ಬೆಟ್ಟಂಪಾಡಿ ಪಾಣಾಜೆ ನಿಡ್ಪಳ್ಳಿ ಬಿಜೆಪಿ ಶಕ್ತಿಕೇಂದ್ರದಿಂದ ವಿಜಯೋತ್ಸವ, ಕಾಲ್ನಡಿಗೆ ಜಾಥಾ

0

ಪುತ್ತೂರು: ದ.ಕ.ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟರವರು ಬಹುಮತದಿಂದ ಜಯಗಳಿಸಿದ ಬಗ್ಗೆ ಹಾಗೂ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಹಿನ್ನಲೆಯಲ್ಲಿ ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಕಾಲ್ನಡಿಗೆ ಜಾಥಾ ಹಾಗೂ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ನೇರಪ್ರಸಾರ ವೀಕ್ಷಣೆ ಕಾರ್ಯಕ್ರಮ ಬೆಟ್ಟಪಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.

ಜಾಥಾಕ್ಕೆ ಚಾಲನೆ:
ಇರ್ದೆ ವೃತ್ತದಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲರವರಿಗೆ ಬಿಜೆಪಿ ಧ್ವಜವನ್ನು ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು. ಇರ್ದೆ ವೃತ್ತದಿಂದ ರೆಂಜ ಪೇಟೆಯವವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ನ್ಯಾಯವಾದಿ ಮಂಜುನಾಥ್ ಎನ್.ಎಸ್.ರವರು ಸ್ವಾಗತಿಸಿ ಧ್ವಜ ಹಸ್ತಾಂತರಿಸಿದರು. ಚಂಡೆ ವಾದನ, ನಾಸಿಕ್ ಬ್ಯಾಂಡ್ ವಾದನ, ಕಾರ್ಯಕರ್ತರ ಜಯಘೋಷ, ಸುಡುಮದ್ದು ಪ್ರದರ್ಶನದೊಂದಿಗೆ ಕಾಲ್ನಡಿಗೆ ಜಾಥಾ ನಡೆಯಿತು.

ಸಭಾ ಕಾರ್ಯಕ್ರಮ:
ಕಾಲ್ನಡಿಗೆ ಜಾಥಾ ನಡೆದ ಬಳಿಕ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ. ಹಲವು ಕಾರ್ಯಕರ್ತರ ಶ್ರಮದಿಂದ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಹಾಗೂ ದೇಶದಲ್ಲಿ ಬಿಜೆಪಿ ಜಯಗಳಿಸಿದೆ. ಇದಕ್ಕಾಗಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಾತಿ ಆಧಾರದಲ್ಲಿ ಚುನಾವಣೆ ನಡೆಸಬೇಕೆಂಬ ಹಾಗೂ ಹಿಂದು ಧರ್ಮವನ್ನು ಮೆಟ್ಟಿ ನಿಂತು ಬಿಜೆಪಿಯನ್ನು ಸೋಲಿಸಬೇಕೆಂಬ ದೃಷ್ಟಿಯಿಂದ ಕಾಂಗ್ರೆಸ್ ಕೆಲಸ ಮಾಡಿದೆ. ಆದರೆ ಸನಾತನ ಧರ್ಮ ಈ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಾಗಿದೆ. ಈ ಕ್ಷೇತ್ರ ಧರ್ಮಾಧರಿತವಾದ ರಾಜಕಾರಣದ ಕ್ಷೇತ್ರ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. ನರೇಂದ್ರ ಮೋದಿಯವರ ಹಲವು ಕೆಲಸಕಾರ್ಯಗಳು, ಯೋಜನೆಗಳು ಮತ್ತೊಮ್ಮೆ ಪ್ರಧಾನಿಯಾಗಲು ಸಹಕಾರಿಯಾಗಿದೆ. ಮೋದಿಜಿಯವರ ಆಶಯಗಳು ತುಂಬಾ ಇದೆ. ಹಿಂದೂ ರಾಷ್ಟ್ರಸಂಕಲ್ಪ ಸಾಧ್ಯವಾಗಬೇಕು ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕೆಂಬ ಕಲ್ಪನೆಯಲ್ಲಿ ಇಂದು ಮೋದಿಯವರಿಂದ ಪ್ರಮಾಣ ವಚನ ಸ್ವೀಕಾರವಾಗಿದೆ ಎಂದರು. ಹಿಂದುಳಿದ ರಾಜ್ಯ ಮೋರ್ಚಾ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ ಮಾತನಾಡಿ ಭವ್ಯ ಭಾರತದ ನಿರ್ಮಾಣಕ್ಕೆ, ವಿಕಸಿತ ಭಾರತದ ಕಲ್ಪನೆಗೆ ಬಿಜೆಪಿಯನ್ನು ಗೆಲ್ಲಿಸಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ವಿಪಕ್ಷಗಳ ಕುತಂತ್ರದಿಂದ ಬಿಜೆಪಿಯ ಬಹುಮತಕ್ಕೆ ಧಕ್ಕೆಯಾಗಿದೆ. ಬಿಜೆಪಿ ನೇತೃತ್ವದ ಈ ಸರಕಾರ ಉತ್ತಮ ಆಡಳಿತ ನೀಡುತ್ತದೆ. ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸವನ್ನು ಬಿಜೆಪಿ ಯಾವತ್ತೂ ಮಾಡಿಲ್ಲ. ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವೇ ಸಂವಿಧಾನ ತಿದ್ದುಪಡಿ ಮಾಡಿದೆ. ರಾಷ್ಟ್ರ ಮೆಚ್ಚಿದ ಪ್ರಧಾನಿ ನರೇಂದ್ರಮೋದಿ ಶ್ರೀರಾಮನಿಗೆ ಭವ್ಯವಾದ ರಾಮಂದಿರ ನಿರ್ಮಾಣ ಮಾಡಿದ್ದಾರೆ. ದ.ಕ.ಲೋಕಸಭಾ ಕ್ಷೇತ್ರ ಹಿಂದುತ್ವದ ಭದ್ರಕೋಟೆಯಾಗಿದೆ. ಇದನ್ನು ನಾವು ಉಳಿಸಿಕೊಂಡಿದ್ದೇವೆ. ಹಿಂದೂವಿಗೆ ತೊಂದರೆಯಾದಾಗ ಅವರ ಬೆಂಬಲಕ್ಕೆ ಬಿಜೆಪಿ ನಿಲ್ಲುತ್ತದೆ. ರಾಜಕಾರಣದಲ್ಲಿ ವಿಶ್ವಾಸವಿಡಿ ಯೋಗಿ, ಅಣ್ಣಾಮಲೈ ಮತ್ತೊಮ್ಮೆ ವಿಜಯಿಯಾಗಿ ಬರುತ್ತಾರೆ. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.


ಭಜರಂಗದಳದ ಮುರಳಿಕೃಷ್ಣ ಹಸಂತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗತ್ತಿನ ಅತ್ಯಂತ ಶ್ರೇಷ್ಠ ದೇಶ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಪದಗ್ರಹಣದ ಪುಣ್ಯದ ಕ್ಷಣಗಳನ್ನು ನಾವೆಲ್ಲರೂ ಕಣ್ತುಂಬಿಕೊಳ್ಳುವ ಸಮಾರಂಭದಲ್ಲಿದ್ದೇವೆ. ಯಾರು ಏನೇ ಹೇಳಿದರೂ ಹಿಂದುತ್ವದ ಭದ್ರಕೋಟೆ ಮಾತ್ರವಲ್ಲ ಹಿಂದುತ್ವದ ಫ್ಯಾಕ್ಟರಿಯೂ ಹೌದು ಎಂದು ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ತ್ಯಾಗ ಬಲಿದಾನಗಳ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣವನ್ನು ಕಣ್ತುಂಬಿಕೊಂಡ ಪುಣ್ಯವಂತರು ನಾವು. ಈ ಪುಣ್ಯಕ್ಕೆ ಕಾರಣರು ನರೇಂದ್ರ ಮೋದಿಯಾಗಿದ್ದಾರೆ. 400 ವರ್ಷಗಳ ಕಾಲ ಮುಸ್ಲಿಮರು ನಮ್ಮ ದೇಶದಲ್ಲಿ ಆಕ್ರಮಣ ಮಾಡಿದರು. ಬ್ರಿಟೀಷರು ಸ್ವಾತಂತ್ರ್ಯವನ್ನು ಕಸಿದುಕೊಂಡರು. ಆದರೆ ಈ ದೇಶದ ಆಡಳಿತ ಮತ್ತೆ ನಮಗೆ ಬಂದಿದೆ. ನರೇಂದ್ರ ಮೋದಿ ಸರಕಾರ ರೈತರ ಬೆನ್ನಹಿಂದೆ ನಿಂತ ಸರಕಾರವಾಗಿದೆ. ಇಡೀ ಜಗತ್ತಿನ ವಿರೋಧಿಗಳು ಮೋದಿ ಈ ದೇಶದಲ್ಲಿ ಆಡಳಿತಕ್ಕೆ ಬರುವುದನ್ನು ತಡೆದರು. ಆದರೆ ಅದು ಯಾವುದೂ ಕೈಗೂಡಲಿಲ್ಲ. ಭಾರತ ಇಂದು ಹಳೆಯ ಇಂಡಿಯಾ ಆಗಿಲ್ಲ. ಸದೃಢ ಭಾರತವಾಗಿದೆ. ನಮ್ಮಸ್ಮಿತೆಯ ಸ್ವಾಭಿಮಾನದ ಸಂಕೇತವಾದ ದೇವಸ್ಥಾನ ಇಂದು ಸೌದಿ ಆರೇಬಿಯಾದಲ್ಲಿ ನಿರ್ಮಾಣಗೊಂಡಿದೆ ಈ ಮೂಲಕ ಭಾರತ ಬದಲಾಗಿದೆ ಎಂದರು.

ಬೆಟ್ಟಂಪಾಡಿ ಗ್ರಾಂ.ಪಂ. ಅಧ್ಯಕ್ಷೆ ವಿದ್ಯಾಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯ ಪ್ರಕಾಶ್ ರೈ ಬೈಲಾಡಿ, ಸಂದೀಪ್ ರೈ ಬಾಜುವಳ್ಳಿ, ಹೊನ್ನಪ್ಪ ಗೌಡ ಗುಮ್ಮಟೆಗದ್ದೆರವರು ಅತಿಥಿಗಳನ್ನು ಗೌರವಿಸಿದರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ರೈ ಬಾಲ್ಯೊಟ್ಟು ಪ್ರಾರ್ಥಿಸಿದರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ ವಂದಿಸಿ ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ಮೋದಿ ಪ್ರಮಾಣ ವಚನದ ನೆರಪ್ರಸಾರ ವೀಕ್ಷಣೆ
ಸಮಾರಂಭ ನಡೆದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರಪ್ರಸಾರ ವೀಕ್ಷಣೆ ನಡೆಯಿತು. ಎಲ್‌ಸಿಡಿ ಪರದೆ ಅಳವಡಿಸಲಾಗಿದ್ದು ಇದರ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.

LEAVE A REPLY

Please enter your comment!
Please enter your name here