ಪುತ್ತೂರು:2023ರ ನ.6ರಂದು ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಜಾಮೀನಿನಲ್ಲಿ ಬಿಡುಗಡೆ ಕೋರಿ ಸಲ್ಲಿಸಿದ್ದ ಇಬ್ಬರ ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮತ್ತು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.ಪ್ರಕರಣಕ್ಕೆ ಸಂಬಂಧಿಸಿ ಬಂಧಿತ 3 ಮತ್ತು 4ನೇ ಆರೋಪಿಗಳಾದ ಮಂಜುನಾಥ್ ಅಲಿಯಾಸ್ ಹರಿ ಹಾಗೂ ಕೇಶವ ಪಡೀಲ್ ಅವರು ಜಾಮೀನಿನಲ್ಲಿ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು.
ಜನಪ್ರಿಯ ಹುಲಿವೇಷ ಕುಣಿತ ತಂಡವಾಗಿ ಗುರುತಿಸಿಕೊಂಡಿದ್ದ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ(24ವ.)ಅವರು ಇಬ್ಬರು ಸ್ನೇಹಿತರು ಸೇರಿದಂತೆ ಪರಿಚಿತರಿಂದಲೇ ದಾರುಣವಾಗಿ ಕೊಲೆಯಾಗಿದ್ದರು.ಬೈಕ್ ಅಪಘಾತದಿಂದ ಗಾಯಗೊಂಡಿದ್ದ ಪಾದಚಾರಿ ಕಾಲೇಜ್ ವಿದ್ಯಾರ್ಥಿಯೊಬ್ಬರಿಗೆ 2 ಸಾವಿರ ರೂ. ಪರಿಹಾರ ನೀಡುವ ವಿಚಾರದಲ್ಲಿ ದೂರವಾಣಿ ಸಂಭಾಷಣೆ ವೇಳೆ ಆರಂಭಗೊಂಡ ವಾಗ್ವಾದ ಕೊಲೆಯೊಂದಿಗೆ ಅಂತ್ಯ ಕಂಡಿತ್ತು.ಈ ಹಿಂದೆ ಪುತ್ತೂರುನಲ್ಲಿ ಸಿಪಿಸಿ ಪೆಟ್ರೋಲ್ ಪಂಪ್‌ನಲ್ಲಿ ಸಿಬ್ಬಂದಿಯಾಗಿದ್ದ ಕಬಕ ಗ್ರಾಮದ ಕಲ್ಲೇಗ ಶೇವಿರೆ ನಿವಾಸಿ, ಪ್ರಸ್ತುತ ಕಲ್ಲೇಗ ದೈವಸ್ಥಾನದ ಚಾಕ್ರಿಯವರಾಗಿರುವ ಚಂದ್ರಶೇಖರ್ ಗೌಡ ಅವರ ಪುತ್ರ ಅಕ್ಷಯ್ ಕಲ್ಲೇಗ ಅವರನ್ನು ಕಳೆದ ನ.6ರ ರಾತ್ರಿ 11.35ರ ಸುಮಾರಿಗೆ ನೆಹರುನಗರ ಜಂಕ್ಷನ್‌ನಲ್ಲಿ ಮಾರಕಾಸಗಳಿಂದ ಕಡಿದು ಹತ್ಯೆ ಮಾಡಲಾಗಿತ್ತು.ಪಡೀಲು ನಿವಾಸಿ ಮನೀಶ್, ಖಾಸಗಿ ಬಸ್ ಚಾಲಕನಾಗಿದ್ದ ಬನ್ನೂರು ಕೃಷ್ಣನಗರ ನಿವಾಸಿ ಚೇತನ್, ಬನ್ನೂರು ನಿವಾಸಿ ಮಂಜುನಾಥ್ ಯಾನೆ ಹರಿ ಮತ್ತು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷರಾಗಿದ್ದ ಕೇಶವ ಪಡೀಲ್ ಎಂಬವರು ಆರೋಪಿಗಳಾಗಿದ್ದು ನಾಲ್ವರನ್ನೂ ಪೊಲೀಸರು ಬಂಧಿಸಿದ್ದರು.
ಅಕ್ಷಯ್ ಅವರ ಕೊಲೆಗೆ ಸಂಬಂಧಿಸಿದಂತೆ ಅವರ ಸ್ನೇಹಿತನಾಗಿರುವ ಚಿಕ್ಕಮೂಡ್ನೂರು ಗ್ರಾಮದ ನಿವಾಸಿ ವಿಖ್ಯಾತ್ ಬಿ.ಎಂಬವರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನ.6ರಂದು ರಾತ್ರಿ ಅಕ್ಷಯ ಕಲ್ಲೇಗ ಹಾಗೂ ಪ್ರಕರಣದ ಆರೋಪಿಗಳಾದ ಮನೀಶ್, ಚೇತನ್ ಎಂಬವರೊಂದಿಗೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿಯಾಗಿತ್ತು.ಅದು ಮುಂದುವರಿದಂತೆ, ಸ್ವಲ್ಪ ಸಮಯದ ಬಳಿಕ ನಾನು ಮತ್ತು ಗೆಳೆಯ ಅಕ್ಷಯ್ ಕಲ್ಲೇಗ ನೆಹರೂ ನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡಿದ್ದಾಗ, ಕಾರಿನಲ್ಲಿ ಬಂದ ಆರೋಪಿಗಳಾದ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬವರು, ಅಕ್ಷಯ್ ಕಲ್ಲೇಗರೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದ್ದ ಮಾತಿನ ಚಕಮಕಿಯ ವಿಚಾರದಲ್ಲಿ ತಕರಾರು ತೆಗೆದು, ಅವಾಚ್ಯವಾಗಿ ಬೈದು, ತಾವುಗಳು ತಂದಿದ್ದ ತಲವಾರಿನಿಂದ ಹಲ್ಲೆ ನಡೆಸಿದ್ದರು.ಈ ವೇಳೆ ನಾನು ಓಡಿ ತಪ್ಪಿಸಿಕೊಂಡಿದ್ದು,ಅಕ್ಷಯ ಕಲ್ಲೇಗ ಅವರನ್ನು ಆರೋಪಿಗಳಾದ ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ತಲವಾರಿನಿಂದ ಕಡಿದು ಕೊಲೆ ಮಾಡಿ ಹೋಗಿರುತ್ತಾರೆ ಎಂದು ವಿಖ್ಯಾತ್ ಅವರು ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಲಯ ನಾಲ್ವರು ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
ಇಬ್ಬರಿಂದ ಜಾಮೀನು ಅರ್ಜಿ:
ಬಂಧಿತ ಆರೋಪಿಗಳ ಪೈಕಿ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ ಅವರು ಜಾಮೀನಿನ ಮೇಲೆ ಬಿಡುಗಡೆ ಕೋರಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ದೂರುದಾರ ವಿಖ್ಯಾತ್ ಪರ ಸರಕಾರಿ ಅಭಿಯೋಜಕರಾದ ಜಯಂತಿ ಸತೀಶ್ ಭಟ್ ಅವರು ವಾದಿಸಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಽಶರು, ಆರೋಪಿಗಳಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಏ.27ರಂದು ಆದೇಶಿಸಿದ್ದರು.
ಹೈಕೋರ್ಟ್‌ಗೆ ಮೇಲ್ಮನವಿ:
ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಆರೋಪಿಗಳು ರಾಜ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.ದೂರುದಾರ ವಿಖ್ಯಾತ್ ಪರವಾಗಿ ಹೈಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದ ವಕೀಲ ರಾಜಶೇಖರ್ ಇಳಿಯಾರ್ ಅವರು,ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಘಟನೆಯ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆಗೆ ಮೊದಲೇ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಂತೆ ನ್ಯಾಯಪೀಠದ ಗಮನ ಸೆಳೆದಿದ್ದರು.ಅವರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಮೇ .28ರಂದು ಆದೇಶಿಸಿದೆ.