ಪುತ್ತೂರು: ಕಳೆದ ಹಲವು ದಿನಗಳಿಂದ ಸುಳ್ಯ, ಕಡಬ ಹಾಗೂ ಪುತ್ತೂರಿನ ವಿವಿಧ ಕಡೆಗಳಿಗೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡುವುದರ ಜತೆಗೆ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿರುವ ಕಾಡಾನೆಗಳೆರಡು ಶಾಂತಿಗೋಡಿನಿಂದ ಬೆಳ್ಳಿಪ್ಪಾಡಿ ಕೊಡಿಮರ ಬಾರ್ತೋಳಿಗೆ ಬಂದು ಅಂದ್ರಗೇರಿಯಲ್ಲಿದ್ದ ಕಾಡಾನೆ ಮತ್ತೆ ಬಾರ್ತೋಳಿ ಮೂಲಕ ಶಾಂತಿಗೋಡಿಗೆ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರಂಭದಲ್ಲಿ ಒಂದು ಕಾಡಾನೆ ಎಂದು ಹೇಳಲಾಗುತ್ತಿದ್ದರೂ ಬೆಳ್ಳಿಪ್ಪಾಡಿ ಕೊಡಿಮರದಲ್ಲಿ ಎರಡು ಕಾಡಾನೆ ಇರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಎರಡು ಕಾಡಾನೆ ಇರುವುದು ಖಚಿತ ಪಡಿಸಲಾಗಿತ್ತು. ಅರಣ್ಯ ಇಲಾಖೆಯವರು, ಕುಶಾಲನಗರದ ದುಬಾರೆಯ ಆನೆ ಸಲಹಾ ಮತ್ತು ತರಬೇತಿ ಕೇಂದ್ರದಿಂದ ತಂಡ ಆಗಮಿಸಿ ಆನೆಯನ್ನು ಬಂದ ದಾರಿಗೆ ಹೋಗುವಂತೆ ಕಾರ್ಯಾಚರಣೆ ನಡೆಸಿದ್ದಾರೆ. ಹಾಗಾಗಿ ಆನೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮತ್ತೆ ಕೊಡಿಮರದ ಬಾರ್ತೋಳಿ ಮೂಲಕ ಶಾಂತಿಗೋಡಿಗೆ ತೆರಳಿದೆ ಎಂದು ಊರವರಿಂದ ಮಾಹಿತಿ ಲಭ್ಯವಾಗಿದೆ.