ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತುಳುನಾಡಿನ ವಿಶಿಷ್ಟ ಆಚರಣೆಯಾದ “ಪತ್ತನಾಜೆದ-ಪೊಲಬು” ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಮುಖ್ಯಗುರು, ಪ್ರಗತಿಪರ ಕೃಷಿಕ ಗಿರಿಶಂಕರ ಸುಲಾಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ತನಾಜೆ ತುಳುವರ ವಿಶೇಷ ಆಚರಣೆ, ಪತ್ತನಾಜೆಯ ಮಹತ್ವ, ಜನರ ಜೀವನ ವಿಧಾನ ಹಾಗೂ ಮುಂದಾಲೋಚನೆ, ಕೃಷಿ ಚಟುವಟಿಕೆಗಳ ಬಗ್ಗೆ ತಿಳಿಸಿ, ತನ್ನ ಬಾಲ್ಯ ಜೀವನದ ಅನುಭವವನ್ನು ಮೆಲುಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಯವರು ಮಾತನಾಡಿ, ತುಳುನಾಡಿನ ವಿಶಿಷ್ಟ ಆಚರಣೆ, ಸಂಪ್ರದಾಯಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಿ, ಉಳಿಸಿ-ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು ಎಂದು ಹೇಳಿದರು. ಸಹಶಿಕ್ಷಕಿ ಸರಿತಾ ಸ್ವಾಗತಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್ ಟಿ, ವ್ಯವಸ್ಥಾಪಕ ರಮೇಶ್ ರೈ ಆರ್ ಬಿ, ಸಿ.ಬಿ.ಎಸ್.ಇ. ಪ್ರಾಂಶುಪಾಲ ಪ್ರವಿದ್ ಪಿ. ಉಪಸ್ಥಿತರಿದ್ದರು. ಸಹಶಿಕ್ಷಕಿ ಪವಿತ್ರಾ ಬಿ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಸಂಚಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದರು.