ಸವಣೂರು : ಸ್ಕೂಟರ್‌ಗೆ ಅಡ್ಡಗಟ್ಟಿ ಬಾಲ್ ಕತ್ತಿಯಿಂದ ಹಲ್ಲೆ -ದೂರು, ಪ್ರತಿ ದೂರು ದಾಖಲು

0

ಸವಣೂರು : ಜಮೀನಿನ ವಿಚಾರದ ತಗಾದೆಯಿಂದ ಸ್ಕೂಟರ್‌ಗೆ ಅಡ್ಡಗಟ್ಟಿ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿದ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ,ಪ್ರತಿ ದೂರು ದಾಖಲಾಗಿದೆ.


ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಗುಣಪಾಲ ಗೌಡ (57ವ.) ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಗುಣಪಾಲ ಗೌಡ ಮತ್ತು ಪ್ರಸಾದ್ ಇಡ್ಯಾಡಿ ಎಂಬವರ ಮಧ್ಯೆ ಕಳೆದ 4 ವರ್ಷಗಳಿಂದ ಜಮೀನಿನ ವಿಚಾರದಲ್ಲಿ ತಕರಾರಿದ್ದು,ಮೇ.27ರಂದು ರಾತ್ರಿ ಗುಣಪಾಲ ಗೌಡ ಅವರು ಸವಣೂರಿನಿಂದ ತನ್ನ ಮನೆಯ ಕಡೆಗೆ ಸ್ಕೂಟರಿನಲ್ಲಿ ಹೋಗುತ್ತಾ ತನ್ನ ಮನೆಯ ಬಳಿ ತಲುಪಿದಾಗ, ಅವರ ಮುಂದಿನಿಂದ ಆಟೋ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ, ಪ್ರಸಾದ್ ಇಡ್ಯಾಡಿ, ಆಟೋರಿಕ್ಷಾವನ್ನು ಸ್ಕೂಟರಿಗೆ ಅಡ್ಡ ಇಟ್ಟು ಅವಾಚ್ಯವಾಗಿ ಬೈದು, ಕೊಲ್ಲುವುದಾಗಿ ಬೆದರಿಸಿ ಆಟೋರಿಕ್ಷಾದಲ್ಲಿದ್ದ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಗಾಯಗೊಂಡು ನೆಲಕ್ಕೆ ಬಿದ್ದ ತಾನು ಜೋರಾಗಿ ಬೊಬ್ಬೆ ಹೊಡೆದಾಗ ಅಲ್ಲಿಗೆ ಮಕ್ಕಳಾದ ಮೋಕ್ಷಿತ್, ಭವಿತ್, ರಂಜಿತ್ ಮತ್ತು ನೆರೆಮನೆಯ ಮನೋಹರ ರವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆರೋಪಿ ಪ್ರಸಾದ್ ಇಡ್ಯಾಡಿ ತನ್ನ ಕೈಯಲ್ಲಿದ್ದ ಬಾಲ್ ಕತ್ತಿಯೊಂದಿಗೆ ಆಟೋರಿಕ್ಷಾದಲ್ಲಿ ಆತನ ಮನೆಯ ಕಡೆಗೆ ಹೋಗಿರುತ್ತಾರೆ. ಸ್ವಲ್ಪ ಸಮಯದ ಬಳಿಕ ಆರೋಪಿ ಪ್ರಸಾದ್ ಇಡ್ಯಾಡಿ, ಬಾಬು ಗೌಡ ಮತ್ತು ಬಾಲಕೃಷ್ಣ ಎಂಬವರು ಸದ್ರಿ ಸ್ಥಳಕ್ಕೆ ವಾಪಾಸು ಬಂದಿದ್ದು, ಬಾಲಕೃಷ್ಣ ಎಂಬವರು ನನ್ನ ಮಗ ಭವಿತ್‌ನಿಗೆ ಜೀವಬೆದರಿಕೆ ಒಡ್ಡಿ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿದ್ದು,ಹಲ್ಲೆಯನ್ನು ತಡೆಯಲು ಹೋದ ರಂಜಿತ್ ಮತ್ತು ಮನೋಹರ ನಿಗೂ ಬಾಲ್ ಕತ್ತಿಯು ತಾಗಿರುತ್ತದೆ ಎಂಬುದಾಗಿ ಗುಣಪಾಲ ಗೌಡರು ನೀಡಿದ ದೂರಿನ ಮೇರೆಗೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ (ಅ.ಕ್ರ:55/2024,) ಕಲಂ : 341,504,506,324,307, ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.


ಪ್ರತಿದೂರು :
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಸಾದ್ ಇಡ್ಯಾಡಿ (32ವ.) ಪ್ರತಿ ದೂರು ನೀಡಿ, ಆರೋಪಿಗಳಾದ ಗುಣಪಾಲ 2) ಮೋಕ್ಷಿತ್, 3) ಚೇತನ್ 4) ಭವಿತ್ 5) ರಂಜಿತ್ 6) ಮನೋಹರ ಎಂಬವರುಗಳು ಸೇರಿ ತನಗೆ ಹಾಗೂ ತನ್ನ ಸಹೋದರನಾದ ಬಾಲಕೃಷ್ಣರವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ, (ಅ.ಕ್ರ. 56/2024), ಕಲಂ 341, 324ಜೊತೆಗೆ 34 IPC ರಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here