ನೆಲ್ಯಾಡಿ: ಸೇವಾನಿವೃತ್ತರಾದ ಮೆಸ್ಕಾಂ ಮೆಕ್ಯಾನಿಕ್ ದರ್ಜೆ-2 ನೌಕರ ಅಬ್ದುಲ್ ರಹಿಮಾನ್‌ರವರಿಗೆ ಬೀಳ್ಕೊಡುಗೆ

0

ತೃಪ್ತಿದಾಯಕ ಸೇವೆ ಮೂಲಕ ಜನಮನ್ನಣೆ ಪಡೆದಿದ್ದಾರೆ: ರಾಮಚಂದ್ರ

ನೆಲ್ಯಾಡಿ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಪುತ್ತೂರು ವಿಭಾಗದ ನೆಲ್ಯಾಡಿ, ಉಪ್ಪಿನಂಗಡಿ ಮತ್ತು ಕಡಬ ಶಾಖೆಗಳಲ್ಲಿ ಸುಮಾರು 26 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ನೆಲ್ಯಾಡಿ ಕಾರ್ಯ ಮತ್ತು ಪಾಲನಾ ಶಾಖೆಯಲ್ಲಿ ಮೆಕ್ಯಾನಿಕ್ ದರ್ಜೆ-2 ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು ವಯೋನಿವೃತ್ತಿ ಹೊಂದಿದ ಅಬ್ದುಲ್ ರಹಿಮಾನ್ ಪಿ.ಅವರಿಗೆ ಬೀಳ್ಕೊಡುಗೆ, ಸನ್ಮಾನ ಹಾಗೂ ನೆಲ್ಯಾಡಿಯ ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ ಕಾರ್ಯಕ್ರಮ ಮೇ.31ರಂದು ಸಂಜೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು ಮಾತನಾಡಿ, ಸಿಬ್ಬಂದಿಗಳ ಕೊರತೆ, ಪ್ರಾಕೃತಿಕ ವಿಕೋಪದ ನಡುವೆಯೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಮೆಸ್ಕಾಂಗೆ ಸವಾಲಿನ ಕೆಲಸ ಆಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಇಲಾಖೆಯ ನೌಕರರಾಗಿರುವ ಅಬ್ದುಲ್ ರಹಿಮಾನ್ ಅವರು ಸವಾಲಿನ ನಡುವೆಯೂ ಎಲ್ಲಾ ವರ್ಗದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವ ಮೂಲಕ ಜನಮನ್ನಣೆ ಪಡೆದುಕೊಂಡಿದ್ದಾರೆ. ಅವರ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.


ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ನಿವೃತ್ತಿಯ ವೇಳೆ ಕೆಲಸದ ಬಗ್ಗೆ ತೃಪ್ತಿ ಬೇಕು. ಜನರ ಪ್ರೀತಿ, ವಿಶ್ವಾಸ ಗಳಿಸಬೇಕು. ನೆಲ್ಯಾಡಿ ಮೆಸ್ಕಾಂ ಶಾಖೆಯಲ್ಲಿ ಎಲ್ಯಣ್ಣ ಗೌಡ, ನೇಮಣ್ಣ ಗೌಡರಂತಹ ಉತ್ತಮ ಪವರ್‌ಮ್ಯಾನ್‌ಗಳು ಕೆಲಸ ನಿರ್ವಹಿಸಿದ್ದಾರೆ. ಗ್ರಾಹಕರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ರಹಿಮಾನ್ ಅವರೂ ನೆಲ್ಯಾಡಿಯ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡಿದ್ದಾರೆ. ಅವರ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು. ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕಡಬ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ್, ಮೆಸ್ಕಾಂ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಇ., ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಕಡಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಜೆಇ ಸುಂದರ್, ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ವೆಂಕಟ್ರಮಣ ಆರ್. ಅನಿಸಿಕೆ ವ್ಯಕ್ತಪಡಿಸಿದರು.

ಸನ್ಮಾನ:
ವಯೋನಿವೃತ್ತರಾದ ಅಬ್ದುಲ್ ರಹಿಮಾನ್ ಪಿ. ಹಾಗೂ ಅವರ ಪತ್ನಿಯನ್ನು ನೆಲ್ಯಾಡಿ ಮೆಸ್ಕಾಂ ಶಾಖೆ ವತಿಯಿಂದ ಸನ್ಮಾನಿಸಿ, ಉಡುಗೊರೆ ನೀಡಿ ಬೀಳ್ಕೊಡಲಾಯಿತು. ನೆಲ್ಯಾಡಿ ಶಾಖಾ ಸಿಬ್ಬಂದಿ ರಝಾಕ್ ಅವರು ಸನ್ಮಾನ ಪತ್ರ ವಾಚಿಸಿದರು. ಮೆಸ್ಕಾಂ ಉಪ್ಪಿನಂಗಡಿ, ಬಿಳಿನೆಲೆ, ಕೊಕ್ಕಡ ಶಾಖೆ, ಕಡಬ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದಲೂ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಅಬ್ದುಲ್ ರಹಿಮಾನ್ ಅವರು ಮಾತನಾಡಿ, 26 ವರ್ಷಗಳ ಕಾಲ ವಿವಿಧ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಸೇವಾ ಅವಧಿಯಲ್ಲಿ ಸಹಕರಿಸಿದ ಅಧಿಕಾರಿಗಳಿಗೆ, ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ನೆಲ್ಯಾಡಿ ಶಾಖಾಧಿಕಾರಿ ರಮೇಶ್ ಸ್ವಾಗತಿಸಿ, ಆಲಂಕಾರು ಶಾಖಾಧಿಕಾರಿ ಪ್ರೇಮ್‌ಕುಮಾರ್ ವಂದಿಸಿದರು. ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರಾ ಜೆ.ಬಂಟ್ರಿಯಾಲ್ ಪ್ರಾರ್ಥಿಸಿದರು. ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಗ್ರಾ.ಪಂ.ಸದಸ್ಯರಾದ ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ಅಬ್ದುಲ್ ಜಬ್ಬಾರ್, ಮಹಮ್ಮದ್ ಇಕ್ಬಾಲ್, ಆನಂದ ಪಿಲವೂರು, ಹನೀಫ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಸಂಘ ಸಂಸ್ಥೆಗಳ ಮುಖಂಡರಾದ ಜಯರಾಮ ಶೆಟ್ಟಿ ಗೌರಿಜಾಲು, ರವಿಚಂದ್ರ ಹೊಸವೊಕ್ಲು, ಎಂ.ಕೆ.ಇಬ್ರಾಹಿಂ, ನಿವೃತ್ತ ಶಿಕ್ಷಕ ದಿನಕರ್, ಜೆಸಿಐ ಪೂರ್ವಾಧ್ಯಕ್ಷರಾದ ಜಯಂತಿ ಬಿ.ಎಂ., ವಿಶ್ವನಾಥ ಶೆಟ್ಟಿ, ಪುರಂದರ ಗೌಡ ಡೆಂಜ, ರಾಕೇಶ್ ನೆಲ್ಯಾಡಿ, ಸೆಬಾಸ್ಟಿನ್ ಪಿ.ಜೆ., ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ಮೆಸ್ಕಾಂ ಶಾಖಾ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ:

ಅಬ್ದುಲ್ ರಹಿಮಾನ್ ಅವರನ್ನು ನೆಲ್ಯಾಡಿಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದಲೂ ಗೌರವಿಸಲಾಯಿತು. ನೆಲ್ಯಾಡಿ ಅಶ್ವಿನಿ ಆಸ್ಪತ್ರೆ, ನೆಲ್ಯಾಡಿ ಗ್ರಾ.ಪಂ.,ಕೌಕ್ರಾಡಿ ಗ್ರಾ.ಪಂ., ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಎನ್‌ಎಸ್‌ಎಸ್ ಘಟಕ, ಜೆಸಿಐ ನೆಲ್ಯಾಡಿ, ಆಟೋ ಚಾಲಕರ ಸಂಘ ನೆಲ್ಯಾಡಿ, ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ವಿದ್ಯುತ್ ಬಳಕೆದಾರರ ವೇದಿಕೆ, ಗೆಳೆಯರ ಬಳಗ ಗಾಂಧಿಮೈದಾನ, ಅಶ್ವತ್ಥ ಗೆಳೆಯರ ಬಳಗ ಹೊಸಮಜಲು, ನೆಲ್ಯಾಡಿ ಕೃಷಿ ಪತ್ತಿನ ಸಹಕಾರ ಸಂಘ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಶೀಗಲ್ ಗ್ರೂಫ್ ನೆಲ್ಯಾಡಿ ಸೇರಿದಂತೆ ನೆಲ್ಯಾಡಿಯ ವಿವಿಧ ಸಂಘ ಸಂಸ್ಥೆಗಳಿಂದ, ಗ್ರಾಹಕರಿಂದ ಅಬ್ದುಲ್ ರಹಿಮಾನ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಗಣೇಶ್ ರಶ್ಮಿ ಅವರು ಸನ್ಮಾನ ಪತ್ರ ವಾಚಿಸಿದರು. ಜಯಾನಂದ ಬಂಟ್ರಿಯಾಲ್ ಅವರು ನಿರೂಪಿಸಿದರು.

LEAVE A REPLY

Please enter your comment!
Please enter your name here