ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್‌ಶಿಪ್ ಅಲ್ಟಿಮೇಟ್ ಟ್ರೋಫಿ -2024

0

ಪುತ್ತೂರು: ಕ್ರೀಡೆ ಎನ್ನುವುದು ನಮ್ಮ ಸದೃಢ ಆರೋಗ್ಯಕ್ಕೆ ಬಹಳ ಸಹಕಾರಿ. ದೇಹಕ್ಕೆ ಸಮರ್ಪಕವಾದ ವ್ಯಾಯಾಮ ಸಿಕ್ಕಾಗ ನಮ್ಮ ಮಾನಸಿಕ ಆರೋಗ್ಯವು ಕೂಡಾ ವೃದ್ಧಿಯಾಗುತ್ತದೆ. ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರಿಂದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ನಾನು ಒಬ್ಬ ಖೋಖೋ ಪಟುವಾಗಿ ದಕ್ಷಿಣ ಕನ್ನಡ ಜಿಲ್ಲೆಯವರಿಗಾಗಿ ಇಂತಹ ಪಂದ್ಯಾಟವನ್ನು ಆಯೋಜನೆ ಮಾಡಿದಕ್ಕಾಗಿ ಹೆಮ್ಮೆಪಡುತ್ತೇನೆ ಎಂದು ಉಪ್ಪಿನಂಗಡಿಯ ಎಸ್‌ಬಿಐ ಬ್ಯಾಂಕ್ ಇದರ ನಿವೃತ್ತ ಉದ್ಯೋಗಿ ಜಿ. ಕೆ ಪೂವಪ್ಪ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಮತ್ತು ವಿವೇಕಾನಂದ ಕಾಲೇಜು (ಸ್ವಾಯತ್ತ), ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಮತ್ತು ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ದ.ಕ. ಜಿಲ್ಲಾ ಮಟ್ಟದ ಪುರುಷರ 8 ತಂಡಗಳ ಲೀಗ್ ಮಾದರಿಯ ಖೋ-ಖೋ ಚಾಂಪಿಯನ್‌ಶಿಪ್ ಸೀಸನ್ 2-2024ರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು ಇದರ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್‌ರವರು ಮಾತನಾಡಿ, ಇಂತಹ ಪಂದ್ಯಾಟಗಳು ಒಳ್ಳೆಯ ಕ್ರೀಡಾಪಟುಗಳನ್ನು ಬೆಳೆಸಲು ದಾರಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದೊಂದು ಒಳ್ಳೆಯ ವೇದಿಕೆ. ಆದ್ದರಿಂದ ಪಂದ್ಯಾಟ ಆಯೋಜನೆ ಮಾಡಿದ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಇವರ ಕಾರ್ಯ ಶ್ಲಾಘನೀಯ ಎಂದರು.ವಿವೇಕಾನಂದ ಸ್ವಾಯತ್ತ ಕಾಲೇಜಿನ ದೈಹಿಕ ನಿರ್ದೇಶಕ ರವಿಶಂಕರ್ ವಿ.ಎಸ್.ರವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ದೈವ ನರ್ತಕರಾದ ಓಬಯ್ಯ ಪರವಾನ್, ವಿವೇಕಾನಂದ ಪದವಿಪೂರ್ವ ಕಾಲೇಜು ಪುತ್ತೂರು ಇದರ ದೈಹಿಕ ಶಿಕ್ಷಣ ನಿರ್ದೇಶಕಿ ಜ್ಯೋತಿ ಕುಮಾರಿ ಪಿ.ಸಿ, ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಕುಮಾರ್ ಬಿ ಉಪಸ್ಥಿತರಿದ್ದರು.


ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟಿನ ದೈಹಿಕ ಶಿಕ್ಷಕ ಕೀರ್ತನ್ ಸ್ವಾಗತಿಸಿ, ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರಿನ ಕಾರ್ಯದರ್ಶಿ ಕಾರ್ತಿಕ್ ವಂದಿಸಿ, ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ದೀಪ್ತಿ ಅಡ್ಡಂತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ದೆಹಲಿಯ ಸಿಬಿಎಸ್‌ಸಿ ಇಂಟರ್ ನ್ಯಾಷನಲ್ ಸ್ಕೂಲ್‌ನ ದೈಹಿಕ ನಿರ್ದೇಶಕ, ರಾಷ್ಟ್ರ ಮಟ್ಟದ ಖೋ ಖೋ ಆಟಗಾರ ಶಿವರಾಮರವರು ವಿಜೇತ ತಂಡ ವಿಸಿ ಕ್ಯಾಪಿಟಲ್‌ಗೆ ಟ್ರೋಫಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here