ಪುತ್ತೂರು: ವೀರಮಂಗಲ ಶಾಲೆಯು ಕೇಂದ್ರ ಸರ್ಕಾರ ಪುರಷ್ಕೃತ ಪಿಎಂಶ್ರೀ ಶಾಲೆಯಾಗಿ ರೂಪುಗೊಂಡು ಹತ್ತು ಹಲವು ಕನಸುಗಳನ್ನು ಸಾಕಾರಗೊಳಿಸಲು ಅಣಿಯಾಗಿ ನಿಂತಿದೆ. ಸುಂದರ ಕನಸುಗಳನ್ನು ಹೊತ್ತು ಭರವಸೆಯ ತಾಣಕ್ಕೆ ಮಕ್ಕಳಿಂದು ಪ್ರವೇಶ ಮಾಡಿದರು. ನೂತನವಾಗಿ 48 ವಿದ್ಯಾರ್ಥಿಗಳನ್ನು ಶಾಲೆಯ 135 ವಿದ್ಯಾರ್ಥಿಗಳು ಪೋಷಕರು ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಹೂವಿನ ಸಿಂಚನ ಮಾಡಿದರು.
ಕೈಗೆ ಒಂದು ಹಕ್ಕಿಯ ಬಾವುಟ ತಲೆಗೊಂದು ಅಕ್ಷರ ಕಿರೀಟ, ಇನ್ನೊಂದು ಕೈಯಲ್ಲಿ ಬಲೂನು, ಬ್ಯಾಂಡ್ ನೊಂದಿಗೆ ಜಯಘೋಷ, ಅಬ್ಬಾ ಮಕ್ಕಳಿಗೆ ಹೊಸ ಲೋಕಕ್ಕೆ ಬಂದ ಅನುಭವ. ನಾವು ಅವರಂತಿದ್ದಾಗ ನಮಗೆ ಸಿಗದೆ ಇರುವ ಎಲ್ಲಾ ಅವಕಾಶಗಳು. ಆರತಿ ಎತ್ತಿ ಬರಮಾಡಿಕೊಳ್ಳುವ ದೃಶ್ಯ ನೋಡಿ ತಾಯಂದಿರ ಕಣ್ಣ ಕೋಡಿಯಲ್ಲಿ ನೀರು ಚಿಮುಕಿದ್ದು ಮರೆಯ ಮಾತಲ್ಲ. ಸಭಾಂಗಣಕ್ಕೆ ಪ್ರವೇಶ ಮಾಡಿದ ನೂತನ ಮಕ್ಕಳಿಗೆ ಪುಸ್ತಕ ಫೈಲ್ ಕ್ರೆಯಾನ್ಸ್ ಬಣ್ಣ ಬಣ್ಣದ ಬೊಂಬೆ ನೀಡಿದಾಗಲಂತೂ ಮಕ್ಕಳ ಸಂತಸಕ್ಕೆ ಪಾರವೇ ಇಲ್ಲ. ಏನು ಅರಿಯದ ದೇವರಿಗೆ ಸಮಾನಾದ ಮಕ್ಕಳ ಮುಂದೆ ನಾವೇ ಸಣ್ಣವರಾದೆವು. ನಾವು ಭರವಸೆಯಾಗುವೆವು. ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಗುರಿ ಎಂಬ ಭರವಸೆಗೆ ಪೂರಕವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ಪರಿಕಲ್ಪನೆಯಲ್ಲಿ ಮಕ್ಕಳನ್ನು ವಿಶೇಷವಾಗಿ ಜ್ಞಾನ ದೇಗುಲಕ್ಕೆ ಆಹ್ವಾನವನ್ನು ನೀಡಲಾಯಿತು. ಶಾಲಾ ಶಿಕ್ಷಕರಾದ ಹರಿಣಾಕ್ಷಿ, ಶೋಭಾ ಹೇಮಾವತಿ ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ ಎಲ್ ಕೆ ಜಿ ಶಿಕ್ಷಕಿಯರಾದ ಸವಿತಾ, ಸಂಚನಾ, ಚಂದ್ರಾವತಿ ಅಡುಗೆ ಸಿಬ್ಬಂದಿಗಳಾದ ಪಾರ್ವತಿ, ಸುಶೀಲ, ಪ್ರೇಮ ಸರ್ವ ಸಹಕಾರ ನೀಡಿದರು. ಎಸ್ ಡಿಎಂಸಿ ಅಧ್ಯಕ್ಷ ಅನುಪಮ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ರಝಾಕ್ ಸದಸ್ಯರಾದ ದಿನೇಶ್ ಶೆಟ್ಟಿ, ಸುರೇಶ್ ಗಂಡಿ, ಸಮೀರ್ ಉಮ್ಮರ್, ಶಾಂಬಲತಾ, ರಾಜೇಶ್ವರಿ, ರತ್ನಾವತಿ, ಭವ್ಯ, ಚಿತ್ರಾ, ಪದ್ಮಾವತಿ,ಚಿತ್ರಾ ಸೇರಿದಂತೆ ಪೋಷಕರು ಭಾಗವಹಿಸಿದರು. ಮಕ್ಕಳಿಗೆ ಉಚಿತವಾಗಿ ಸರ್ಕಾರದಿಂದ ಕೊಡಮಾಡಿದ ಉಚಿತ ಪಠ್ಯಪುಸ್ತಕ,ಎರಡು ಸೆಟ್ ಯುನಿಪಾರಂ ನೀಡಲಾಯಿತು. ಮಧ್ಯಾಹ್ನ ಸಿಹಿಭೋಜನ ನೀಡಲಾಯಿತು.