ಕಲ್ಲೇಗ ಟೈಗರ‍್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ-ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮಹೇಶ್ ಕಜೆ ನೇಮಕ

0

ಇಳಂತಿಲ ಕೇದಾರ ನಿವಾಸಿಯಾಗಿರುವ ಮಹೇಶ್ ಕಜೆ ಅವರು ಪುತ್ತೂರು ಬೊಳುವಾರುನಲ್ಲಿರುವ ಕಜೆ ಲಾ ಛೇಂಬರ‍್ಸ್ ಮುಖ್ಯಸ್ಥರಾಗಿದ್ದಾರೆ.ಜಾರಿ ನಿರ್ದೇಶನಾಲಯ(ಇ.ಡಿ.)ಪರ ವಿಶೇಷ ಸರಕಾರಿ ಅಭಿಯೋಜಕರೂ ಆಗಿರುವ ಇವರು, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಮಾಜಿ ಸದಸ್ಯ, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ.ಜೊತೆಗೆ ಹಲವು ಸಂಘ ಸಂಸ್ಥೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಪುತ್ತೂರು:ಪುತ್ತೂರಿನ ಜನಪ್ರಿಯ ಹುಲಿವೇಷ ಕುಣಿತ ತಂಡ ಱಟೀಮ್ ಕಲ್ಲೇಗ ಟೈಗರ‍್ಸ್‌ೞ ತಂಡದ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಶನ್ ಪರ ವಾದಿಸಲು ಪುತ್ತೂರಿನ ಖ್ಯಾತ ವಕೀಲ, ಬೊಳುವಾರು ಕಜೆ ಲಾ ಛೇಂಬರ‍್ಸ್‌ನ ಮುಖ್ಯಸ್ಥ ಮಹೇಶ್ ಕಜೆಯವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶಿಸಿದೆ.

ತನ್ನ ಪುತ್ರ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಶನ್ ಪರ ಸಮರ್ಥವಾಗಿ ವಾದ ಮಂಡಿಸಲು ಸರ್ಕಾರಿ ಅಭಿಯೋಜಕರ ಜತೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಅಕ್ಷಯ್ ಕಲ್ಲೇಗರವರ ತಂದೆ, ಕಬಕ ಗ್ರಾಮದ ಶೇವಿರೆ ನಿವಾಸಿ ಚಂದ್ರಶೇಖರ ಗೌಡ ಅವರು ರಾಜ್ಯ ಗೃಹ ಇಲಾಖೆಗೆ ಹಾಗೂ ಸ್ಪೀಕರ್ ಯು.ಟಿ.ಖಾದರ್‌ರವರಿಗೆ ಮನವಿ ಸಲ್ಲಿಸಿದ್ದರು. ದ.ಕ, ಉಡುಪಿ, ಚಿಕ್ಕಮಗಳೂರು, ಕಾರವಾರ ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಮತ್ತು ಹಲವು ಪ್ರಮುಖ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಪುತ್ತೂರಿನ ಕಾವೇರಿಕಟ್ಟೆ ನಿವಾಸಿ ಕೆ.ಶಿವಪ್ರಸಾದ್ ಆಳ್ವ, ಪುತ್ತೂರಿನ ಖ್ಯಾತ ವಕೀಲ ಮಹೇಶ್ ಕಜೆ ಮತ್ತು ಸುಳ್ಯದ ಖ್ಯಾತ ವಕೀಲ ವೆಂಕಪ್ಪ ಗೌಡ ಅವರ ಹೆಸರನ್ನು ಮನವಿಯಲ್ಲಿ ಉಲ್ಲೇಖಿಸಿ, ಈ ಮೂವರಲ್ಲಿ ಒಬ್ಬರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡುವಂತೆ ಚಂದ್ರಶೇಖರ ಗೌಡ ಅವರು ಕೋರಿದ್ದರು.

ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸ್ಪೀಕರ್ ಯು.ಟಿ.ಖಾದರ್ ಅವರು ರಾಜ್ಯದ ಗೃಹ ಸಚಿವ ಡಾ|ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದರು.ಈ ಹಿನ್ನೆಲೆಯಲ್ಲಿ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಚೆನ್ನಬಸಪ್ಪ ಕೆ.ಅವರು, ಈ ಕುರಿತು ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳುವಂತೆ ಸರ್ಕಾರದ ಒಳಾಡಳಿತ ಇಲಾಖೆಯ ಅಪರ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದ್ದರು.ಇದೀಗ ಮಹೇಶ್ ಕಜೆ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ಸರಕಾರ ನೇಮಿಸಿದೆ.ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮುಂದಿನ ಆದೇಶದ ತನಕ ಮಹೇಶ್ ಕಜೆ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸಿ,ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಒಳಾಡಳಿತ ಇಲಾಖೆ(ಪೊಲೀಸ್ ಸೇವೆಗಳು-ಬಿ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ. ಶ್ಯಾಮ ಹೊಳ್ಳ ಅವರು ಆದೇಶ ಹೊರಡಿಸಿದ್ದಾರೆ.ವಿಶೇಷ ಸರ್ಕಾರಿ ಅಭಿಯೋಜಕರ ಸಂಭಾವನೆ-ವೆಚ್ಚವನ್ನು ಅರ್ಜಿದಾರರಾದ ಚಂದ್ರಶೇಖರ್ ಗೌಡ ಕಲ್ಲೇಗ ಅವರೇ ಭರಿಸತಕ್ಕದ್ದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ನ.6ರಂದು ರಾತ್ರಿ ನಡೆದಿತ್ತು ಬರ್ಬರ ಹತ್ಯೆ: 2023ರ ನ.6ರಂದು ರಾತ್ರಿ ಅಕ್ಷಯ್ ಕಲ್ಲೇಗ ಅವರನ್ನು ನೆಹರೂನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪುತ್ತೂರು ಪಡೀಲ್ ನಿವಾಸಿ ಮನೀಶ್, ಖಾಸಗಿ ಬಸ್ ಚಾಲಕನಾಗಿದ್ದ ಬನ್ನೂರು ಕೃಷ್ಣನಗರ ನಿವಾಸಿ ಚೇತನ್, ಬನ್ನೂರು ನಿವಾಸಿ ಮಂಜುನಾಥ್ ಯಾನೆ ಹರಿ ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷನಾಗಿದ್ದ ಕೇಶವ ಪಡೀಲು ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಆರೋಪಿಗಳ ಪೈಕಿ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ ಅವರು ಜಾಮೀನಿನ ಮೇಲೆ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು.ಬಳಿಕ ಕರ್ನಾಟಕ ಹೈಕೋರ್ಟ್ ಕೂಡಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.ಸದ್ಯ ನಾಲ್ವರು ಆರೋಪಿಗಳೂ ನ್ಯಾಯಾಂಗ ಬಂಧನದಲ್ಲಿದ್ದಾರೆ.ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.ಸರಕಾರಿ ಅಭಿಯೋಜಕರಾಗಿ ಕುಂದಾಪುರ ನಿವಾಸಿ ಜಯಂತಿಸತೀಶ್ ಭಟ್ ಅವರು ವಾದಿಸುತ್ತಿದ್ದಾರೆ.ಮುಂದೆ ವಿಶೇಷ ಸರಕಾರಿ ಅಭಿಯೋಜಕರಾಗಿ ಮಹೇಶ್ ಕಜೆ ಅವರು ಕಾರ್ಯನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here