ಉದ್ಯಮಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ ಹೃದಯಾಘಾತದಿಂದ ನಿಧನ

0

ಪುತ್ತೂರು: ಉದ್ಯಮಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ (45.ವ) ಅವರು ಹೃದಯಾಘಾತದಿಂದ ಜೂ.11ರಂದು ಸಂಜೆ ನಿಧನರಾದರು. ಪ್ರತಿದಿನ ಸಂಜೆ ಪುರುಷರಕಟ್ಟೆಯಲ್ಲಿ ಯುವಕರು ವಾಲಿಬಾಲ್ ಆಡುತ್ತಿದ್ದು ಅದರಲ್ಲಿ ಪ್ರಕಾಶ್ ಕೂಡಾ ಆಡುತ್ತಿದ್ದರು. ಜೂ.11ರಂದು ಸಂಜೆ ಗೆಳೆಯರ ಜೊತೆ ವಾಲಿಬಾಲ್ ಪಂದ್ಯ ಆಡಿದ್ದ ಪ್ರಕಾಶ್ ಅವರು ಕೊನೆಯ ಪಂದ್ಯ ಆಡಿರಲಿಲ್ಲ. ನನಗೆ ಹೊಟ್ಟೆ ನೋವು ತರ ಆಗುತ್ತಿದ್ದು ಗ್ಯಾಸ್ಟ್ರಿಕ್ ಸಮಸ್ಯೆ ಆಗಿರಬಹುದು ಎಂದು ಗೆಳೆಯರ ಬಳಿ ಹೇಳಿಕೊಂಡಿದ್ದ ಅವರು ಅಲ್ಲಿಂದ ಪುರುಷರಕಟ್ಟೆಯ ಮೆಡಿಕಲ್ ಶಾಪ್‌ಗೆ ಹೋಗಿ ಔಷಧಿ ತೆಗೆದುಕೊಂಡು ಮನೆಗೆ ಹೋಗಿದ್ದರು. ಮನೆಗೆ ಹೋಲ ಕೆಲ ಹೊತ್ತಲ್ಲೇ ಪ್ರಕಾಶ್ ಅವರು ಕುಸಿದು ಬಿದ್ದಿದ್ದಾರೆ. ವಿಷಯ ತಿಳಿದು ತಕ್ಷಣವೇ ಆಲ್ಲಿಗೆ ಆಗಮಿಸಿದ ಸ್ಥಳಿಯರಾದ ಸಲೀಂ ಪಾಪು, ಜಮಾಲ್ ಪುರುಷರಕಟ್ಟೆ ಹಾಗೂ ಸಮದ್ ಪುರುಷರಕಟ್ಟೆ ಅವರು ಕೂಡಲೇ ಅವರನ್ನು ಕಾರಿನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.

ಪುತ್ತೂರು, ಪುರುಷರಕಟ್ಟೆ ಪರಿಸರದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದ ಪ್ರಕಾಶ್ ಅವರು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರಲ್ಲದೇ ಎಲ್ಲರಿಂದಲೂ ಪ್ರಕಾಶಣ್ಣ ಎಂದೇ ಕರೆಯಲ್ಪಡುತ್ತಿದ್ದರು. ಟೈಬ್ರೇಕರ‍್ಸ್ ಪುರುಷರಕಟ್ಟೆ ಬಳಗವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಕಾಶ್ ಕೂಡಾ ಒಬ್ಬರಾಗಿದ್ದರು. ಒಂದು ಕಾಲದಲ್ಲಿ ಹೆಸರಾಂತ ಕ್ರಿಕೆಟ್ ಪಟು ಆಗಿದ್ದ ಅವರು ವಾಲಿಬಾಲ್ ಪಟುವೂ ಆಗಿದ್ದರು. ಉತ್ತಮ ಸಂಘಟಕರಾಗಿದ್ದ ಅವರು ತಾವು ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಸೌಹಾರ್ದತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು.

ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು:
ಪ್ರಕಾಶ್ ಅವರು ಪ್ರಸ್ತುತ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ವರ್ಷ ಅಶೋಕ್ ಕುಮಾರ್ ರೈ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ಪಕ್ಷಕ್ಕಾಗಿ ರಾತ್ರಿ ಹಗಲು ಕೆಲಸ ಮಾಡಿದವರಲ್ಲಿ ಪ್ರಕಾಶ್ ಕೂಡಾ ಒಬ್ಬರಾಗಿದ್ದರು.

ಟಿಪಿಎಲ್ ಪಂದ್ಯ ಆಯೋಜಿಸಿದ್ದರು:
ಪ್ರಕಾಶ್ ಪುರುಷರಕಟ್ಟೆ ನೇತೃತ್ವದಲ್ಲಿ ಕೆಲವೇ ತಿಂಗಳ ಹಿಂದೆ ನರಿಮೊಗರು ಐಟಿಐ ಮೈದಾನದಲ್ಲಿ ಹಗಲು-ರಾತ್ರಿ ಟೈಬ್ರೇಕರ‍್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಆಯೋಜನೆಗೊಂಡಿತ್ತು. ಎರಡು ದಿನ ನಡೆದ ಲೀಗ್ ಮಾದರಿಯ ಪಂದ್ಯಾಟ ತಾಲೂಕಿನಲ್ಲೇ ಬಹಳಷ್ಟು ಸದ್ದು ಮಾಡಿತ್ತು. ಆಟಗಾರರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ಟ್ರೋಫಿ ನೀಡುವ ಬದಲು ಅಕ್ಕಿ ನೀಡುವ ಮೂಲಕ ಗಮನ ಸೆಳೆದಿದ್ದರು. ಮುಂದಿನ ವರ್ಷ ಇದಕ್ಕಿಂತಲೂ ಅದ್ದೂರಿಯಾಗಿ ಪಂದ್ಯಾಟ ಏರ್ಪಡಿಸುವುದಾಗಿ ಆ ಸಂದರ್ಭದಲ್ಲಿ ಪ್ರಕಾಶ್ ಹೇಳಿದ್ದರು. ಆದರೆ ವಿಧಿಯಾಟ ಮಾತ್ರ ಬೇರೆಯೇ ಆಗಿದೆ.

ಸಾಮರಸ್ಯದ ಭಾಷಣ ವೈರಲ್:
ಪ್ರಕಾಶ್ ಅವರ ನಿಧನನ ಸುದ್ದಿ ಹಬ್ಬುತ್ತಿದ್ದಂತೆ ಅವರು ಇತ್ತೀಚೆಗೆ ನರಿಮೊಗರಿನ ಕ್ರೀಡಾಕೂಟದಲ್ಲಿ ಮಾಡಿರುವ ಭಾಷಣದ ವಿಡಿಯೋ ವೈರಲ್ ಆಗಿದೆ. ‘ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವವಿಲ್ಲದೇ ಎಲ್ಲರೂ ಸೇರಿಕೊಂಡು ಒಂದೇ ತಾಯಿಯ ಮಕ್ಕಳಂತೆ ನಾವೆಲ್ಲರೂ ಮುಂದುವರಿಯೋಣ ಎಂದು ಹೇಳುವ ಅವರ ಭಾಷಣದ ವಿಡಿಯೋ ವೈರಲ್ ಆಗಿದ್ದು ಅದನ್ನು ನೂರಾರು ಮಂದಿ ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾರೆ.

ಐಪಿಎಲ್ ಮಾದರಿಯ ಪಂದ್ಯಾಟವನ್ನು ತಾಲೂಕಿಗೆ ಪರಿಚಯಿಸಿದ್ದರು:
ಐಪಿಎಲ್ ಮಾದರಿಯ ಲೀಗ್ ಮ್ಯಾಚ್ ಕ್ರಿಕೆಟ್ ಪಂದ್ಯಾಟವನ್ನು ಪುತ್ತೂರಿಗೆ ಪರಿಚಯಿಸಿದ ಹೆಗ್ಗಳಿಕೆಗೆ ಪ್ರಕಾಶ್ ಪುರುಷರಕಟ್ಟೆ ಪಾತ್ರರಾಗಿದ್ದರು. ಆಟಗಾರರನ್ನು ಬಿಡ್ಡಿಂಗ್ ಮಾದರಿಯಲ್ಲಿ ತಂಡಗಳು ಖರೀದಿಸಿ ಐಪಿಎಲ್ ಮಾದರಿಯಲ್ಲೇ ಗ್ರಾಮಾಂತರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯಾಟ ಸಂಘಟಿಸಿದ್ದ ಪ್ರಕಾಶ್‌ರವರು ಓರ್ವ ಯಶಸ್ವೀ ಕ್ರೀಡಾ ಸಂಘಟಕರಾಗಿ ಗುರುತಿಸಿಕೊಂಡಿದ್ದರು.

ಶಾಸಕ ಅಶೋಕ್ ರೈ ಸಂತಾಪ:
ಪ್ರಕಾಶ್ ಪುರುಷರಕಟ್ಟೆ ನಿಧನಕ್ಕೆ ಶಾಸಕ ಅಶೋಕ್ ಕುಮಾರ್ ರೈ ಸಂತಾಪ ವ್ಯಕ್ತಪಡಿಸಿದ್ದಾರೆ. ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪ್ರಕಾಶ್ ಅವರ ಅಗಲುವಿಕೆಯ ವಿಷಯ ಕೇಳಿ ನಾನು ಬಹಳ ದುಖಿತನಾಗಿದ್ದೇನೆ. ಓರ್ವ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟಿಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಅವರು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಅವರ ಅಗಲುವಿಕೆ ನಮಗೆಲ್ಲಾ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನುಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಅವರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು:
ಅಪಾರ ಗೆಳೆಯ ಬಳಗವನು ಹೊಂದಿದ್ದ ಪ್ರಕಾಶ್ ಅವರು ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುತ್ತಿದ್ದ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತನ್ನ ಹೆಸರಿನ ಮುಂದೆ(೦+ve) ಎಂದು ಹಾಕುವ ಮೂಲಕ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು.

ನೂರಾರು ಮಂದಿಯಿಂದ ಅಂತಿಮ ದರ್ಶನ:
ಮಹಾವೀರ ಆಸ್ಪತ್ರೆಯಲ್ಲಿ ಮೃತದೇಹವನ್ನು ಇಡಲಾಗಿತ್ತು. ಅಲ್ಲಿಗೆ ಸಾಮಾಜಿಕ, ರಾಜಕೀಯ ಮುಖಂಡರು ಸೇರಿದಂತೆ ನೂರಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು. ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ದಾಗ ಅಲ್ಲಿಗೂ ನೂರಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು.

ಪ್ರಕಾಶ್ ಅವರು ಪುತ್ತೂರು ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿ ‘ಇಫಾ’ ಹೆಸರಿನ ಮೊಬೈಲ್ ಅಂಗಡಿ ಹೊಂದಿದ್ದರು. ಮೊದಲಿಗೆ ವಿಟ್ಲದಲ್ಲಿ ಮೊಬೈಲ್ ಶಾಪ್ ಪ್ರಾರಂಭಿಸಿದ ಅವರು ಬಳಿಕ ಅದರ ಶಾಖೆಗಳನ್ನು ತಾಲೂಕಿನಾದ್ಯಂತ ವಿಸ್ತರಿಸಿದ್ದರು. ಪ್ರಕಾಶ್ ಅವರ ತಮ್ಮ ಸತೀಶ್ ಪುರುಷರಕಟ್ಟೆ ಅವರೂ ಮೊಬೈಲ್ ಶಾಪ್ ಹೊಂದಿದ್ದು ಅಣ್ಣ-ತಮ್ಮ ಇಬ್ಬರೂ ಕೂಡಾ ಯಶಸ್ವೀ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದರು.
ಮೃತ ಪ್ರಕಾಶ್ ಅವರು ತಾಯಿ ಯಮುನಾ, ಪತ್ನಿ ಅಶ್ವಿನಿ, ಪುತ್ರಿ ತನ್ವಿ, ತಮ್ಮ ಸತೀಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here