದಲೇ ಸಾವಿರಾರು ಜನರೂ ರಜತ ಸಂಭ್ರಮದಲ್ಲಿ ಭಾಗವಹಿಸುವ ಮೂಲಕ ಕೇಶವ ಅಮೈ ಅವರಿಗೆ ಶಕ್ತಿ ತುಂಬಿದ್ದಾರೆ. ಎಸ್‌ಆರ್‌ಕೆಯ ಸುವರ್ಣ ಸಂಭ್ರಮದಲ್ಲೂ ಭಾಗಿಯಾಗುವ ಅವಕಾಶ ಸಿಗಲಿ ಎಂದರು.


ಏಣಿಯ ಮೂಲಕ ಜನರನ್ನು ಒಂದುಗೂಡಿಸಿದ್ದಾರೆ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಕೇಶವ ಅಮೈ ಅವರು ತನ್ನ ಉತ್ಪನ್ನ ಏಣಿಯ ಮೂಲಕ ಜಿಲ್ಲೆ, ಹೊರ ಜಿಲ್ಲೆಯ ಜನರನ್ನು ಇಲ್ಲಿ ಒಗ್ಗೂಡಿಸಿದ್ದಾರೆ. ಇದಕ್ಕೆ ಕೇಶವ ಅಮೈ ಅವರ ಸಾಧನೆಯ ಜೊತೆಗೆ ಸಮಾಜಮುಖಿ ಕಾರ್ಯವೂ ಆಗಿದೆ. ಯಾಂತ್ರಿಕತೆಯ ಮೂಲಕ ಕೃಷಿಕನ ಶ್ರಮ ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಅಪ್ರತಿಮ ಕೃಷಿ ಸಾಧಕ ಆಗಿದ್ದಾರೆ ಎಂದರು. ಕೃಷಿಕ ಯಾಂತ್ರಿಕ ಆಗಬಾರದು. ಆತನ ಕೃಷಿ ಯಾಂತ್ರಿಕತೆಯಿಂದ ಕೂಡಿರಬೇಕು. ಆಗ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಕೃಷಿಯ ಜೊತೆ ಉದ್ದಿಮೆಯನ್ನೂ ಕೃಷಿಕ ಮಾಡಬೇಕು. ಈ ರೀತಿಯಾದಲ್ಲಿ ಗ್ರಾಮದ ಅಭಿವೃದ್ಧಿಯಾಗಲಿದೆ. ಪ್ರತಿಭಾ ಪಲಾಯನ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ಅವರು ಹೊಸ ಯೋಜನೆ ಜಾರಿಗೆ ತಂದು ಕೈಗಾರಿಕೆ ಆರಂಭಕ್ಕೆ ಸಬ್ಸಿಡಿ ಘೋಷಿಸಿದ್ದಾರೆ. ಎಸ್‌ಆರ್‌ಕೆ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್. ಮುಂದಿನ 25ವರ್ಷಗಳಲ್ಲಿ ಈ ಸಂಸ್ಥೆ ಇನ್ನಷ್ಟೂ ಬೆಳೆಯಲಿ ಎಂದರು.


ಕಾಯಕ ಯೋಗಿ,ಧೀಮಂತ ಉದ್ಯಮಿ:
ಕೇಶವ ಅಮೈ ಅವರು ನೌಕರರನ್ನು, ಸಮಾಜವನ್ನು ಪ್ರೀತಿಸುವ ಕಾಯಕ ಯೋಗಿಯಾಗಿದ್ದಾರೆ. ಸಮಾಜದ ಅಂಧಕಾರವನ್ನು ಹೋಗಲಾಡಿಸುವುದನ್ನು ತೋರಿಸಿಕೊಟ್ಟ ಧೀಮಂತ ಉದ್ಯಮಿಯೂ ಆಗಿದ್ದಾರೆ. ಕಾರ್ಮಿಕ ದಿನಾಚರಣೆಯಂದು ಕಾರ್ಮಿಕರನ್ನು ಗೌರವಿಸುವ ಮೂಲಕ ಕಾರ್ಮಿಕ ಬೇರೆ ಅಲ್ಲ, ಮಾಲೀಕ ಬೇರೆ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕ್ಯಾಂಪ್ಕೋ, ಬಿಂದು, ಮಾಸ್ಟರ್ ಪ್ಲಾನರಿ, ಎಸ್‌ಆರ್‌ಕೆ ಪುತ್ತೂರಿನ ಬ್ರಾಂಡ್ ಆಗಿದೆ. ಈಗಿನ ಯುವಕ, ಯುವತಿಯರಿಗೆ ಕೇಶವ ಅಮೈ ಅವರು ರೋಲ್ ಮಾಡೆಲ್ ಆಗಿದ್ದಾರೆ ಎಂದು ಸಂಜೀವ ಮಠಂದೂರು ಹೇಳಿದರು.


ಅನುಕಂಪ ಬೇಡ, ಅವಕಾಶ ನೀಡಿ:
ಜೆಡಿಎಸ್ ರಾಜ್ಯ ವಕ್ತಾರರಾದ ಎಂ.ಬಿ.ಸದಾಶಿವ ಅವರು ಮಾತನಾಡಿ, ಕೇಶವ ಅಮೈ ಅವರು ಏಣಿ ನಿರ್ಮಿಸಿ ಜನರನ್ನು ಎತ್ತರಕ್ಕೆ ಏರಿಸುವ ಮೂಲಕ ತಾನೂ ಎತ್ತರಕ್ಕೆ ಏರಿದ್ದಾರೆ. ಇದು ದೇವರು ಅವರಿಗೆ ಕೊಟ್ಟ ವರವಾಗಿದೆ. ಏಣಿಯ ಮೂಲಕ ಸಫಲತೆ ಪಡೆದು ಕೃಷಿಕರಿಗೆ ಬದುಕು ವಿಸ್ತರಿಸಿಕೊಳ್ಳಲು ಹಾಗೂ ಆರ್ಥಿಕ ಲಾಭ ಪಡೆಯುವುದನ್ನೂ ಹೇಳಿಕೊಟ್ಟಿದ್ದಾರೆ. ಭಾರತದಲ್ಲಿರುವಷ್ಟು ದೃಷ್ಟಿ ಹೀನರು ಬೇರೆ ಯಾವುದೇ ದೇಶದಲ್ಲೂ ಇಲ್ಲ. ಕೇಶವ ಅಮೈ ಅವರು ಎಲ್ಲಾ ಸವಾಲು ಎದುರಿಸಿ ಸಾಧನೆ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ದೃಷ್ಟಿ ಹೀನರಿಗೆ ಅನುಕಂಪ ಬೇಡ, ಅವಕಾಶ ನೀಡಬೇಕು. ಇದರಿಂದ ಏಳಿಗೆ ಸಾಧ್ಯವಿದೆ. ಕೇಶವ ಅವರು ಉತ್ತಮ ತಂಡವನ್ನು ಕಟ್ಟಿ ಅವರಿಗೆ ಶಿಸ್ತು, ಸಂಯಮ ಕಳಿಸಿಕೊಟ್ಟಿರುವುದರಿಂದ ಅವರ ಉದ್ದಿಮೆಯೂ ಯಶಸ್ಸು ಪಡೆದುಕೊಂಡಿದೆ. ಪಿಡಬ್ಲ್ಯುಡಿ ಗುತ್ತಿಗೆದಾರರಾಗಿಯೂ ಗುಣಮಟ್ಟದ ಕಾಮಗಾರಿ ನಡೆಸಿದ್ದಾರೆ. ಅವರಲ್ಲಿ ಛಲವಿದೆ. ಅವರಿಗೆ ದೇವರು ಇನ್ನಷ್ಟೂ ಹೆಚ್ಚಿನ ಶಕ್ತಿ ನೀಡಲಿ. ನಾವೆಲ್ಲರೂ ಅವರಿಗೆ ಸಹಕಾರ ನೀಡುವ ಎಂದರು.


ಅದ್ಭುತ ಕಾರ್ಯಕ್ರಮ:
ಡಿಜಿಟಲ್ ಇಂಡಿಯಾ, ಸಬ್ ಕ ಸಾಥ್-ಸಬ್ ಕ ವಿಕಾಸ್‌ಮೇಕ್ ಇನ್ ಇಂಡಿಯಾಗೆ ಪೂರಕವಾಗಿ ಕೇಶವ ಅಮೈ ಅವರ ದೂರದೃಷ್ಟಿಯಲ್ಲಿ ಎಸ್‌ಆರ್‌ಕೆ ರಜತ ಸಂಭ್ರಮ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ. ಕಾರ್ಯಕ್ರಮಕ್ಕೆ ಬಂದವರ ಮನಸ್ಸು ತಣಿಸುವ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಕೆಲಸವನ್ನು ಕೇಶವ ಅಮೈ ಮಾಡಿದ್ದಾರೆ ಎಂದವರು ಹೇಳಿದರು.



ಎಸ್‌ಆರ್‌ಕೆ ಗ್ರಾಮೀಣ ಭಾರತದ ಸಂಸ್ಥೆ:
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಮಾತನಾಡಿ, ಕೋಟ ಶಿವರಾಮ ಕಾರಂತ, ಮೊಳ್ಳಹಳ್ಳಿ ಶಿವರಾಮ ಅವರ ಕರ್ಮಭೂಮಿಯಾಗಿರುವ ಸಾಂಸ್ಕೃತಿಕ, ಸಾಹಿತ್ಯವಾಗಿ ಗುರುತಿಸಿಕೊಂಡಿರುವ ಪುತ್ತೂರಿನಲ್ಲಿ ಪುತ್ತೂರಿನ ಬ್ರ್ಯಾಂಡ್ ಆಗಿರುವ ಎಸ್‌ಆರ್‌ಕೆ ಲ್ಯಾಡರ್ಸ್ ಹೊರ ರಾಜ್ಯಗಳಿಗೂ ವಿಸ್ತರಣೆಗೊಂಡು ಬೆಳೆದು ಬಂದಿದೆ. ಕೇಶವ ಅಮೈ ಅವರದ್ದು ದೂರದೃಷ್ಟಿ, ವಿಶಾಲಮನಸ್ಸು, ಹೃದಯವಂತಿಕೆಯ ವ್ಯಕ್ತಿತ್ವ, ಗ್ರಾಹಕ ಸ್ನೇಹಿಯಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅನ್ವೇಷಣೆ, ಕೌಶಲ್ಯದ ಮೂಲಕ ಹೊಸ ಹೊಸ ಉಪಕರಣಗಳ ಸೃಷ್ಟಿಸಿರುವ ಎಸ್‌ಆರ್‌ಕೆ ಗ್ರಾಮೀಣ ಭಾರತದ ಸಂಸ್ಥೆಯಾಗಿ ಬೆಳೆಯಲಿ ಎಂದರು.


ಹೊರ ದೇಶಗಳಿಗೂ ರಫ್ತು ಆಗಲಿ:
ಗೇರು ಅಭಿವೃದ್ಧಿ ಸಂಶೋಧನಾ ನಿಗಮದ ಹಿರಿಯ ವಿಜ್ಞಾನಿ ಡಾ| ಮೋಹನ ಅವರು ಮಾತನಾಡಿ, ಎಸ್‌ಆರ್‌ಕೆ ಅವರ ಸಂಶೋಧನಾ ವಿಭಾಗ ಬಲಿಷ್ಠವಾಗಿದೆ. ಎಸ್‌ಆರ್‌ಕೆ ಉತ್ಪನ್ನಗಳು ಕರ್ನಾಟಕ ಹಾಗೂ ಇತರ ರಾಜ್ಯಗಳಿಗೆ ವಿಸ್ತಾರಗೊಂಡಿದೆ. ಮುಂದೆ ದ.ಆಫ್ರಿಕಾ, ಅಮೇರಿಕ ಸೇರಿದಂತೆ ವಿದೇಶಗಳಿಗೂ ಎಸ್‌ಆರ್‌ಕೆ ಉತ್ಪನ್ನಗಳ ರಫ್ತು ಆಗಲಿ ಎಂದರು.


ಪ್ರಗತಿಯ ಮೆಟ್ಟಿಲು ಮೇಲೇರಲಿ:
ಕೊಯಿಲ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರಾದ ಡಾ.ಪ್ರಸನ್ನ ಹೆಬ್ಬಾರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶವಾದ ಕೊಯಿಲದಲ್ಲಿ ನಡೆಯುತ್ತಿರುವ ರಜತ ಸಂಭ್ರಮಕ್ಕೆ ಜನಸಾಗರವೇ ಸೇರಿದೆ. ಈ ಮೂಲಕ ಕೊಯಿಲದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಇದೊಂದು ಹೆಮ್ಮೆಯ ಕಾರ್ಯಕ್ರಮವೂ ಆಗಿದೆ. ಏಣಿಯಂತೆ ಎಸ್‌ಆರ್‌ಕೆ ಸಂಸ್ಥೆಯೂ ಪ್ರಗತಿಯ ಮೆಟ್ಟಿಲು ಮೇಲೆರುತ್ತಿದೆ. ಕೇಶವ ಅಮೈ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕೆಲಸಗಳಿಗೆ ಸ್ಪಂದಿಸುವ ಮೂಲಕ ಸಮಾಜಕ್ಕೆ ಬೆಳಕಾಗಿ ಆದರ್ಶಪ್ರಾಯರಾಗಿದ್ದಾರೆ. ಕೇಶವ ಅಮೈ ಅವರ ದೂರದೃಷ್ಟಿಯಿಂದ ಸಂಸ್ಥೆ ಇನ್ನಷ್ಟೂ ಅಭಿವೃದ್ಧಿಯಲ್ಲಿ ಸಾಗಲಿ ಎಂದರು.


ಸಮಾಜದ ಸೊತ್ತು, ರೋಲ್ ಮಾಡೆಲ್:
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರು ಮಾತನಾಡಿ, ಕೇಶವ ಅಮೈ ಅವರಲ್ಲಿ ಒಳ್ಳೆಯ ಮನಸ್ಸಿದೆ. ಅವರೊಬ್ಬ ಸಮಾಜದ ಸೊತ್ತು. ರೋಲ್ ಮಾಡೆಲ್ ಸಹ ಆಗಿದ್ದಾರೆ. ಅವರ ಉದ್ಯಮ ಹೆಮ್ಮರವಾಗಿ ಬೆಳೆದಿದೆ. ಮುಂದೆ ಇನ್ನಷ್ಟೂ ಬೆಳೆಯಲಿ ಎಂದರು.


ಕೊಡುಗೈ ದಾನಿ:
ಕುದ್ಮಾರು ಆದಿಶಕ್ತಿ ಲ್ಯಾಡರ‍್ಸ್‌ನ ಮಾಲಕ ಚಂದ್ರಶೇಖರ್ ಅವರು ಮಾತನಾಡಿ, ಕೇಶವ ಅಮೈ ಅವರು ಕೊಡುಗೈ ದಾನಿಯಾಗಿರುವುದರಿಂದಲೇ ಅವರ ಸಂಸ್ಥೆ ಬೆಳೆದಿದೆ. ಕೊಯಿಲ ಗ್ರಾಮದ ದೇವಸ್ಥಾನ ಹಾಗೂ ಇತರೇ ಸಂಸ್ಥೆಗಳಿಗೂ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ದೇವರ ಅನುಗ್ರಹವಿರಲಿ ಎಂದರು.


ಜಾತ್ರೆಯ ಸಂಭ್ರಮ:
ತುಳು ಚಲನಚಿತ್ರ ನಟ ಅರವಿಂದ ಬೋಳಾರ್ ಅವರು ಮಾತನಾಡಿ, ಎಸ್‌ಆರ್‌ಕೆ ಲ್ಯಾಡರ್ಸ್‌ನ ರಜತ ಸಂಭ್ರಮವು ಕೊಯಿಲದಲ್ಲಿ ಜಾತ್ರೆಯ ಸಂಭ್ರಮ ಉಂಟು ಮಾಡಿದೆ. ಕೇಶವ ಅಮೈ ಅವರಿಗೆ ಊರಿನ ಜನರ ಬೆಂಬಲ ಇದರಿಂದ ಗೊತ್ತಾಗುತ್ತದೆ. ವಿಶೇಷ ಚೇತನರಿಗೆ ಅನುಕಂಪ ಬೇಡ. ಅವರಿಗೆ ಸಹಕಾರ ನೀಡಬೇಕು. ಕೇಶವ ಅಮೈ ಅವರು ತನ್ನ ಉದ್ದಿಮೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ. ಅವರ ಜೊತೆ ದೇವರು ಇದ್ದಾರೆ. ಅವರ ಉದ್ದಿಮೆ ದೊಡ್ಡದಾಗಿ ಬೆಳಗಲಿ. ಮತ್ತಷ್ಟೂ ಮಂದಿಗೆ ಉದ್ಯೋಗ ಸಿಗಲಿ ಎಂದು ಹಾರೈಸಿದರು. ಅರವಿಂದ ಬೋಳಾರ್ ಅವರು, ಎಕ್ಕಸಕ್ಕ ಹಾಗೂ ಗಿರ್‌ಗಿಟ್ ಚಿತ್ರದ ಡೈಲಾಗ್ ಹೇಳಿ ಮನರಂಜಿಸಿದರು.


ಕೊರತೆಗಳೇ ಸಾಧನೆಗೆ ಸ್ಪೂರ್ತಿ:
ಸನ್ಮಾನ ಸ್ವೀಕರಿಸಿದ ಟ್ಯಾಕ್ಸ್ ಕನ್ಸಲ್ಟೆಂಟ್ ರಾಮಕೃಷ್ಣ ಭಟ್ ಕುರುಂಬುಡೇಲುರವರು ಮಾತನಾಡಿ, ಕೆಲವೊಮ್ಮೆ ನಮ್ಮಲ್ಲಿರುವ ಕೊರತೆಗಳೇ ನಮ್ಮ ಸಾಧನೆಗೆ ಸ್ಪೂರ್ತಿಯಾಗುತ್ತದೆ. ಇದಕ್ಕೆ ಕೇಶವ ಅಮೈ ಅವರೇ ಮಾದರಿಯಾಗಿದ್ದಾರೆ. ಅವರಿಂದ ಕಲಿಯುವಂಥದ್ದು ಬಹಳಷ್ಟಿದೆ. 25 ವರ್ಷಗಳಲ್ಲಿ ಅವರು ನಡೆದು ಬಂದ ಹಾದಿಯೂ ಕಠಿಣವಾಗಿತ್ತು. ಜೀವನದಲ್ಲಿ ವೈಫಲ್ಯ ಅನುಭವಿಸಿ ಇನ್ನು ನನ್ನಿಂದ ಏನೂ ಸಾಧ್ಯವಿಲ್ಲ ಎನ್ನುವವರಿಗೆ ಕೇಶವ ಅಮೈ ಅವರು ಪ್ರೇರಣೆಯಾಗಿದ್ದಾರೆ ಎಂದರು.


ಕೇಶವ ಅಮೈ ಅವರ ತಾಯಿ ರಾಮಕ್ಕ ಟಿ., ಪತ್ನಿ ಮಾಲತಿ ಕೇಶವ, ಪುತ್ರ ಗಗನ್ ಕೇಶವ, ಮಲ್ನಾಡ್ ಸರ್ವಿಸಸ್ ಕೋ ಆಪರೇಟಿವ್ ಸೊಸೈಟಿಯ ಜನರಲ್ ಮೇನೇಜರ್ ವಿನಾಯಕ ಪರಮೇಶ್ವರ ಹೆಗ್ಡೆ, ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪ್ರೊ.ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಗೋಪಾಲಕೃಷ್ಣ ವೈದ್ಯ, ಕಾರ್ಯಕ್ರಮದ ಸಂಯೋಜಕರಾದ ಪ್ರಮೋದ್ ಕುಮಾರ್ ಕೆ.ಕೆ., ಅಬ್ರಹಾಂ ಎಸ್.ಎ., ಯದುಶ್ರೀ ಆನೆಗುಂಡಿ, ಸುಽಶ್ ಪಟ್ಟೆ, ಸತೀಶ್ ಎರ್ಕ, ಅಮಿತಾ ಶೆಟ್ಟಿ, ಶ್ರೀರಾಮ್, ಸೂರ್ಯಪ್ರಸಾದ್ ರಾವ್, ಸುರೇಶ್ ನೆಟ್ಟಣ, ಕುಸುಮಾವತಿ ಶೆಟ್ಟಿ, ದಯಾಕುಮಾರಿ ಅಮೈ, ರಾಮಣ್ಣ ಗೌಡ ಟಿ., ಸುಮಾ ಟಿ.ಆರ್., ಡೊಂಬಯ್ಯ ಗೌಡ ಮಾಮೇಶ್ವರ, ಲೋಕನಾಥ ರೈ ರಾಮಕುಂಜ, ಲಕ್ಷ್ಮಣ ಡಿ.ಪಿ., ರಮೇಶ್ ಕುದ್ಕುಳಿ, ಮಹಮ್ಮದ್ ಸಾದಿಕ್ ಕುಂಬ್ರ, ಹಿರಿಯಣ್ಣ ಗೌಡ ಬಿಳಿನೆಲೆ, ಚಂದ್ರಶೇಖರ ಸಣ್ಣಾರ, ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಲೋಕೇಶ್ ಬನ್ನೂರು, ಕೆ.ಜ್ಞಾನೇಶ ವಿಶ್ವಕರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅತಿಥಿಗಳಿಗೆ ಎಸ್‌ಆರ್‌ಕೆ ಲ್ಯಾಡರ್ಸ್‌ನ ಸಿಬ್ಬಂದಿಗಳು ಹೂ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಎಸ್‌ಆರ್‌ಕೆ ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರ ಪತ್ನಿ ಮಾಲತಿ ಕೇಶವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಜತ ಸಂಭ್ರಮದ ಸಲುವಾಗಿ ಕೈಗೊಂಡಿದ್ದ ಸರಣಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸತೀಶ್ ಭಟ್ ಬಿಳಿನೆಲೆ ಅವರು ಎಸ್‌ಆರ್‌ಕೆ ಲ್ಯಾಡರ್ಸ್‌ನ ಏಳುಬೀಳುಗಳ ಬಗ್ಗೆ ಅವಲೋಕನ ಮಾಡಿದರು. ಕಾರ್ಯಕ್ರಮದ ಸಂಯೋಜಕರಾದ ಶಿವರಾಮ ಏನೆಕಲ್ಲು ಸ್ವಾಗತಿಸಿದರು. ಸಿಬ್ಬಂದಿ ದಿನೇಶ್ ಎಂ.ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಮತ್ತು ಶ್ರಾವ್ಯ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ್ ಮರ್ಕಂಜ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮ್‌ಕಿರಣ್ ಪೆಲತ್ತಿಂಜ, ರಿಷಿಕಾ ಪೆಲತ್ತಿಂಜ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here