@ ಸಿಶೇ ಕಜೆಮಾರ್
ಪುತ್ತೂರು: ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕುಂಬ್ರ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಈಗಾಗಲೇ ವಾಹನ ಸಂಚಾರಕ್ಕೆ ತೆರೆದುಕೊಂಡಿದೆ. ಬಂಟ್ವಾಳ -ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಪುತ್ತೂರಿನಿಂದ 8 ಕಿ.ಮೀ ದೂರದ ಕುಂಬ್ರದಲ್ಲಿ ಕುಂಬ್ರ ಮಗಿರೆ ಹೊಳೆಗೆ ನೂತನವಾಗಿ ಸೇತುವೆ ನಿರ್ಮಾಣ ಮಾಡಲಾಗಿದ್ದು ಅಲ್ಲದೆ ತಿರುವು ಮುರುವು ರಸ್ತೆಯನ್ನು ತೆರವು ಮಾಡಲಾಗಿದೆ. ಬರೋಬ್ಬರಿ ಒಂದೂವರೆ ವರ್ಷಗಳ ಹಿಂದೆ ಈ ಸೇತುವೆ ಕಾಮಗಾರಿ ಆರಂಭಗೊಂಡಿದ್ದು ಇದೀಗ ಕೊನೆ ಹಂತಕ್ಕೆ ಬಂದು ನಿಂತಿದೆ. ಸೇತುವೆಯು ವಾಹನ ಸಂಚಾರಕ್ಕೆ ಮುಕ್ತಗೊಂಡಿದ್ದು ಇನ್ನು ತಡೆಗೋಡೆ, ಚರಂಡಿ ವ್ಯವಸ್ಥೆ ಹಾಗೂ ಡಾಂಬರ್ ಹಾಕುವ ಕೆಲಸ ಬಾಕಿ ಇದೆ.
11 ಕೋಟಿ ರೂ.ಕಾಮಗಾರಿ
200ರ ನವೆಂಬರ್ 2ರಂದು ಸೇತುವೆ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗಿತ್ತು. ಕುಂಬ್ರದಲ್ಲಿ 7 ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಹಳೆಯ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಿಸಲಾಗಿದೆ. ಇಲ್ಲಿ ಹಾದು ಹೋಗುವ ಮಗಿರೆ ತೋಡಿಗೆ ಅಡ್ಡಲಾಗಿ ಚತುಷ್ಪಥ ಸೇತುವೆ ನಿರ್ಮಿಸಲಾಗಿದೆ. ಕುಂಬ್ರ ಸೇತುವೆ ಬರೋಬ್ಬರಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ತಿರುವು ತೆರವು ಮಾಡಲಾಗಿದೆ.
ಕುಂಬ್ರದ ಹಳೆಯ ಸೇತುವೆಯ ಮೇಲೆ ಇಳಿಜಾರು ರಸ್ತೆ ಅರ್ಧಚಂದ್ರಾಕೃತಿಯ ತಿರುವು ಹೊಂದಿತ್ತು. ಇದರಿಂದ ಈ ಭಾಗದಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಿತ್ತು. ಪಕ್ಕದಲ್ಲಿ 100 ಅಡಿ ಎತ್ತರದ ಗುಡ್ಡವಿದ್ದ ಕಾರಣ ಹಿಂದೆ ತಿರುವು ರಸ್ತೆ ಮಾಡಲಾಗಿತ್ತು. ಆದರೆ ಇದೀಗ ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ನೂತನ ಸೇತುವೆಯ ನೇರಕ್ಕೆ ಸಂಪೂರ್ಣ ಗುಡ್ಡವನ್ನೇ ಕತ್ತರಿಸಲಾಗಿದ್ದು ಇಲ್ಲಿನ ಮಸೀದಿಯ ಮುಂಭಾಗದಲ್ಲಿ ಬೆಟ್ಟ ಸವರಿ, ಪೂರ್ತಿ ಗುಡ್ಡ ತೆರವು ಮಾಡಿ ನೇರ ರಸ್ತೆ ನಿರ್ಮಿಸಲಾಗಿದೆ. ಸೇತುವೆಯ ಒಂದು ಭಾಗದಲ್ಲಿ 5 ಅಡಿ ಎತ್ತರಕ್ಕೆ ಮಣ್ಣು ಸುರಿದು ನೂತನ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ.
ಇತಿಹಾಸದ ಪುಟ ಸೇರಿದ ಹಳೆಯ ಸೇತುವೆ…
ಸುಮಾರು 7 ದಶಕಗಳ ಇತಿಹಾಸವನ್ನು ಹೊಂದಿದ್ದ ಕುಂಬ್ರದ ಹಳೆಯ ಸೇತುವೆ ಇನ್ನು ನೆನಪು ಮಾತ್ರ. ಕುಂಬ್ರ ಸೇತುವೆ ಅಪಘಾತಗಳಿಂದಲೇ ಹೆಚ್ಚು ಕುತ್ಯಾತಿ ಪಡೆದುಕೊಂಡಿತ್ತು. ಅರ್ಧ ಚಂದ್ರಾಕೃತಿಯ ರಸ್ತೆ ಇದ್ದುದುದರಿಂದ ಇಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸಿತ್ತು. ಪ್ರಾಣಹಾನಿ ಕೂಡ ಆಗಿದೆ. ಅದಕ್ಕಾಗಿಯೇ ಸೇತುವೆಯ ಎರಡೂ ಬದಿಗಳಲ್ಲಿ ಹಂಪ್ಸ್‌ಗಳನ್ನು ಹಾಕಲಾಗಿತ್ತು. ಅಪಘಾತಗಳಿಂದಲೇ ಸದ್ದು ಮಾಡಿದ್ದ ಕುಂಬ್ರ ಸೇತುವೆ ಇನ್ನು ನೆನೆಪು ಮಾತ್ರ.