




ಪುತ್ತೂರು:ಐದು ವರ್ಷಗಳ ಹಿಂದೆ ರೈತರೇ ಸೇರಿಕೊಂಡು ಗ್ರಾಮೀಣ ಪ್ರದೇಶವಾದ ಮುಂಡೂರಿನಲ್ಲಿ ಸ್ಥಾಪಿಸಿರುವ ‘ಗ್ರಾಮ ಜನ್ಯ’ ಹೆಸರಿನ ರೈತ ಉತ್ಪಾದಕ ಸಂಸ್ಥೆಯ ಜೇನುತುಪ್ಪ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ನ.30ರಂದು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಶ್ಲಾಸುವ ಮೂಲಕ ಸಂಸ್ಥೆಯ ಹೆಸರು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.



ದ.ಕ. ಜಿಲ್ಲೆಯ ಪರಿಸರವು ಉತ್ತಮ ಗುಣಮಟ್ಟದ ಜೇನು ಉತ್ಪಾದನೆಗೆ ಹೇಳಿ ಮಾಡಿಸಿದಂತಿದೆ.ಈ ಸಾಮರ್ಥ್ಯವನ್ನು ಗುರುತಿಸಿ ದ.ಕ.ಜಿಲ್ಲೆಯ ಪುತ್ತೂರುನಲ್ಲಿ ರೈತರೇ ಸೇರಿಕೊಂಡು ಮಾಡಿರುವ ಗ್ರಾಮಜನ್ಯ ಎಂಬ ಸಂಸ್ಥೆಯು ಜೇನನ್ನು ಬ್ರಾಂಡ್ ಮಾಡಿ ನಗರ ಮಾರುಕಟ್ಟೆಗೆ ತಲುಪಿಸುತ್ತಿದ್ದು,ಇದರಿಂದ ರೈತರಿಗೆ ಭಾರೀ ಲಾಭವಾಗಿದೆ ಎಂದು ಮೋದಿ ತಿಳಿಸಿದರು.





ಆಧುನಿಕ ಸಂಸ್ಕರಣಾ ಘಟಕ, ಬಾಟಲ್, ಸಂಗ್ರಹಣೆ, ಡಿಜಿಟಲ್ ಟ್ರ್ಯಾಕಿಂಗ್ ಸೌಲಭ್ಯಗಳ ಮೂಲಕ ಗ್ರಾಮಾಂತರದಿಂದಲೇ ಬ್ರಾಂಡ್ ಜೇನುತುಪ್ಪ ನಗರ ಮಾರುಕಟ್ಟೆ ತಲುಪುತ್ತಿರುವುದನ್ನು ವಿಶೇಷವಾಗಿ ಉಲ್ಲೇಖಿಸಿದ ಪ್ರಧಾನಿಯವರು, ಈ ಯೋಜನೆಯಿಂದ ಎರಡು ಸಾವಿರಕ್ಕೂ ಹೆಚ್ಚು ರೈತರು ನೇರವಾಗಿ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.ಈ ಮೂಲಕ ಗ್ರಾಮಜನ್ಯ ಹೆಸರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತಾಗಿದೆ.
ಕರ್ನಾಟಕದ ತುಮಕೂರು ಜಿಲ್ಲೆಯ ಶಿವಗಂಗಾ ಕಲಾಂಜಿಯಾ ರೈತ ಸಂಘಟನೆಯ ಕಾರ್ಯವನ್ನೂ ಪ್ರಧಾನಿ ಪ್ರಶಂಸಿಸಿದರು.ಸದಸ್ಯರಿಗೆ ಎರಡು ಜೇನುಪೆಟ್ಟಿಗೆಗಳಿಂದ ಆರಂಭವಾದ ಈ ಉಪಕ್ರಮ ಇಂದು ಒಟ್ಟಾಗಿ ಜೇನು ಸಂಗ್ರಹ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಮಾಡುವಲ್ಲಿ ಯಶಸ್ವಿಯಾಗಿದೆ.ಈ ಕಾರ್ಯ ರೈತರಿಗೆ ಲಕ್ಷಾಂತರ ಆದಾಯ ತಂದುಕೊಡುತ್ತಿದೆ ಎಂದು ಉಲ್ಲೇಖಿಸಿದರು.
ದೇಶದ ಜೇನುತುಪ್ಪ ಉತ್ಪಾದನೆಯ ಏರಿಕೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ‘ಕಳೆದ ವರ್ಷಗಳಲ್ಲಿ 76 ಸಾವಿರ ಮೆಟ್ರಿಕ್ ಟನ್ ಇದ್ದ ಉತ್ಪಾದನೆ ಇಂದು 15 ಲಕ್ಷ ಮೆಟ್ರಿಕ್ ಟನ್‌ಗೆ ಏರಿದೆ.ರಫ್ತು ಕೂಡಾ ಮೂರು ಪಟ್ಟು ಹೆಚ್ಚಾಗಿದೆ.ಹನಿ ಮಿಷನ್ ಯೋಜನೆಯಡಿ ಖಾದಿ ಗ್ರಾಮೋದ್ಯೋಗವು 2.25 ಲಕ್ಷಕ್ಕೂ ಹೆಚ್ಚು ಜೇನುಪೆಟ್ಟಿಗೆಗಳನ್ನು ವಿತರಿಸಿರುವುದು ಸಾವಿರಾರು ಕುಟುಂಬಗಳಿಗೆ ಹೊಸ ಉದ್ಯೋಗ ಸೃಷ್ಟಿಸಿದೆ’ ಎಂದು ಹೇಳಿದರು.
ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿ:
ಪ್ರಾರಂಭದಲ್ಲಿ 10 ಮಂದಿ ರೈತರೇ ಸೇರಿಕೊಂಡು ರಚಿಸಿದ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ಈಗ ಬರೋಬ್ಬರಿ 950 ಪಾಲುದಾರರನ್ನು ಹೊಂದಿದೆ.ಜೇನುತುಪ್ಪ ಸಂಸ್ಕರಣಾ ಘಟಕ ಆರಂಭಿಸಿ ಜೇನು ಕೃಷಿಗೆ ಹೊಸ ದಿಕ್ಕು ತೋರಿಸಲು ಹೊರಟಿದೆ.2020ರಲ್ಲಿ ಮುಂಡೂರು ಸಮೀಪದ ಹಿಂದಾರ್ ಎಂಬಲ್ಲಿ ಗ್ರಾಮ ಜನ್ಯ ಸಂಸ್ಥೆಯು ಜೇನು ಸಂಸ್ಕರಣಾ ಘಟಕ ಸ್ಥಾಪಿಸಿದೆ.ಇಲ್ಲಿ ಪ್ರತೀ ದಿನ 10 ಟನ್ ಜೇನು ತುಪ್ಪ ಸಂಸ್ಕರಿಸುವ ವ್ಯವಸ್ಥೆ ಇದೆ.ಸಂಸ್ಕರಣಾ ಲ್ಯಾಬ್ ಮತ್ತು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇದೆ.ರೈತರಿಂದ ಜೇನು ತುಪ್ಪ ಖರೀದಿಸಿ ಅದನ್ನು ಸಂಸ್ಕರಿಸಿ ಗ್ರಾಮ ಜನ್ಯ ಬ್ರಾಂಡ್‌ನಲ್ಲಿ ಮಾರುಕಟ್ಟೆ ಮಾಡಲಾಗುತ್ತಿದೆ.ಇದರಿಂದ ಜೇನು ಕೃಷಿಗೆ ಉತ್ತೇಜನ ಸಿಗುವುದಲ್ಲದೆ ಕೃಷಿಕರಿಗೆ ಉತ್ತಮ ಬೆಲೆಯೂ ಸಿಗುತ್ತದೆ.ಪ್ರಸ್ತುತ ಪ್ರಾಯೋಗಿಕ ಕೆಲಸ ಸಂಸ್ಥೆಯಲ್ಲಿ ನಡೆಯುತ್ತಿದ್ದು ರೈತರು ತಂದ ಜೇನನ್ನು ಸಂಸ್ಕರಿಸಿ ಅವರಿಗೇ ಮರಳಿಸುವ ಕಾರ್ಯ ಪ್ರಾಯೋಗಿಕ ಹಂತದಲ್ಲಿ ನಡೆಯುತ್ತಿದೆ.ಹಿರಿಯ ಕೃಷಿಕ ಮೂಲಚಂದ್ರ ಅವರು ಗ್ರಾಮಜನ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.ರಾಮಪ್ರತೀಕ್ ಕರಿಯಾಲ, ನಿರಂಜನ್ ಪೋಳ್ಯ, ಶ್ರೀಹರ್ಷ ಎಕ್ಕಡ್ಕ, ಶ್ರೀನಂದನ್ ಎಣ್ಮೂರು ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.










