ನಿವೃತ್ತಿ ಹೊಂದಿದ ಸರ್ವೆ ಕಲ್ಪಣೆ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿಯವರಿಗೆ ವಿದಾಯ ಸಮಾರಂಭ

0

ಪುತ್ತೂರು: ಕಳೆದ 10 ವರ್ಷಗಳಿಂದ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮೇ.31ರಂದು ಸೇವಾ ನಿವೃತ್ತಿ ಹೊಂದಿದ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯರಾಮ ಶೆಟ್ಟಿ ಕೆ ಅವರಿಗೆ ವಿದಾಯ ಸಮಾರಂಭ ಸರ್ವೆ ಕಲ್ಪಣೆ ಪ್ರೌಢ ಶಾಲೆಯಲ್ಲಿ ಜೂ.8ರಂದು ನಡೆಯಿತು.ಸಭಾ ಕಾರ್ಯಕ್ರಮವನ್ನು ಮುಂಡೂರು ಗ್ರಾ.ಪಂ ಸದಸ್ಯೆ ರಸಿಕಾ ರೈ ಮೇಗಿನಗುತ್ತು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.


ಶಿಕ್ಷಕರ ಪರವಾಗಿ ಸರ್ವೆ ಕಲ್ಪಣೆ ಪ್ರೌಢ ಶಾಲಾ ಶಿಕ್ಷಕ ಸಹದೇವ್ ಮಾತನಾಡಿ ಜಯರಾಮ ಶೆಟ್ಟಿಯವರ ನಿವೃತ್ತಿ ವಿಚಾರ ಬಹಳ ಬೇಸರ ತಂದಿದೆ, ಅವರೊಂದಿಗೆ ಶಾಲೆಯಲ್ಲಿ ನಾವು ಕಳೆದಿರುವ ದಿನಗಳು ಅವಿಸ್ಮರಣೀಯ, ಶಾಲೆಯನ್ನು ನೂರಕ್ಕೆ ನೂರು ಸ್ವಚ್ಛತೆಯಲ್ಲಿಡುವಂತೆ ಮಾಡುವಲ್ಲಿ ಜಯರಾಮ ಶೆಟ್ಟಿಯವರ ಪಾತ್ರ ಅಪಾರ ಎಂದರು. ಶಿಕ್ಷಕ ವೃಂದದವರಿಗೆ ಜಯರಾಮ ಶೆಟ್ಟಿ ಎಂದರೆ ಅಚ್ಚುಮೆಚ್ಚು. ಅವರ ಸರಳತೆ, ಸಮಯ ಪರಿಪಾಲನೆ, ಶಿಸ್ತು, ಶಾಲೆಯ ಮೇಲಿನ ಪ್ರೀತಿ ಇವೆಲ್ಲವೂ ಮಾದರಿಯಾಗಿದ್ದು ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವೂ ಮುನ್ನಡೆಯುತ್ತೇವೆ ಎಂದು ಹೇಳಿದರು.

ಶಿಕ್ಷಕ ವೃತ್ತಿ ಪವಿತ್ರ ವೃತ್ತಿ-ಶ್ರೀನಿವಾಸ್ ಎಚ್.ಬಿ
ನಿವೃತ್ತ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರ ವೃತ್ತಿ. ಶಿಕ್ಷಕರು ಯಾವತ್ತೂ ‘ಮಾಜಿ’ ಆಗುವುದಿಲ್ಲ ಎಂದು ಹೇಳಿದರು. ಸರ್ವೆ ಗ್ರಾಮದಲ್ಲಿ ಎಸ್‌ಜಿಎಂ ಪ್ರೌಢ ಶಾಲೆ ಮತ್ತು ಕಲ್ಪಣೆ ಪ್ರೌಢ ಶಾಲೆಯಿದ್ದು ನಾವು ಮತ್ತು ಜಯರಾಮ ಶೆಟ್ಟಿಯವರು ಬಹಳ ಅನ್ಯೋನ್ಯತೆಯಿಂದ ಇದ್ದೆವು. ಸರಕಾರಿ ವೃತ್ತಿಯಲ್ಲಿ ನಿವೃತ್ತಿ ಅನಿವಾರ್ಯ. ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವುದೆಂದರೆ ಅದು ಭಾಗ್ಯ, ಏಕೆಂದರೆ ಗ್ರಾಮದ ಜನತೆಯಿಂದ ಸಿಕ್ಕಿದ ಪ್ರೀತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಅವರು ಹೇಳಿದರು.

ವಿಟ್ಲ ಸರಕಾರಿ ಪ್ರೌಢ ಶಾಲಾ ಶಾಲಾ ಶಿಕ್ಷಕಿ ಅನ್ನಪೂರ್ಣ, ಮಣಿನಾಲ್ಕೂರು ಸರಕಾರಿ ಪ್ರೌಢ ಶಾಲಾ ಶಿಕ್ಷಕ ಉದಯ ಕುಮಾರ್ ಶೆಟ್ಟಿ, ಸವಣೂರು ಪ್ರೌಢ ಶಾಲಾ ಶಿಕ್ಷಕ ಮಾಮಚ್ಚನ್, ಇರ್ದೆ ಉಪ್ಪಳಿಗೆ ಶಾಲಾ ನಿವೃತ್ತ ಶಿಕ್ಷಕ ನಾರಾಯಣ್, ನಿವೃತ್ತ ಶಿಕ್ಷಕರಾದ ಬಿ.ವಿ ಶಗ್ರಿತ್ತಾಯ, ಮಹಾಬಲ ರೈ, ಚಂದ್ರಹಾಸ ರೈ, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು, ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ, ನಿವೃತ್ತ ಉಪನ್ಯಾಸಕರಾದ ಬಿ.ವಿ ಸೂರ್ಯನಾರಾಯಣ ಎಲಿಯ, ಚಂದ್ರಹಾಸ ರೈ, ನಿವೃತ್ತ ಶಿಕ್ಷಕ ರಮೇಶ್, ಸಹ ಶಿಕ್ಷಕ ಸಂಘದ ಅಧ್ಯಕ್ಷ ಅಬ್ರಹಂ ಮೊದಲಾದವರು ಮಾತನಾಡಿ ಜಯರಾಮ ಶೆಟ್ಟಿಯವರ ಗುಣಗಾನ ಮಾಡಿದರು.

ಉತ್ತಮ ಶಿಕ್ಷಕರಾಗಿದ್ದರು-ಸಿದ್ದೀಕ್ ಸುಲ್ತಾನ್
ಅಧ್ಯಕ್ಷತೆ ವಹಿಸಿದ್ದ ಸರ್ವೆ ಕಲ್ಪಣೆ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಮಾತನಾಡಿ ನಮ್ಮ ಶಾಲೆಯನ್ನು ಉತ್ತಮವಾಗಿ ಮುನ್ನಡೆಸಿ, ಒಬ್ಬ ಉತ್ತಮ ಶಿಕ್ಷಕರಾಗಿ, ಮಾರ್ಗದರ್ಶಕರಾಗಿದ್ದ ಜಯರಾಮ ಶೆಟ್ಟಿಯವರ ನಿವೃತ್ತ ಜೀವನ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ನೂರು ಶೇಕಡಾ ಫಲಿತಾಂಶ ಬರಲು ಕಾರಣಕರ್ತರಾದ ಜಯರಾಮ ಶೆಟ್ಟಿ ಹಾಗೂ ಶಿಕ್ಷಕ ಬಳಗಕ್ಕೆ ಅವರು ಅಭಿನಂದನೆ ಸಲ್ಲಿಸಿದರು.

ಶಿಕ್ಷಣ ಇಲಾಖೆಯಿಂದ ಸನ್ಮಾನ:
ಪುತ್ತೂರು ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಹಾಗೂ ಪುತ್ತೂರು ಮತ್ತು ಕಡಬ ತಾಲೂಕು ಸಹ ಶಿಕ್ಷಕರ ಸಂಘದ ವತಿಯಿಂದ ಜಯರಾಮ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದಾಯ ಸನ್ಮಾನ:
ಜಯರಾಮ ಶೆಟ್ಟಿ ಕೆ ಹಾಗೂ ಪತ್ನಿ ಅನುರಾಧ ಅವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಜಯರಾಮ ಶೆಟ್ಟಿಯವರಿಗೆ ಹಾರ ಹಾಕಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಎಲ್ಲರ ಸಹಕಾರ ಸಿಕ್ಕಿದೆ-ಜಯರಾಮ ಶೆಟ್ಟಿ
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಜಯರಾಮ ಶೆಟ್ಟಿ ಕೆ ಮಾತನಾಡಿ ಸರ್ವೆ ಕಲ್ಪಣೆ ಪ್ರೌಢ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ನಾನು ಮುಖ್ಯ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ಅವಧಿಯಲ್ಲಿ ಶಿಕ್ಷಕ ವೃಂದದವರ, ಎಸ್‌ಡಿಎಂಸಿಯವರ, ಶಿಕ್ಷಣ ಇಲಾಖೆಯ, ಊರವರ ಹಾಗೂ ಜನಪ್ರತಿನಿಧಿಗಳ ಸಂಪೂರ್ಣ ಸಹಕಾರ ಸಿಕ್ಕಿದೆ. ಎಲ್ಲರ ಸಹಕಾರದ ಫಲವಾಗಿ ಶಾಲೆಯೂ ಅಭಿವೃದ್ಧಿಯಾಗಿದೆ, ಹಾಗಾಗಿ ಸಂತೃಪ್ತಿಯಿಂದಲೇ ನಾನು ನಿವೃತ್ತನಾಗುತ್ತಿದ್ದೇನೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 500ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಐವರು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಫಾತಿಮತ್ ಹುಸ್ನ ರೆಂಜಲಾಡಿ, ಆಯಿಷತುಲ್ ನುಸ್ರತ್ ನೇರೋಳ್ತಡ್ಕ, ಶಿರ್ಮಾ ಫಾತಿಮ ಸೊರಕೆ, ಫಾತಿಮತ್ ಮುಬಶ್ಶಿರ ಕೂಡುರಸ್ತೆ ಹಾಗೂ ಆಯಿಷತುಲ್ ಹಾಫಿಲ ಬಾಳಾಯ ಸನ್ಮಾನ ಸ್ವೀಕರಿಸಿದರು.

ಸರ್ವೆ ಕಲ್ಪಣೆ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ನಿವೃತ್ತ ಮುಖ್ಯ ಶಿಕ್ಷಕ ಬಿ.ಕೆ ಭಂಡಾರಿ,
ಶಾಲಾ ಎಸ್‌ಡಿಎಂಸಿ ಸದಸ್ಯ ಅಝೀಝ್ ರೆಂಜಲಾಡಿ, ರೆಂಜಲಾಡಿ ಮಸೀದಿಯ ಕಾರ್ಯದರ್ಶಿ ಝೈನುದ್ದೀನ್ ಜೆ.ಎಸ್, ಜಯರಾಮ ಶೆಟ್ಟಿಯವರ ಪತ್ನಿ ಅನುರಾಧ, ಪುತ್ರ ಅಶ್ವಿಜ್ ಶೆಟ್ಟಿ, ಸಹೋದರರಾದ ಡಾ.ಗಂಗಾಧರ ಶೆಟ್ಟಿ, ಡಾ.ರಾಜಾರಾಮ ಶೆಟ್ಟಿ, ಬಾವ ಗಂಗಾಧರ್ ಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ವೆಂಕಟೇಶ್ ಬಿ ಸನ್ಮಾನ ಪತ್ರ ವಾಚಿಸಿದರು. ಪ್ರಭಾರ ಮುಖ್ಯಗುರು ಉಮೇರಾ ತಬಸ್ಸಂ ಸ್ವಾಗತಿಸಿದರು. ಶಿಕ್ಷಕಿ ಕಾಂಚನ ವಂದಿಸಿದರು. ಶಿಕ್ಷಕ ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿಯರಾದ ಹರ್ಷಿತಾ, ಕಮಲ, ಪ್ರಥಮ ದರ್ಜೆ ಸಹಾಯಕಿ ಜ್ಯೋತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳು, ಊರವರು, ಹಿರಿಯ ವಿದ್ಯಾರ್ಥಿಗಳು, ಜಯರಾಮ ಶೆಟ್ಟಿಯವರ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.

ಮಾದರಿ ಶಿಕ್ಷಕ ಜಯರಾಮ ಶೆಟ್ಟಿ-ಗಣ್ಯರಿಂದ ಗುಣಗಾನ
ಭಾಷಣ ಮಾಡಿದ ಗಣ್ಯರೆಲ್ಲರೂ ಜಯರಾಮ ಶೆಟ್ಟಿ ಕೆ ಅವರ ಸರಳತೆಯ ಬಗ್ಗೆ ಗುಣಗಾನ ಮಾಡಿದರು. ಸದಾ ನಗುಮುಖ, ಶಾಂತ ಸ್ವಭಾವದ ಜೊತೆ ಸರಳತೆಯಿಂದ ಇರುತ್ತಿದ್ದುದೇ ಅವರ ಯಶಸ್ಸಿನ ಗುಟ್ಟು ಎಂದು ಗಣ್ಯರು ಹೇಳಿದರು. ತಮ್ಮ ಕರ್ತವ್ಯದ ಅವಧಿಯಲ್ಲಿ ಅತ್ಯಂತ ಶ್ರದ್ದೆಯಿಂದ ಕೆಲಸ ನಿರ್ವಹಿಸುತ್ತಿದ್ದ ಜಯರಾಮ ಶೆಟ್ಟಿವರು ಶಿಕ್ಷಣ ಇಲಾಖೆಯಲ್ಲೂ ಉತ್ತಮ ಹೆಸರು ಪಡೆದಿದ್ದರು. ಅವರ ಸಾಧನೆಯ ಕಾರಣಕ್ಕೆ ಅವರಿಗೆ ಜಿಲ್ಲಾ ಪ್ರಶಸ್ತಿಯೂ ಲಭಿಸಿದೆ ಎಂದು ಗಣ್ಯರು ಹೇಳಿದರು. ಶಿಕ್ಷಕ ಕ್ಷೇತ್ರದ ಸುಧೀರ್ಘ 37 ವರ್ಷಗಳ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕಾರ್ಯ ನಿರ್ವಹಿಸಿ ಸಂತೃಪ್ತಿಯಿಂದ ನಿವೃತ್ತಿಯಾಗುತ್ತಿರುವ ಜಯರಾಮ ಶೆಟ್ಟಿ ಕೆ ಅವರು ಶಿಕ್ಷಕ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದು ಅತಿಥಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಭವ್ಯ ಮೆರವಣಿಗೆ:
ಜಯರಾಮ ಶೆಟ್ಟಿ ಅವರನ್ನು ಭವ್ಯ ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆ ತರಲಾಯಿತು. ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಗಣ್ಯರು, ಊರವರು, ಶಿಕ್ಷಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

LEAVE A REPLY

Please enter your comment!
Please enter your name here