ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ, ಶಾಲಾ ಪ್ರಾರಂಭೋತ್ಸವ

0

ವಿಟ್ಲ: ವಿಶೇಷ ಸಂಭ್ರಮದ ಕ್ಷಣದಲ್ಲಿ ನಾವಿದ್ದೇವೆ. ಜನ್ಮದಿಂದ ಜೀವನದ ಆರಂಭೋತ್ಸವ ಪ್ರಾರಂಭವಾಗಿದೆ. ಬದುಕು ರೂಪಿಸಲು ಆರಂಭ ಮತ್ತೆ ಅಂತ್ಯದ ಅರಿವಿರಲಿ. ಬದುಕು ನಡೆಸಲು ಶಿಕ್ಷಣ ಅಗತ್ಯ. ಬದುಕು ರೂಪಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಅಕ್ಷರಾಭ್ಯಾಸ ಮತ್ತು ವಿದ್ಯಾಭ್ಯಾಸ ಬೇರೆಬೇರೆ. ಬುದ್ದಿಗೆ ಪ್ರಚೋದನೆ ಸಿಗುವ ಕೆಲವಾಗಬೇಕು. ಜೀವನದಲ್ಲಿ ಶತಮಾನ ಪೂರೈಸುವ ವಿದ್ಯೆ ಎಲ್ಲರಿಗು ಲಭಿಸಬೇಕು.ಶಿಕ್ಷಕರು ಮತ್ತು ಪೋಷಕರು ಒಂದೇ ನಾಣ್ಯದ‌ಎರಡು ಮುಖಗಳಿದ್ದಂತೆ. ಇಬ್ಬರು ಜೊತೆಜೊತೆಯಾಗಿ ಸಾಗಿದರೆ ವಿದ್ಯಾರ್ಥಿಗಳು ಆದರ್ಶ ಪ್ರಜೆಯಾಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.

ಅವರು ಮೇ31ರಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆರಂಭಗೊಂಡ ನೂತನ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿ ಬಳಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರವುವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಶಿಕ್ಷಣದಲ್ಲಿ ರಾಷ್ಟ್ರ ಪ್ರೇಮ ಇರಲಿ. ಆಧ್ಯಾತ್ಮಿಕತೆ ಬದುಕಿನಲ್ಲಿ ಬೆಳಸಿಕೊಳ್ಳಬೇಕು. ನಾವು ಸ್ನೇಹ ಜೀವಿಗಳಾಗಿರಬೇಕು. ಗುರುಕುಲ ಮಾದರಿಯ ಶಿಕ್ಷಣ ನೀಡುವ ಪ್ರಯತ್ನ ನಡೆಸಲಾಗುತ್ತಿದೆ. ಅಪರ‌ವಿದ್ಯೆಯಿಂದ ಲೌಕಿಕ ಬದುಕು ಸಾಗಿಸಲು ಸಾಧ್ಯ. ಪಾರಮಾರ್ಥಿಕ ವಿದ್ಯೆಯೇ ಶ್ರೇಷ್ಟವಾದುದು. ಅಕ್ಷರ ನಾಶವಾಗದ ಸಂಪತ್ತು. ಭಾರತವೇ‌ ಅವಿನಾಶಿ.
ಆದ್ಯಾತ್ಮಿಕ ಬೆಳಕಿರುವವರೆಗೆ ನಮಗೆ ಆಪತ್ತಿಲ್ಲ. ಮಕ್ಕಳಲ್ಲಿ ಸಂಭ್ರಮದ ವಾತಾವರಣ ಸೃಷ್ಠಿ ಮಾಡುವ ನಿಟ್ಟಿನಲ್ಲಿ ಆರಂಭೋತ್ಸವದ ಆಯೋಜನೆ ಮಾಡಲಾಗಿದೆ. ದಾನ ಬುದ್ದಿ ಎಲ್ಲರಲ್ಲಿರಬೇಕು. ರಾಷ್ಟ್ರ ನಿರ್ಮಾಣದಲ್ಲಿ ಯುವಪೀಳಿಗೆಯ ಪಾತ್ರ ಮಹತ್ವದ್ದು ಹುಟ್ಟು ಸಾವಿನ ನಡುವಿನ ದಿನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಮಕ್ಕಳ ಕೈಗೆ ಮೊಬೈಲ್ ನ ಬದಲು ಭಗವದ್ಘೀತೆ ನೀಡುವ ಕೆಲಸವಾಗಬೇಕು. ಮೊಬೈಲ್ ನಿಂದ ಮಕ್ಕಳು ದಾರಿತಪ್ಪಲು ಸಾಧ್ಯತೆ ಅತೀ ಹೆಚ್ಚು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್ ರವರು ಮಾತನಾಡಿ ನಮ್ಮಲ್ಲಿ ಎಲ್ಲಾ ವಿಧದ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುವುದು. ಮಕ್ಕಳನ್ನು ಸೇರ್ಪಡೆ ಮಾಡುವಾಗ ನಮ್ಮಲ್ಲಿ ಯಾವುದೇ ತರಹದ ಪರೀಕ್ಷೆಗಳಿರುವುದಿಲ್ಲ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಶಿಕ್ಷಕವೃಂದದ ನಿರಂತರ ಪ್ರಯತ್ನದ‌ ಮೂಲಕ ಮುಂದೆ ತರುವ ಕೆಲಸ ಮಾಡಲಾಗುತ್ತಿದೆ. ಈ ಭಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶ ನಮಗೆಲ್ಲಾ ಅತ್ಯಂತ ಸಂತಸ ತಂದಿದೆ. ಇಲ್ಲಿ ಸಿಗುವ ಸವಲತ್ತು‌ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.

ಸಾಧ್ವಿ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತರಿದ್ದರು. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಮುಂಬೈ ಘಟಕದ ಸದಸ್ಯೆ ಕಲ್ಪನಾ ಕೃಷ್ಣ ಶೆಟ್ಟಿ ಮುಂಬೈ, ಉದ್ಯಮಿ ಆನಂದ ಶೆಟ್ಟಿ ನ್ಯೂಯಾರ್ಕ್, ವೈದ್ಯರಾದ ಡಾ. ಅಮಿತಾ ಶೆಟ್ಟಿ, ಡಾ. ಅನುರಾಧ ಶೆಟ್ಟಿ, ಪ್ರಮುಖಾರಾದ ನೇತ್ರ ಪ್ರತಾಪ್ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಕನ್ಯಾನ ಶ್ರೀ ಗುರುದೇವ ಐಟಿಐನ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ಮಕ್ಕಳನ್ನು ಹೂ ನೀಡಿ‌ ಸ್ವಾಗತಿಸಲಾಯಿತು‌. ಶಾಲಾ ಸಂಚಾಲಕರಾದ ಗಣಪತಿ ಭಟ್ ಸೇರಾಜೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು, ಕಾರಣರಾದ ಶಿಕ್ಷಕರನ್ನು, ಪೋಷಕರನ್ನು ಅಭಿನಂದಿಸಿದರು. 2023-24 ಎಸ್. ಎಸ್. ಎಲ್. ಸಿ ಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಪೂಜ್ಯ ಶ್ರೀಗಳವರು ಶಾಲು ಹಾಕಿ ಫಲಮಂತ್ರಾಕ್ಷತೆಯಿತ್ತು ಹರಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್ ರೈರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಸಾನ್ವಿ ಸಿ.ಎಸ್. ಸ್ವಾಗತಿಸಿ, ಶಮಾ ವಂದಿಸಿದರು. ಹೃಷಿಕಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here