ವಿದ್ಯೆ ‘ದಾನ’ ನೀಡುವಲ್ಲಿ ಸು’ದಾನ’ ಮುಂದು-ಆಸ್ಕರ್ ಆನಂದ್
ಪುತ್ತೂರು: ಹಲವಾರು ವರುಷಗಳ ಕನಸು ಇಂದು ನನಸಾಗಿದೆ. ಸುದಾನ ಸಂಸ್ಥೆಯು ವಿದ್ಯೆಯ ಮೂಲಕ ದಾನ ಕೊಡುವಲ್ಲಿನ ಪ್ರವೃತ್ತಿ ಇಂದಿಗೂ ಮುಂದುವರೆಸಿಕೊಂಡು ಬಂದಿದ್ದು ವಿದ್ಯಾರ್ಥಿಗಳು ಸುದಾನ ಪರಿಸರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸುದಾನ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಕೋಶಾಧಿಕಾರಿ ಆಸ್ಕರ್ ಆನಂದ್ ರವರು ಹೇಳಿದರು.
ಜೂ.3ರಂದು ಸುದಾನ ಕ್ಯಾಂಪಸ್ಸಿನಲ್ಲಿರುವ ಎಡ್ವರ್ಡ್ ಸಭಾಂಗಣದಲ್ಲಿ ಜರಗಿದ ವಿಸ್ತರಿತ ಶೈಕ್ಷಣಿಕ ಕ್ಷೇತ್ರದಲ್ಲೊಂದು ಹೊಸ ಹೆಜ್ಜೆಯನ್ನಿಟ್ಟಿರುವ ಸುದಾನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ದೇಶ, ಸಮಾಜ, ವ್ಯಕ್ತಿಯ ವ್ಯಕ್ತಿತ್ವ ಬೆಳಗಿಸಲು ಶಿಕ್ಷಣವು ಪ್ರಬಲ ಆಯುಧ-ಡಾ.ಪೀಟರ್ ವಿಲ್ಸನ್:
ಅಧ್ಯಕ್ಷತೆ ವಹಿಸಿದ ಸುದಾನ ಪದವಿ ಪೂರ್ವ ಕಾಲೇಜಿನ ಸಂಚಾಲಕ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಶಿಕ್ಷಣ ಎಂಬುದು ಇಡೀ ವಿಶ್ವದಲ್ಲಿ ಸಮಾಜವನ್ನು ಬದಲಾಯಿಸಲು ಇರುವ ಶಕ್ತಿಯುಧ ಆಯುಧ, ಯಾವುದೇ ದೇಶವಾಗಲಿ ಅದು ಸರ್ವನಾಶವಾಗಲು ಯಾವುದೇ ಬಾಂಬ್ ಬೇಕಾಗಿಲ್ಲ, ಅಲ್ಲಿ ಶಿಕ್ಷಣದ ಕೊರತೆ ಇದ್ದರೆ ಸಾಕಾಗುತ್ತದೆ. ದೇಶ, ಸಮಾಜ, ವ್ಯಕ್ತಿಯ ವ್ಯಕ್ತಿತ್ವ ಬೆಳಗಿಸಲು ಶಿಕ್ಷಣವು ಪ್ರಬಲ ಆಯುಧವಾಗಿದೆ. ಸಾಧನೆ ಮಾಡಬೇಕಾದರೆ, ಯಶಸ್ಸಿನ ಹಾದಿಗೆ ಸಾಗಬೇಕಾದರೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು ಎಂದರು.
ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ದು ತಾನು ಬೆಳಗುತ್ತಾ ಸಂಸ್ಥೆಯು ಬೆಳಗುವಂತಾಗಲಿ-ಸಿಲ್ವಿಯಾ ಡಿ’ಸೋಜ:
ಸುದಾನ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಸದಸ್ಯೆ, ನ್ಯಾಯವಾದಿ ಸಿಲ್ವಿಯಾ ಡಿ’ಸೋಜ ಮಾತನಾಡಿ, ಸುದಾನ ಆಡಳಿತ ಮಂಡಳಿಯ ಅವಿರತ ಪ್ರಯತ್ನದಿಂದ ಆರಂಭಗೊಂಡಿರುವ ಈ ಸಂಸ್ಥೆಗೆ ವಿದ್ಯಾರ್ಥಿಗಳು ಸಾಕ್ಷಿಗಳಾಗಿದ್ದೀರಿ ಜೊತೆಗೆ ಪ್ರಥಮ ವರ್ಷದ ವಿದ್ಯಾರ್ಥಿಗಳು ಎಂಬ ಹೆಮ್ಮೆಗೆ ಪಾತ್ರರಾಗಿದ್ದೀರಿ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾರ್ಜನೆಗೈಯ್ದು ತಾನು ಬೆಳಗುತ್ತಾ ಸಂಸ್ಥೆಯು ಬೆಳಗುವಂತಾಗಲಿ ಎಂದರು.
ಪಿಯು ಶಿಕ್ಷಣದಲ್ಲಿ ಸುದಾನ ಸಂಸ್ಥೆ ನಾಂದಿ ಹಾಡಲಿದೆ-ಸುಪ್ರೀತ್ ಕೆ.ಸಿ:
ಕಾಲೇಜು ಪ್ರಾಂಶುಪಾಲ ಸುಪ್ರೀತ್ ಕೆ.ಸಿ ಮಾತನಾಡಿ, ಪಿಯು ಶಿಕ್ಷಣ ವಿದ್ಯಾರ್ಥಿಗಳ ಮುಂದಿನ ಜೀವನದ ಅಡಿಪಾಯವಾಗಿದೆ. ಸುದಾನ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಮೊದಲೇ ಹೆಸರುವಾಸಿಯಾಗಿದ್ದು ಅದೇ ಶಿಕ್ಷಣವನ್ನು ಇಲ್ಲಿ ಮುಂದುವರೆಸುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯಿದ್ದಲ್ಲಿ ಯಶಸ್ಸು ಸಾಧ್ಯ. ಸಂಸ್ಥೆಯ ಬೆಳವಣಿಗೆಯಲ್ಲಿ ಹೆತ್ತವರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ, ಶಿಕ್ಷಕರು ನಾಲ್ಕು ಪಿಲ್ಲರ್ಸ್ ಇದ್ದಾಗೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಸಂಸ್ಥೆಯು ಧ್ವನಿಯಾಗಿದೆ ಮಾತ್ರವಲ್ಲ ಪಿಯು ಶಿಕ್ಷಣದಲ್ಲಿ ಸುದಾನ ಸಂಸ್ಥೆ ನಾಂದಿ ಹಾಡಲಿದೆ ಎಂದರು.
ಉಪನ್ಯಾಸಕಿ ಧನ್ಯಶ್ರೀ ಸ್ವಾಗತಿಸಿದರು. ಸುದಾನ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಕ್ರಿಸ್ಟೋಫರ್ ಮಾಬೆನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ ಮತ್ತು ಬಳಗ ಪ್ರಾರ್ಥಿಸಿದರು. ಉಪನ್ಯಾಸಕಿ ರಮ್ಯಶ್ರೀ ವಂದಿಸಿದರು. ಉಪನ್ಯಾಸಕಿ ಕ್ಯಾರಲ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.
ಎಸೆಸ್ಸೆಲ್ಸಿ ಟಾಪರ್ಸ್ ಅಭಿನಂದನೆ..
ಪ್ರಥಮ ಪಿಯುಸಿಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಕಳೆದ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಸ್ಥಾನ ಪಡೆದ ಫಾತಿಮಾ ರಾಫಿಯಾ, ಅಕ್ಷಯ ರಾಮ, ಜಿಯಾ ಸ್ವೀಡಲ್ ಲಸ್ರಾದೋ, ಖದೀಜ ರಿಹಾ, ಸಲೋಮಿ ಡಿ’ಸೋಜ, ಸಂಯುಕ್ತ ರೈ, ಶೇಖ್ ಅಯಾನ್, ಶಿಫಾ ಪರ್ವೀನ್, ಶಿಝಾ ಅಝೀಜ್, ಶ್ರಾವಣಿ ಎಸ್.ಬಿ, ಸ್ವಸ್ತಿ ಶೆಟ್ಟಿ, ಸಂಹಿತಾ ಪಿ.ಬಿ, ಶಾಝ್ಮಾ ಸುಮಯ್ಯರವರುಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸೆಂಟರ್ ಆಫ್ ಎಕ್ಸಲೆನ್ಸ್..
ಬಾಸೆಲ್ ಮಿಶನ್ ರವರು 1901ರಲ್ಲಿಯೇ ಇಲ್ಲಿ ಪ್ರಾಥಮಿಕ ಹಾಗೂ ವೃತ್ತಿ ತರಬೇತಿ ಶಾಲೆಯನ್ನು ಆರಂಭಿಸಿ ಶಿಕ್ಷಣದ ಕ್ರಾಂತಿ ಉದಯವಾಗಿತ್ತು ಎಂಬ ಇತಿಹಾಸವಿದೆ. ಕಳೆದ 35 ವರ್ಷಗಳ ಹಿಂದೆ ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಿಕ್ಷಣವನ್ನು ನೀಡುತ್ತಾ ಬಂದಿದೆ. ಪ್ರಸ್ತುತ ಒಂದು ಹೆಜ್ಜೆ ಮುಂದೆ ಹೋಗಿ ಪಿಯು ಶಿಕ್ಷಣವನ್ನು ಆರಂಭಿಸಿದ್ದು ಉತ್ತಮ ಉಪನ್ಯಾಸಕ ವೃಂದವನ್ನು ಹೊಂದಿದೆ. ವಿದ್ಯಾರ್ಥಿಗಳು, ಪೋಷಕರು ಸಂಸ್ಥೆಯೊಂದಿಗೆ ಕೈಜೋಡಿಸಿದಾಗ ಸುದಾನ ಸೆಂಟರ್ ಆಫ್ ಎಕ್ಸಲೆನ್ಸ್ ಆಗುತ್ತದೆ.
-ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಸಂಚಾಲಕರು, ಸುದಾನ ಪದವಿ ಪೂರ್ವ ಕಾಲೇಜು
ಓರಿಯೆಂಟೇಶನ್ ಕಾರ್ಯಕ್ರಮ..
ಸಭಾ ಕಾರ್ಯಕ್ರಮದ ಬಳಿಕ ಸುದಾನ ಪದವಿ ಪೂರ್ವ ಕಾಲೇಜಿನ ಸಂಚಾಲಕ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ರವರು ‘ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಹೆತ್ತವರ ಪಾತ್ರ’ದ ಕುರಿತು ಹಾಗೂ ಪ್ರಾಂಶುಪಾಲ ಸುಪ್ರೀತ್ ರವರು ‘ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಇರಬೇಕಾದ ಚಿಂತನೆ ಹಾಗೂ ಕಾಲೇಜು ರೀತಿ-ನಿಯಮಗಳು’ ಕುರಿತು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಜರಗಿತು.