ವಿದ್ಯಾರ್ಥಿಗಳು ಯೋಗವನ್ನು ವಿಶ್ವಕ್ಕೆ ಪರಿಚಯ ಮಾಡುವಂತಾಗಬೇಕು: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಸೋಮವಾರದಿಂದ ಯೋಗ ತರಗತಿ ಪ್ರಾರಂಭಗೊಂಡಿತು. ಯೋಗ ತರಬೇತಿ ತರಗತಿಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಯೋಗದಿಂದ ಋಣಾತ್ಮಕ ಚಿಂತನೆಯನ್ನು ದೂರಮಾಡಿ ಧನಾತ್ಮಕ ಅಂಶಗಳನ್ನು ಹೆಚ್ವಿಸಿಕೊಳ್ಳಲು ಸಾಧ್ಯವಿದೆ. ದೇಹಕ್ಕೆ ಚೈತನ್ಯ ಶಕ್ತಿಯನ್ನು, ಮನಸ್ಸಿಗೆ ಪೂರ್ಣ ವಿಶ್ರಾಂತಿ ಸ್ಥಿತಿ ನೀಡಲು ಮಾತ್ರವಲ್ಲದೆ ದೈಹಿಕ ಆರೋಗ್ಯವನ್ನು ಕಾಪಾಡಲು, ಮಾನಸಿಕ ಆತಂಕವನ್ನು ದೂರ ಮಾಡಲು ಯೋಗ ಅನುಕೂಲಕರ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಯೋಗ ಶಿಕ್ಷಕಿಯರಾದ ಶರಾವತಿ ಹಾಗೂ ಆಶಾ ಉಪಸ್ಥಿತರಿದ್ದರು. ವಿದ್ಯಾಲಯದ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಮಾರಂಭದ ಬಳಿಕ ಯೋಗ ತರಗತಿಯನ್ನು ಪ್ರಾರಂಭಿಸಲಾಯಿತು.